ಜೈಪುರ: ರಾಜಸ್ಥಾನದ ಮುಖ್ಯಮಂತ್ರಿ ಹುದ್ದೆಗೆ ಅಶೋಕ್ ಗೆಹ್ಲೋಟ್ ಬಹುತೇಕ ಇಂದು ಸಂಜೆ ರಾಜೀನಾಮೆ ನೀಡಲಿದ್ದಾರೆ ಎಂದು ವರದಿ ತಿಳಿಸಿದೆ. ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ನಡೆಸುತ್ತಿರುವ ಅಶೋಕ್ ಗೆಹ್ಲೋಟ್ ಅವರು ನಾಮಪತ್ರ ಸಲ್ಲಿಕೆಗೆ ಮುನ್ನ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎನ್ನಲಾಗಿದೆ.
ಒಂದು ವೇಳೆ ಅಶೋಕ್ ಗೆಹ್ಲೋಟ್ ರಾಜೀನಾಮೆ ನೀಡಿದರೆ ಸಚಿನ್ ಪೈಲಟ್ ಅವರು ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಎಲ್ಲಾ ಸಾಧ್ಯತೆಗಳಿವೆ.
ಕಾಂಗ್ರೆಸ್ ನ ಶಾಸಕಾಂಗ ಪಕ್ಷದ ಸಭೆಯು ಇಂದು ಸಂಜೆ 7.30ಕ್ಕೆ ನಡೆಯಲಿದೆ. ಅಶೋಕ್ ಗೆಹ್ಲೋಟ್ ಅವರ ನಿವಾಸದಲ್ಲಿ ನಡೆಯಲಿರುವ ಈ ಸಭೆಯು ಭಾರೀ ಪ್ರಾಮುಖ್ಯತೆ ಪಡೆದಿದ್ದು, ಗೆಹ್ಲೋಟ್ ಅವರು ಈ ಸಭೆಯಲ್ಲೇ ರಾಜೀನಾಮೆ ಬಗ್ಗೆ ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿದೆ.
ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಅಜಯ್ ಮಾಕೆನ್ ಜೊತೆಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ವೀಕ್ಷಕರನ್ನಾಗಿ ಸೋನಿಯಾ ಗಾಂಧಿ ನೇಮಿಸಿದ್ದಾರೆ. ಹೀಗಾಗಿ ಅವರಿಬ್ಬರು ಇಂದಿನ ಶಾಸಕಾಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.
ಇದನ್ನೂ ಓದಿ:ಆರ್ ಎಸ್ಎಸ್ ಕಾರ್ಯಕರ್ತನ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ: ಸಿಸಿಟಿವಿ ದೃಶ್ಯ ನೋಡಿ
ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಸಲು ತಯಾರಿ ಮಾಡಿಕೊಂಡಿದ್ದ ಅಶೋಕ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಹುದ್ದೆಯಲ್ಲೂ ಮುಂದುವರಿಯಲು ಬಯಸಿದ್ದರು. ಆದರೆ ರಾಹುಲ್ ಗಾಂಧಿ ಅವರು ಪಕ್ಷದಲ್ಲಿ ‘ಏಕ ವ್ಯಕ್ತಿ- ಏಕ ಹುದ್ದೆ’ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದ ಬಳಿಕ ಅವರು ಸಿಎಂ ಹುದ್ದೆ ತೊರೆಯಲು ಮುಂದಾಗಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸೆ.24ರಿಂದ 30ರ ವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಚುನಾವಣೆಯು ಅಕ್ಟೋಬರ್ 17ರಂದು ನಡೆಯಲಿದ್ದು, ಅ.19ಕ್ಕೆ ಮತ ಎಣಿಕೆ ನಡೆಯಲಿದೆ.