“ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಂದು ಸುಮಾರು ಐದು ವರ್ಷವಾಯ್ತು. ಇಲ್ಲಿ ಎಲ್ರೂ ನಮ್ಮವರೇ ಇದ್ದಿದ್ದರಿಂದ, ತುಂಬ ಕಂಫರ್ಟ್ ಜೋನ್‌ನಲ್ಲಿ ಇಲ್ಲಿ ತನಕ ಎಲ್ಲ ಸಿನಿಮಾಗಳನ್ನ ಮಾಡಿದ್ದೇನೆ. ಆದ್ರೆ ಫಸ್ಟ್ ಟೈಮ್ ಕನ್ನಡ ಬಿಟ್ಟು ಬೇರೆ ಭಾಷೆಗೆ ಹೋಗುತ್ತಿರುವುದರಿಂದ, ಒಂಚೂರು ಅಳುಕು, ಭಯ ಇದ್ದೇ ಇದೆ. ಕನ್ನಡದಷ್ಟು ಕಂಫರ್ಟ್ ಲೆವೆಲ್ ಬೇರೆಲ್ಲೂ ನಿರೀಕ್ಷಿಸೋದಕ್ಕೂ ಸಾಧ್ಯವಿಲ್ಲ. ಆದ್ರೂ, ಆ್ಯಕ್ಟಿಂಗ್‌ನ ವೃತ್ತಿ ಅಂಥ ತೆಗೆದುಕೊಂಡಾಗ, ಈ ಥರದ ಹೊಸ ಚಾಲೆಂಜ್‌ಗಳನ್ನು ಎದುರಿಸಲೇ ಬೇಕಾಗುತ್ತದೆ…’ – ಹೀಗೆ ಹೇಳುತ್ತ ಮಾತಿಗಿಳಿದವರು ಸ್ಯಾಂಡಲ್‌ವುಡ್‌ನ “ಚುಟು ಚುಟು ಹುಡ್ಗಿ’ ಖ್ಯಾತಿಯ ಆಶಿಕಾ ರಂಗನಾಥ್
ಹೌದು,ಕನ್ನಡಕ್ಕೆ ಪರಭಾಷೆಯಿಂದ ಬರುವ ನಾಯಕಿಯರ ಸಂಖ್ಯೆಗಿಂತ, ಕನ್ನಡದಿಂದ ಪರಭಾಷೆಗೆ ಹೋಗುವ ನಾಯಕಿಯರ ಸಂಖ್ಯೆ ತೀರಾಕಡಿಮೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಅಂಥದ್ದರಲ್ಲಿ ಕೆಲವು ನಟಿಯರು ಆಗಾಗ್ಗೆ,ಕನ್ನಡದಿಂದ ಬೇರೆ ಭಾಷೆಯತ್ತ ಹೋಗಿ ಮಿಂಚುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಆ ಸಾಲಿಗೆ ಈಗ ಸೇರ್ಪಡೆಯಾಗುತ್ತಿರುವ ಮತ್ತೂಬ್ಬ ನಟಿ ಆಶಿಕಾ ರಂಗನಾಥ್.
ಸದ್ಯ ಆಶಿಕಾ ತಮಿಳಿನಲ್ಲಿ ನಟ ಅಥರ್ವ ಅವರಿಗೆ ನಾಯಕಿಯಾಗಿ ಕಾಲಿವುಡ್‌ಗೆ ಎಂಟ್ರಿಯಾಗುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಆಶಿಕಾ ಕಬ್ಬಡಿ ಆಟಗಾರ್ತಿಯ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮಿಳಿನ ಹೆಸರಾಂತ ನಿರ್ಮಾಣ ಸಂಸ್ಥೆ “ಲೈಕಾ ಪ್ರೊಡಕ್ಷನ್ಸ್’ ಈ ಸಿನಿಮಾವನ ನಿರ್ಮಿಸುತ್ತಿದ್ದು, ಸರಗುಣಂ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.
ಈಗಾಗಲೇ ತಂಜಾವೂರು ಸುತ್ತಮುತ್ತ ಈ ಚಿತ್ರದ ಮುಕ್ಕಾಲು ಭಾಗ ಚಿತ್ರೀಕರಣ ನಡೆದಿದ್ದು, ಇದೇ ತಿಂಗಳಾಂತ್ಯಕ್ಕೆ ಚಿತ್ರೀಕರಣ ಪೂರ್ಣವಾಗುವ ಸಾಧ್ಯತೆ ಇದೆ.
