Advertisement

ರಕ್ತ ಹೀರುವವರನ್ನು ನಾಯಕ ಎನ್ನುತ್ತೀರಾ?: ಡಾ|ಅಶ್ವತ್ಥನಾರಾಯಣ

11:27 PM Nov 28, 2022 | Team Udayavani |

ಬೆಂಗಳೂರು: ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ತ್ಯಾಗ, ತಲೆ ಕೊಡಲು ಸಿದ್ಧರಿದ್ದೇವೆ. ಇನ್ನೊಬ್ಬರ ರಕ್ತ ಹೀರುವವರನ್ನು ನಾಯಕ ಎಂದು ಕರೆಯುತ್ತೀರಾ ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌.ಅಶ್ವತ್ಥನಾರಾಯಣ ಪ್ರಶ್ನಿಸಿದ್ದಾರೆ.

Advertisement

ಬಿಜೆಪಿ ಕಚೇರಿಯಲ್ಲಿ ಸಂಸದೆ ಸುಮಲತಾ ಆಪ್ತ ಸಚ್ಚಿದಾನಂದ ಸಹಿತ ಹಲವರನ್ನು ಪಕ್ಷಕ್ಕೆ ಸೇರಿಸಿಕೊಂಡು ಮಾತನಾಡಿದ ಅವರು, ಗುಲಾಮಗಿರಿ ಧಿಕ್ಕರಿಸಿ ಬಂದ ಬಹದ್ದೂರ್‌ ಗಂಡು ನಾರಾಯಣ ಗೌಡ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕುಟುಂಬ ಪಕ್ಷಗಳು. ಬಿಜೆಪಿಯವರು ಯಾರ ಮನೆ ಬಾಗಿಲು ಕೂಡ ಕಾಯಬೇಕಿಲ್ಲ. ತುಷ್ಟೀಕರಣ ರಾಜಕಾರಣ ಮಾಡುವ ಪಕ್ಷಗಳಿಗೆ ಪಾಠ ಕಲಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ 7 ಜೆಡಿಎಸ್‌ ಶಾಸಕರು, ಎಂಎಲ್‌ಸಿ, ಸಿಎಂ ಇದ್ದರೂ ಲೋಕಸಭೆ ಚುನಾವಣೆಯಲ್ಲಿ ಜನರು ಏನು ಮಾಡಿದರು ಎಂದು ಗೊತ್ತಿದೆ ಎಂದು ತಿಳಿಸಿದರು.

ಅತಿ ಹೆಚ್ಚು ಸಾಲ, ಹೆಚ್ಚು ಆತ್ಮಹತ್ಯೆ ನಡೆಯುವ ಜಿಲ್ಲೆ ಮಂಡ್ಯ. ಅತಿ ಹೆಚ್ಚು ನಾಯಕತ್ವ ಕೊಡುವ ಜಿಲ್ಲೆಯೂ ಮಂಡ್ಯ. ಮೈಶುಗರ್‌ ಕಾರ್ಖಾನೆಯನ್ನು ಯಾವ ರೀತಿ ಮಾಡಿದ್ದರು ಗೊತ್ತಿದೆ. ಬೇರೆ ಪಕ್ಷದವರು ತಾವು ಕೆಲಸ ಮಾಡಲ್ಲ, ಮಾಡುವವರನ್ನು ಬಿಡಲ್ಲ. ಪಾಂಡವಪುರ ಸಕ್ಕರೆ ಕಾರ್ಖಾನೆ ಏನು ಮಾಡಿದರು ಗೊತ್ತಿದೆ. ಇನ್ನೊಬ್ಬರ ರಕ್ತ ಹೀರುವವರನ್ನು ನಾಯಕ ಎಂದು ಕರೆಯುತ್ತೀರಾ ಎಂದು ಪ್ರಶ್ನಿಸಿದರು.

