Advertisement

ಆ್ಯತ್ಲೆಟಿಕ್ಸ್‌ಗೆ ಅಶ್ವಿ‌ನಿ ಅಕ್ಕುಂಜೆ ವಿದಾಯ

11:36 AM Mar 03, 2017 | Harsha Rao |

ಉದಯವಾಣಿಗೆ ಅಚ್ಚರಿಯ ಮಾಹಿತಿ ನೀಡಿದ ಅಶ್ವಿ‌ನಿ
– 2019ರ ಅನಂತರ ಪ್ರತಿಭಾವಂತ ಓಟಗಾರ್ತಿಯಿಂದ ಬೂಟು ಕಳಚಿಡುವ ನಿರ್ಧಾರ
– ಕಾಮನ್ವೆಲ್ತ್‌, ಏಶ್ಯಾಡ್‌ ಚಿನ್ನದ ಸಾಧಕಿಗೆ ಮುಂದಿನ ಕಾಮನ್ವೆಲ್ತ್‌, ಏಶ್ಯಾಡ್‌ ಕೊನೆ ಸ್ಪರ್ಧೆ

Advertisement

ಬೆಂಗಳೂರು: ಕಾಮನ್‌ವೆಲ್ತ್‌, ಏಶ್ಯಾಡ್‌ಗಳಲ್ಲಿ ಚಿನ್ನ ಗೆದ್ದು ಶ್ರೇಷ್ಠ ಸಾಧನೆ ಮಾಡಿರುವ ರಾಜ್ಯದ ಖ್ಯಾತ ಆ್ಯತ್ಲೀಟ್‌ ಅಶ್ವಿ‌ನಿ ಅಕ್ಕುಂಜೆ 2019ರ ಅನಂತರ ತಮ್ಮ ಕ್ರೀಡಾ ಜೀವನಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. 2018ರಲ್ಲಿ ನಡೆಯಲಿರುವ ಏಶ್ಯಾಡ್‌ ಗೇಮ್ಸ್‌ ಹಾಗೂ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಕೊನೆಯದಾಗಿ ದೇಶವನ್ನು ಪ್ರತಿನಿಧಿಸಲು ಸಿದ್ಧಳಿದ್ದೇನೆ ಎಂದು ಉದಯವಾಣಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪ್ರಕಟಿಸಿದ್ದಾರೆ.

ಪಟಿಯಾಲದಿಂದ ಪತ್ರಿಕೆಗೆ ಸುದೀರ್ಘ‌ ದೂರವಾಣಿ ಸಂದರ್ಶನ ನೀಡಿದ ಅಶ್ವಿ‌ನಿ ತಮ್ಮ ಜೀವನದ ಹಲವು ಸೂಕ್ಷ್ಮ ಸಂಗತಿಗಳ ಕುರಿತು ಮಾತನಾಡಿದರು. 16 ವರ್ಷದ ಕ್ರೀಡಾಜೀವನ, ಸಾರ್ಥಕತೆ, ಅಪಮಾನ, ಸಮ್ಮಾನ, ಗೆದ್ದ ಸಂತಸದ ಕ್ಷಣಗಳನ್ನು ನೆನಪಿಸಿಕೊಂಡರು. ಎಲ್ಲ ವಿಷಯಗಳ ಬಗ್ಗೆ ಮಾತನಾಡುತ್ತ ಹೋದ ಅವರು ಕೊನೆಗೆ ಮುಂದಿನ 2 ಕೂಟಗಳಷ್ಟೇ ನನ್ನ ಮುಂದೆ ಉಳಿದಿದೆ ಎಂದು ಪ್ರಕಟಿಸಿ ಅಚ್ಚರಿ ಹುಟ್ಟಿಸಿದರು.

