Advertisement

ವಡಗಾಂವನಲ್ಲಿ ಅಶೋಕ ಗ್ರಾಮ ವಾಸ್ತವ್ಯ: ಸ್ಥಳ ಪರಿಶೀಲನೆ

03:04 PM May 15, 2022 | Team Udayavani |

ಬೀದರ/ಔರಾದ: ಕಂದಾಯ ಸಚಿವ ಆರ್‌. ಅಶೋಕ ಮೇ 21ರಂದು ಗ್ರಾಮ ವಾಸ್ತವ್ಯ ಹಿನ್ನೆಲೆ ಔರಾದ ತಾಲೂಕಿನ ವಡಗಾಂವ (ಡಿ) ಗ್ರಾಮಕ್ಕೆ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಭೇಟಿ ನೀಡಿ, ಸ್ಥಳ ಪರಿಶೀಲನೆ ಮಾಡಿದರು.

Advertisement

ಇದೇ ವೇಳೆ ಅಧಿಕಾರಿಗಳೊಂದಿಗೆ ಎರಡನೇ ಸಭೆ ನಡೆಸಿ ಗ್ರಾಮ ವಾಸ್ತವ್ಯದ ಪೂರ್ವ ತಯಾರಿ ಕುರಿತು ಮಾಹಿತಿ ಪಡೆದರು. ಕಾರ್ಯಕ್ರಮ ಹೇಗಿರಬೇಕು? ಎನ್ನುವ ಬಗ್ಗೆ ಗ್ರಾಮಸ್ಥರಿಂದಲೂ ಸಲಹೆಗಳನ್ನು ಪಡೆದರು. ಈ ಭಾಗದ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ, ಜನತೆಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ಕಂದಾಯ ಸಚಿವರೇ ಖುದ್ದಾಗಿ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಗ್ರಾಮಸ್ಥರ ಸಹಕಾರ ಸಾಕಷ್ಟು ಅಗತ್ಯವಿರುತ್ತದೆ. ತಮ್ಮ ಗ್ರಾಮದ ಅಭಿವೃದ್ಧಿ ಹಿತದೃಷ್ಟಿಯಿಂದ ಸ್ಥಳೀಯರು ಅಗತ್ಯ ಸಹಕಾರ ನೀಡಬೇಕೆಂದು ಸಚಿವರು ಕೋರಿದರು.

ತಹಶೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಪಿಡಿಒಗಳು ತಮ್ಮ ಕರ್ತವ್ಯಗಳನ್ನು ಜವಾಬ್ದಾರಿ ಯುತವಾಗಿ ನಿರ್ವಹಿಸಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಅಧಿಕಾರಿಗಳು ಕಾರ್ಯಕ್ರಮದ ರೂಪುರೇಷೆ ವಿವರಿಸಿ, ಮೇ 21ರಂದು ಬೆಳಗ್ಗೆ ಗ್ರಾಮದಲ್ಲಿನ ಬಸವೇಶ್ವರ ಹಾಗೂ ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಲಾಗುತ್ತದೆ. ಗ್ರಾಮದಲ್ಲಿ ಕಳಸ ಹೊತ್ತ ಮಹಿಳೆಯರೊಂದಿಗೆ ಮೆರವಣಿಗೆ ನಡೆಯಲಿದೆ. ಕೋಲಾಟ, ಡೊಳ್ಳು ಕಲಾ ತಂಡಗಳು ಇರಲಿವೆ. ಬಳಿಕ ಕಂದಾಯ ಸಚಿವರು ವೇದಿಕೆಗೆ ಆಗಮಿಸುವರು. ರಾತ್ರಿ ಬಿ.ಸಿ.ಎಂ ವಸತಿ ನಿಲಯದಲ್ಲಿ ವಾಸ್ತವ್ಯ ಕೈಗೊಳ್ಳುವರು. ಕಾರ್ಯಕ್ರಮದಲ್ಲಿ ಕನಿಷ್ಠ 20 ಸಾವಿರ ಜನರು ಆಗಮಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಆಹಾರ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಮಳಿಗೆಗಳನ್ನು ಅಳವಡಿಸುವಂತೆ ಹಿಂದಿನ ಸಭೆಯಲ್ಲಿ ತಿಳಿಸಲಾಗಿದೆ. ಇದರ ಅನುಷ್ಠಾನ ಅಚ್ಚುಕಟ್ಟಾಗಿ ಆಗಬೇಕು ಎಂದು ಸಚಿವ ಪ್ರಭು ಚವ್ಹಾಣ ಸೂಚಿಸಿದರು.

Advertisement

ಗ್ರಾಪಂ ಅಧ್ಯಕ್ಷೆ ತ್ರೀಶುಲಾಬಾಯಿ ಝರೆಪ್ಪಾ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಒ ಜಹೀರಾ ನಸೀಮ್‌, ಸಹಾಯಕ ಆಯುಕ್ತ ನಯೀಮ್‌ ಮೋಮಿನ್‌, ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬೀರೆಂದ್ರಸಿಂಗ್‌ ಠಾಕೂರ್‌, ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಬಂಡೆಪ್ಪ ಕಂಟೆ, ಪಶು ವಿವಿಯ ಆಡಳಿತ ಮಂಡಳಿ ಸದಸ್ಯ ವಸಂತ ವಕೀಲ್‌, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಮಲ್ಲಪ್ಪಾ ನೇಳಗೆ, ಪ್ರಕಾಶ ಮೇತ್ರೆ, ಪ್ರಕಾಶ ಜೀರ್ಗೆ, ಸಂಜು ರಾಠೊಡ್‌, ಧಾರಾಸಿಂಗ್‌ ಪವಾರ, ಶಂಕರ ರಾಠೊಡ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next