ಓವಲ್: ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ನಡೆಯುತ್ತಿರುವ ಆ್ಯಶಸ್ ಸರಣಿಯ ಐದನೇ ಟೆಸ್ಟ್‌ನ ಮೊದಲ ದಿನ ಬ್ಯಾಟಿಂಗ್ ಕುಸಿತಕ್ಕೆ ಒಳಗಾದ ಇಂಗ್ಲೆಂಡ್ ತಂಡವು 283 ರನ್ನಿಗೆ ಆಲೌಟಾಗಿದೆ.
ಮಿಚೆಲ್ ಸ್ಟಾರ್ಕ್ ಸಹಿತ ಹೇಝಲ್‌ವುಡ್ ಮತ್ತು ಟಾಡ್ ಮರ್ಫಿ ಅವರ ದಾಳಿಗೆ ಇಂಗ್ಲೆಂಡ್ ಕುಸಿಯಿತು. ಬೆನ್ ಡಕೆಟ್, ಮೊಯಿನ್ ಅಲಿ, ಹ್ಯಾರಿ ಬ್ರೂಕ್ ಮತ್ತು ಕ್ರಿಸ್ ವೋಕ್ಸ್ ಅವರು ಆಸ್ಟ್ರೇಲಿಯ ದಾಳಿಯನ್ನು ಸ್ವಲ್ಪಮಟ್ಟಿಗೆ ಎದುರಿಸಲು ಯಶಸ್ವಿಯಾಗಿದ್ದರು. 85 ರನ್ ಗಳಿಸಿದ ಬ್ರೂಕ್ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಇಂಗ್ಲೆಂಡಿನ ಆರಂಭ ಉತ್ತಮ ವಾಗಿತ್ತು. ಆರಂಭಿಕರಾದ ಜಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಮೊದಲ ವಿಕೆಟಿಗೆ 62 ರನ್ ಪೇರಿಸಿದ್ದರು. ಅವರಿಬ್ಬರು ನಾಲ್ಕು ರನ್ ಅಂತರದಲ್ಲಿ ಪೆವಿಲಿಯನ್ ಸೇರಿದ್ದರಿಂದ ಆತಿ ಥೇಯ ತಂಡ ಕುಸಿಯತೊಡಗಿತು. ಮಧ್ಯಮ ಕ್ರಮಾಂಕದಲ್ಲಿ ಹ್ಯಾರಿ ಬ್ರೂಕ್ ಮತ್ತು ಕೊನೆ ಹಂತದಲ್ಲಿ ಕ್ರಿಸ್ ವೋಕ್ಸ್ ತಂಡವನ್ನು ಆಧರಿಸಿದ್ದರಿಂದ ಸಾಧಾರಣ ಮೊತ್ತ ಪೇರಿಸಲು ಇಂಗ್ಲೆಂಡ್ ಯಶಸ್ವಿಯಾಯಿತು.
ಹ್ಯಾರಿ ಬ್ರೂಕ್ ಮತ್ತು ಮೊಯಿನ್ ಅಲಿ ನಾಲ್ಕನೇ ವಿಕೆಟಿಗೆ 111 ರನ್ ಪೇರಿಸಿದ್ದರಿಂದ ಇಂಗ್ಲೆಂಡ್ ಚೇತರಿಸಿಕೊಂಡಿತು. ಮೊಯಿನ್ 34 ಮತ್ತು ಬ್ರೂಕ್ 91 ಎಸೆತಗಳಿಂದ 85 ರನ್ ಹೊಡೆದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಅವರು 11 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದ್ದರು.
ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 283 (ಡಕೆಟ್ 41, ಮೊಯಿನ್ ಅಲಿ 24, ಹ್ಯಾರಿ ಬ್ರೂಕ್ 85, ವೋಕ್ಸ್ 36, ಮಿಚೆಲ್ ಸ್ಟಾರ್ಕ್ 82ಕ್ಕೆ 4, ಹೇಝಲ್‌ವುಡ್ 54ಕ್ಕೆ 2, ಮರ್ಫಿ 22ಕ್ಕೆ 2).