ಸ್ವಾರ್ಥ ರಾಜಕಾರಣ ಸಲ್ಲದು. ಜನಪರ ಕೆಲಸ ಮಾಡುವವರು ನಾಯಕ. ಜನದ್ರೋಹಿಗಳಿಗೆ ಪಾಠ ಕಲಿ
ಸುವ ಕೆಲಸ ಆಗಬೇಕಿದೆ. ಗುಲಾಮಗಿರಿ ಸಹಿಸದೆ ಹಲವು ನಾಯಕರು ಈಗಾಗಲೇ ಜೆಡಿಎಸ್‌ ತೊರೆದಿದ್ದಾರೆ. ಮಂಡ್ಯದ ಸಮೃದ್ಧಿಯನ್ನು ಹೆಚ್ಚಿಸಲು ನಿಜ ಸ್ವಾತಂತ್ರ್ಯ ರೂಪಿಸಲು ಬಿಜೆಪಿ ಸೂಕ್ತ ಪಕ್ಷ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್‌ ಕುಮಾರ್‌ ಸುರಾನಾ ಮಾತನಾಡಿ, ಸಚ್ಚಿದಾನಂದ ಅವರ ಪಕ್ಷ ಸೇರ್ಪಡೆ
ಯಿಂದ ಮಂಡ್ಯ ಜಿಲ್ಲೆಯಲ್ಲಿ ಹೊಸ ಶಕ್ತಿ ಮತ್ತು ಸಂಚಲನ ಉಂಟಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದರು.

Advertisement

ಸಚಿವ ಕೆ.ಸಿ. ನಾರಾಯಣ ಗೌಡ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌, ಬಿಜೆಪಿ ರಾಜ್ಯ ಕಾರ್ಯದರ್ಶಿ ಜಗದೀಶ್‌ ಹಿರೇಮನಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ರಕ್ತ ಹೀರುವ ರಾಜಕಾರಣ ಮಾಡಿಲ್ಲ: ಕುಮಾರಸ್ವಾಮಿ
ಬೆಂಗಳೂರು: ಮಂಡ್ಯದಲ್ಲಿ ನಾವು ಯಾವುದೇ ರಕ್ತ ಹೀರುವ ರಾಜಕಾರಣ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. “ಪಂಚರತ್ನ ಯಾತ್ರೆ’ ನಡುವೆ ಚಿಕ್ಕಬಳ್ಳಾಪುರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಚಿವ ಅಶ್ವತ್ಥನಾರಾಯಣ ಅವರು ಯಾಕೆ ಆ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ, ಬಿಜೆಪಿಯವರು ಮಂಡ್ಯ ಅಭಿವೃದ್ಧಿಗೆ ಮಾಡಿದ್ದು ಅಷ್ಟರಲ್ಲೇ ಇದೆ ಎಂದು ತಿಳಿಸಿದರು.

ಕಾಂಗ್ರೆಸ್‌ ಸರಕಾರದಲ್ಲಿ ಮಂಡ್ಯದಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚಾದಾಗ ಪ್ರತಿ ಕುಟುಂಬಕ್ಕೆ ನೆರವು ಕೊಟ್ಟಿದ್ದು ಜೆಡಿಎಸ್‌. ನಾನೇ ಖುದ್ದಾಗಿ ಮನೆಗೆ ಹೋಗಿ ಕೈಲಾದ ಸಹಾಯ ಮಾಡಿದ್ದೇನೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯ ಜಿಲ್ಲೆಯ ಅಭಿವೃದ್ದಿಗೆ ಬಜೆಟ್‌ನಲ್ಲಿ 8 ಸಾವಿರ ಕೋಟಿ ರೂ. ಇಟ್ಟಾಗ “ಇದು ಮಂಡ್ಯ ಬಜೆಟ್‌’ ಎಂದು ವ್ಯಂಗ್ಯವಾಡಿದವರು ಇವರೇ. ಆದರೆ ರಾಜಕಾರಣ, ಮತಕ್ಕೆ ಏನೇನೋ ಹೇಳಿಕೊಂಡು ಹೊರಟಿದ್ದಾರೆ ಎಂದು ಹೇಳಿದರು.

ಜೆಡಿಎಸ್‌ ಮಂಡ್ಯ ಜನರಿಗೆ ಏನು ಮಾಡಿದೆ ಗೊತ್ತಿದೆ. ಅಧಿಕಾರದ ಅಮಲು ನೆತ್ತಿಗೇರಬಾರದು. ಮುಂದಿನ ಚುನಾವಣೆಯಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next