2019ರ ಬಳಿಕ ಟ್ರ್ಯಾಕ್‌ ಸ್ಪರ್ಧೆ ಗಳಿಂದ ಅಧಿಕೃತವಾಗಿ ಹಿಂದಕ್ಕೆ ಸರಿಯಲಿದ್ದೇನೆ. ದೇಶವನ್ನು ಹಲವು ಕೂಟಗಳಲ್ಲಿ ಪ್ರತಿನಿಧಿಸಿದ್ದೇನೆ. 16 ವರ್ಷಗಳ ಕಾಲ ದೇಶ ಪ್ರತಿನಿಧಿಸಿರುವ ಹೆಮ್ಮೆ ಇದೆ. ಮನೆ, ಊರು, ಹೆತ್ತವರು, ನೆಂಟರು, ಬಂಧು ಬಳಗ ಎಲ್ಲರಿಂದಲೂ ದೂರವಾಗಿದ್ದೆ. ಇನ್ನು ಮುಂದೆ ಕೆಲವು ಕ್ಷಣಗಳನ್ನು ನನ್ನವರೊಂದಿಗೆ ಕಳೆಯಬೇಕೆಂದಿರುವೆ. ನಾನು ಪದಕ ಗೆದ್ದಾಗ ಜನರು ಬೆಂಬಲ ನೀಡಿದರು. ಕಳಂಕ ಅಂಟಿಕೊಂಡಾಗಲೂ ನನ್ನ ಮೇಲಿನ ನಂಬಿಕೆಯನ್ನು ಜನ ಕಳೆದುಕೊಳ್ಳಲಿಲ್ಲ. ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದೆ. ನನ್ನ ಪರವಾಗಿ ಜನ ನಿಂತರು. ಕಾಲ ಎಲ್ಲವನ್ನು ಮರೆಸಿತು. ಬದುಕು ಹಲವು ಪಾಠ ಕಲಿಸಿತು ಎಂದು ತಿಳಿಸಿದರು.

ಕ್ರೀಡೆ ನಂಟು ಬಿಡಲ್ಲ: ನಿವೃತ್ತಿ ಬಳಿಕ ಯುವ ಪೀಳಿಗೆಗೆ ತರಬೇತಿ ನೀಡಿ ಆ್ಯತ್ಲೀಟ್‌ಗಳಾಗಿ ತಯಾರಿ ಮಾಡುವ ಗುರಿಯನ್ನು ಅಶ್ವಿ‌ನಿ ಇರಿಸಿಕೊಂಡಿದ್ದಾರೆ. ಇದಕ್ಕಾಗಿ ರಾಜ್ಯ ಸರಕಾರದ ಬೆಂಬಲವನ್ನು ಅಶ್ವಿ‌ನಿ ಕೇಳಿಕೊಂಡಿದ್ದಾರೆ. ರಾಜ್ಯ ಯುವ ಸಶಕ್ತೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಕನಸು ಇದೆ. ಸರಕಾರ ಏನಾದರೂ ಜವಾಬ್ದಾರಿ ನೀಡಿದರೆ ಸೂಕ್ತವಾಗಿ ನಿಭಾಯಿಸುತ್ತೇನೆ. ಆ್ಯತ್ಲೀಟ್‌ಗಳ ಸಮಸ್ಯೆಯನ್ನು  ಆಲಿಸುವುದು, ಕುಂದುಕೊರತೆಗಳನ್ನು ನಿಭಾಯಿಸುವುದು, ಕೋಚ್‌ಗಳ ಸಮಸ್ಯೆಗೆ ಪರಿಹಾರ ಇನ್ನಿತರ ಕ್ರೀಡಾಪಟುಗಳ ನೋವುನಲಿವುಗಳಿಗೆ ಜತೆಯಾಗಿರಲು ಬಯಸುತ್ತೇನೆ ಎಂದು ತಿಳಿಸಿದರು.

Advertisement

ಈಗ ಪದಕ ಗೆಲ್ಲುವ ಶಕ್ತಿಯಿಲ್ಲ!
ಭಾರತದ ಪ್ರತಿಭಾವಂತ ಓಟಗಾರ್ತಿಯಾಗಿರುವ ಅಶ್ವಿ‌ನಿ ತಮ್ಮ ಕ್ರೀಡಾ ಜೀವನಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಉದ್ದೀಪನದಂತಹ ಕೆಲವು ಅಡೆತಡೆಗಳು ಕಾಡದಿದ್ದರೆ ಅವರಿಂದ ಇನ್ನೂ ಶ್ರೇಷ್ಠ ಸಾಧನೆಗಳು ಸಾಧ್ಯವಾಗುತ್ತಿತ್ತು ಎನ್ನುವುದರಲ್ಲಿ ಸಂಶಯವೇ ಇಲ್ಲ. ಇದೀಗ ಅವರಿಗೆ ಇನ್ನು ತಮ್ಮಲ್ಲಿ ಪದಕ ಗೆಲ್ಲುವ ಶಕ್ತಿ ಕುಂದಿದೆ ಎನಿಸಿದೆ. ಆದ್ದರಿಂದ ವಿದಾಯ ಹೇಳಿ ಹೊಸಬರಿಗೆ ದಾರಿ ಮಾಡಿಕೊಡುವ ಯೋಚನೆ ಮಾಡಿದ್ದಾರೆ. ಸದ್ಯಕ್ಕೆ ನನಗೆ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇಹ ಸ್ಪಂದಿಸುತ್ತಿಲ್ಲ, ಇದೆಲ್ಲವನ್ನು ಯೋಚಿಸಿಯೇ ಬೂಟು ಕಳಚಿಡುವ ನಿರ್ಧಾರಕ್ಕೆ ಬಂದಿದ್ದೇನೆಂದು ಅಶ್ವಿ‌ನಿ ಹೇಳುತ್ತಾರೆ.

