ಮಂಗಳೂರು: ಮಹಮದ್ ಅಶ್ರಫ್ ಕಳಾಯಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು, ಪ್ರಮುಖ ಇಬ್ಬರು ಆರೋಪಿಗಳಲ್ಲಿ ಒಬ್ಬನಾಗಿರುವ ದಿವ್ಯರಾಜ್ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
5 ಮಂದಿ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಪ್ರಮುಖ ಆರೋಪಿಗಳಾದ ದಿವ್ಯರಾಜ್ ಶೆಟ್ಟಿ ಮತ್ತು ಭರತ್ ಕುಮೆxàಲು ಅವರು ಬಂಧನಕ್ಕೆ ಬಾಕಿ ಇದ್ದಾರೆ ಎಂದು ಶನಿವಾರ ಐಜಿಪಿ ಪಿ.ಹರಿಶೇಖರನ್ ತಿಳಿಸಿದ್ದರು.
ಬಂಧಿತ ಆರೋಪಿಗಳಾದ ಪವನ್ ಕುಮಾರ್ ಯಾನೆ ಪುಂಡ, ರಂಜಿತ್, ಸಂತೋಷ್ ಯಾನೆ ಸಂತು, ಶಿವ ಪ್ರಸಾದ್ ಯಾನೆ ಶಿವು ಮತ್ತು ಅಭಿನ್ ರೈ ಯಾನೆ ಅಭಿ (23) ಅವರನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿ ಬಳಿಕ ಹೆಚ್ಚಿನ ವಿಚಾರಣೆಗಾಗಿ ಬಂಟ್ವಾಳ ಪೊಲೀಸರ ಕಸ್ಟಡಿಗೆ ಒಪ್ಪಿಸಲಾಗಿದೆ. ಪೊಲೀಸರು ಈ ಆರೋಪಿಗಳನ್ನು ರಹಸ್ಯ ತಾಣದಲ್ಲಿ ತನಿಖೆ ನಡೆಸುತ್ತಿದ್ದಾರೆ.
ಗಲಭೆ ಹುಟ್ಟು ಹಾಕುವ ಜತೆಗೆ 2014 ರಲ್ಲಿ ನಡೆದ ಬೆಂಜನಪದವು ಶಿವಾಜಿನಗರದ ರಿಕ್ಷಾ ಚಾಲಕ ರಾಜೇಶ್ ಪೂಜಾರಿ ಕೊಲೆಗೆ ಪ್ರತೀಕಾರ ತೀರಿಸುವ ಉದ್ದೇಶದಿಂದಲೂ ಅಶ್ರಫ್ ಕೊಲೆಯನ್ನು ನಡೆಸಲಾಗಿದೆ ಎಂಬ ಮಾಹಿತಿ ಪೊಲೀಸ್ ವಲಯದಿಂದ ಕೇಳಿ ಬರುತ್ತಿದೆ.
ಹಿಂದೂ ಸಂಘಟನೆಯ ಕಾರ್ಯಕರ್ತನಾಗಿದ್ದ ರಾಜೇಶ್ ಪೂಜಾರಿಯನ್ನು 2014 ಮಾ. 21 ರಂದು ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದ ಆರೋಪಿಗಳು ಜೈಲಿನಲ್ಲಿದ್ದಾಗ ಆರೋಪಿಗಳ ಮನೆ ಮಂದಿಗೆ ಅಶ್ರಫ್ ಕಳಾಯಿ ಸಹಕರಿಸಿದ್ದರು ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ದ್ವೇಷ ಸಾಧನೆಗಾಗಿ ಅಶ್ರಫ್ ಅವರನ್ನು ಕೊಲೆಮಾಡಲಾಗಿದೆ ಎಂದು ತಿಳಿದು ಬಂದಿದೆ.