ಇನ್ನು ತಮ್ಮ ಚೊಚ್ಚಲ ತಮಿಳು ಚಿತ್ರದ ಅನುಭವದ ಬಗ್ಗೆ ಮಾತನಾಡುವ ಆಶಿಕಾ, “ಕನ್ನಡ ಇಂಡಸ್ಟ್ರಿ ನನಗೆ ಹೆಸರು, ಅವಕಾಶ ಎಲ್ಲವನ್ನೂ ಕೊಟ್ಟಿದೆ. ಇಲ್ಲಿ ತುಂಬಾನೇ ಆರಾಮಾಗಿದ್ದೆ. ಆದ್ರೆ ನಟಿಯಾಗಿ ಹೊಸ ಥರದ ಪಾತ್ರಗಳಿಗೆ, ಹೊಸ ಚಾಲೆಂಜ್‌ಗಳಿಗೆ ನಾನು ತೆರೆದುಕೊಳ್ಳಲೇಬೇಕು. ಹಾಗಾಗಿ ಸಿನಿಮಾದ ಸಬ್ಜೆಕ್ಟ್ ಮತ್ತು ನನ್ನ ಕ್ಯಾರೆಕ್ಟರ್ ಇಷ್ಟವಾಗಿದ್ದರಿಂದ ತಮಿಳು ಸಿನಿಮಾ ಒಪ್ಪಿಕೊಂಡೆ. ಇದರಲ್ಲಿ ನನ್ನದು ಕಬ್ಬಡಿ ಆಡುವ ಹುಡ್ಗಿಯ ಪಾತ್ರ. ತಮಿಳಿನ ರೂರಲ್ ಬ್ಯಾಗ್ರೌಂಡ್‌ನಲ್ಲಿ ಇಡೀ ಸಿನಿಮಾ ನಡೆಯುತ್ತದೆ. ಆರಂಭದಲ್ಲಿ ತಮಿಳು ನನಗೆ ಹೊಸ ಭಾಷೆಯಾಗಿದ್ದರಿಂದ, ಸಿನಿಮಾದಲ್ಲಿ ತಮಿಳಿನ ಗ್ರಾಮೀಣ ಶೈಲಿಯ ಡೈಲಾಗ್ಸ್ ಇರುವುದರಿಂದ, ನನಗೆ ಒಮ್ಮೆಲೆ ಅರ್ಥವಾಗುತ್ತಿರಲಿಲ್ಲ. ಆರಂಭದಲ್ಲಿ ಅದರ ಉಚ್ಛಾರಣೆಯೂ ಕಷ್ಟವಾಗುತ್ತಿತ್ತು. ಈಗ ನಿಧಾನವಾಗಿ ಅದೆಲ್ಲವನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ.
“ಮೊದಲ ಬಾರಿಗೆ ತಮಿಳಿನಲ್ಲಿ ರಾಧಿಕಾ ಶರತ್ ಕುಮಾರ್, ಅಥರ್ವ, ರಾಜ ಕಿರಣ್ ಅವರಂಥ ದೊಡ್ಡ ಸ್ಟಾರ್ ಜೊತೆಕೆಲಸ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ಖುಷಿಯಿದೆ. ಇಡೀ ಸಿನಿಮಾ ಕಬ್ಬಡಿ ಆಟ, ಫ್ಯಾಮಿಲಿ ಸೆಂಟಿಮೆಂಟ್, ಎಮೋಶನ್ಸ್ ಮೇಲೆ ನಡೆಯುತ್ತದೆ. ಕನ್ನಡದ ಪ್ರೇಕ್ಷಕರಿಗೂ ನನ್ನ ಪಾತ್ರ ಇಷ್ಟವಾಗುತ್ತದೆ’ ಎಂಬ ವಿಶ್ವಾಸದ ಮಾತುಗಳನ್ನಾಡುತ್ತಾರೆ ಆಶಿಕಾ.
ಸದ್ಯ ಆಶಿಕಾಕನ್ನಡದಲ್ಲಿ ಅಭಿನಯಿಸುವ “ಗರುಡ’, “ರಂಗಸ್ಥಳ’, “ರೆಮೋ’, “ಅವತಾರ್ ಪುರುಷ’, “ಕೋಟಿಗೊಬ್ಬ-3′, “ಮದಗಜ’ ಹೀಗೆ ಸಾಲು ಸಾಲು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್‌ಗೆ ರೆಡಿಯಾಗಿವೆ. “ಇದರಲ್ಲದೆ, ಇನ್ನೂ
ಎರಡು-ಮೂರು ಸಬ್ಜೆಕ್ಟ್ ಮಾತುಕತೆಯ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಆ ಸಿನಿಮಾಗಳೂ ಅನೌನ್ಸ್ ಆಗುವ ಸಾಧ್ಯತೆ ಇದೆ’ ಎಂಬ ಮಾಹಿತಿ ನೀಡುತ್ತಾರೆ ಆಶಿಕಾ.
ಜಿ.ಎಸ್.ಕಾರ್ತಿಕ ಸುಧನ್