ಉದ್ದೀಪನ ನಿಷೇಧದ ಬೇಸರ ಕಾರಣವಲ್ಲ
2011ರಲ್ಲಿ ಅಶ್ವಿ‌ನಿ ಉದ್ದೀಪನ ಸೇವನೆ ಪ್ರಕರಣದಲ್ಲಿ ನಿಷೇಧಕ್ಕೊಳಗಾಗಿದ್ದರು. ಅದರಿಂದ ಅವರು 2012ರ ಒಲಿಂಪಿಕ್ಸ್‌
ನಲ್ಲಿ ಪಾಲ್ಗೊಳ್ಳುವ ಅವಕಾಶವನ್ನೇ ತಪ್ಪಿಸಿಕೊಂಡಿದ್ದರು. ಅದರಿಂದ ಅವರು ತೀವ್ರ ಆಘಾತಕ್ಕೊಳಗಾಗಿದ್ದರು. ಅಲ್ಲಿಂದ ಮುಂದೆ ಅವರು ತಮ್ಮ ಹಿಂದಿನ ಶ್ರೇಷ್ಠ ಪ್ರದರ್ಶನವನ್ನು ತೋರಿಸಲು ಸಾಧ್ಯವಾಗಲಿಲ್ಲ. ಆದರೆ ಈ ಉದ್ದೀಪನ ನಿಷೇಧದ ಬೇಸರ ತಮ್ಮ ನಿವೃತ್ತಿಗೆ ಕಾರಣವಲ್ಲ ಎಂದು ಅಶ್ವಿ‌ನಿ ಸ್ಪಷ್ಟಪಡಿಸಿದ್ದಾರೆ.

ಏನಿದು ಉದ್ದೀಪನ ಪ್ರಕರಣ?
2011ರ ಏಶ್ಯನ್‌ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ವೇಳೆ ಅಶ್ವಿ‌ನಿ ಉದ್ದೀಪನ ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ಅನಾಬೊಲಿಕ್‌ ಎಂಬ ನಿಷೇಧಿತ ಸ್ಟೆರಾಯ್ಡ ಸೇವಿಸಿದ್ದರಿಂದ ಅಶ್ವಿ‌ನಿಯನ್ನೂ ಸೇರಿ 4×400 ಮೀ. ರಿಲೇ ತಂಡದ ಸದಸ್ಯರಾದ ಮನ್‌ದೀಪ್‌ ಕೌರ್‌, ಸಿನಿ ಜೋಸ್‌, ಜೌನಾ ಮರ್ಮು, ಮೇರಿ, ಪ್ರಿಯಾಂಕಾ ಪನ್ವರ್‌ರನ್ನು 2 ವರ್ಷ ಅಮಾನತು ಮಾಡಲಾಯಿತು. ಬಳಿಕ ಮತ್ತೆ ಟ್ರ್ಯಾಕ್‌ ಸ್ಪರ್ಧೆಗೆ ಮರಳಿದರು. ಅಷ್ಟರಲ್ಲೇ ಅವರು 2012ರ ಒಲಿಂಪಿಕ್ಸ್‌ ಕಳೆದುಕೊಂಡು ಆಘಾತಕ್ಕೊಳಗಾದರು. ಎಲ್ಲ ರೀತಿಯ ಯತ್ನ ಮಾಡಿದರೂ ಅವರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಸಾಧ್ಯವಾಗದೇ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದರು.

– ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next