ಮುಂಬಯಿ: ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಅನಂತರ ಕಾಂಗ್ರೆಸ್‌ನಲ್ಲಿ ರಾಜೀನಾಮೆಯ ಪರ್ವ ಆರಂಭವಾಗಿದ್ದು, ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೇನೆ. ಶೀಘ್ರ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ದೇಶವ್ಯಾಪಿಯಾಗಿ ಕಾಂಗ್ರೆಸ್‌ಗೆ ಈ ಬಾರಿ ಹಿನ್ನಡೆ ಉಂಟಾಗಿದ್ದು, ಮಹಾ ರಾಷ್ಟ್ರದಲ್ಲಿ ಕಾಂಗ್ರೆಸ್ – ಎನ್‌ಸಿಪಿ ಮೈತ್ರಿಯು ಧೂಳೀ ಪಟವಾಗಿತ್ತು.
2014ರಲ್ಲಿ ನಡೆದ ಚುನಾವಣೆಯಲ್ಲಿ ಕೇವಲ 2 ಸ್ಥಾನ ಪಡೆದ ಕಾಂಗ್ರೆಸ್ ಪ್ರಸಕ್ತ ಚುನಾವಣೆಯಲ್ಲಿ ಒಂದು ಸ್ಥಾನದಲ್ಲಿ ಮಾತ್ರ ಗೆಲುವು ಪಡೆಯಿತು. ಈ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್‌ನ ದಿಗ್ಗಜ ನಾಯಕರೆಲ್ಲ ಸೋಲು ಅನುಭವಿಸಿದ್ದರು. ಸ್ವತಃ ಅಶೋಕ್ ಚವಾಣ್ ಅವರು ನಾಂದೇಡ್ ಲೋಕಸಭೆ ಕ್ಷೇತ್ರದಿಂದ ಸೋಲು ಅನುಭವಿಸಿದರು.
ಬಿಜೆಪಿಯ ಪ್ರತಾಪ್‌ರಾವ್ ಚಿಖಲಿಕರ್ ವಿರುದ್ಧ ಸ್ಪರ್ಧಿಸಿದ ಅಶೋಕ್ ಚವಾಣ್ ಅವರು ಸುಮಾರು 40, 000 ಮತಗಳ ಅಂತರದಿಂದ ಸೋಲು ಕಾಣಬೇಕಾಯಿತು. ಈ ಸೋಲಿಗೆ ಸ್ವತಃ ಜವಾಬ್ದಾರೆಂದ ಅಶೋಕ್ ಚವಾಣ್ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.