ಲಂಡನ್: ಓವಲ್ ಟೆಸ್ಟ್ ಗೆಲುವಿಗೆ 384 ರನ್ನುಗಳ ಕಠಿನ ಗುರಿ ಪಡೆದರೂ ಆಸ್ಟ್ರೇಲಿಯ ದಿಟ್ಟ ಚೇಸಿಂಗ್ ಮೂಲಕ ಇಂಗ್ಲೆಂಡ್‌ಗೆ ಭೀತಿ ಮೂಡಿಸಿದೆ. ಮಳೆಯಿಂದಾಗಿ ರವಿವಾರದ ಆಟ ಬೇಗನೆ ಕೊನೆ ಗೊಂಡಾಗ ಆಸೀಸ್ ವಿಕೆಟ್ ನಷ್ಟವಿಲ್ಲದೆ 135 ರನ್ ಗಳಿಸಿತ್ತು. ಉಸ್ಮಾನ್ ಖ್ವಾಜಾ 69 ಮತ್ತು ಡೇವಿಡ್ ವಾರ್ನರ್ 58 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸರಣಿಯನ್ನು ಸಮಬಲಕ್ಕೆ ತರಬೇಕಾ ದರೆ, ಸ್ಟುವರ್ಟ್ ಬ್ರಾಡ್‌ಗೆ ಸ್ಮರಣೀಯ ವಿದಾಯ ನೀಡಬೇಕಾದರೆ ಇಂಗ್ಲೆಂಡ್ ಈ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕಿದೆ.
ಈ ಜತೆಯಾಟದ ವೇಳೆ ಡೇವಿಡ್ ವಾರ್ನರ್ ನೂತನ ಮೈಲುಗಲ್ಲೊಂದನ್ನು ನೆಟ್ಟರು. ಅವರು ಆರಂಭಿಕ ವಿಕೆಟಿಗೆ ಅತ್ಯಧಿಕ 25 ಶತಕಗಳ ಜತೆಯಾಟ ನಡೆಸಿದ ದಾಖಲೆ ನಿರ್ಮಿಸಿದರು. ಜಾಕ್ ಹಾಬ್ಸ್, ಗ್ರೇಮ್ ಸ್ಮಿತ್ ಮತ್ತು ಅಲಸ್ಟೇರ್ ಕುಕ್ ದ್ವಿತೀಯ ಸ್ಥಾನಕ್ಕೆ ಇಳಿದರು (ತಲಾ 24). ಮೈಕಲ್ ಆಥರ್ಟನ್ ಮತ್ತು ವೀರೇಂದ್ರ ಸೆಹವಾಗ್ ಅನಂತರದ ಸ್ಥಾನದಲ್ಲಿದ್ದಾರೆ (ತಲಾ 23).
ಇಂಗ್ಲೆಂಡ್‌ನ 6 ಬೌಲರ್ ಆಸೀಸ್ ಆರಂಭಿಕ ಜೋಡಿಯನ್ನು ಮುರಿಯಲು ಪ್ರಯತ್ನಿಸಿದರೂ ಇದರಲ್ಲಿ ಯಶಸ್ಸು ಕಾಣಲಿಲ್ಲ. ಇದು 2017-18ರ ಬಳಿಕ ಆ್ಯಶಸ್ ಪಂದ್ಯವೊಂದರ ಆರಂಭಿಕ ವಿಕೆಟಿಗೆ ದಾಖಲಾದ ಮೊದಲ ಶತಕದ ಜತೆಯಾಟ.
ಅಂದಿನ ಮೆಲ್ಬರ್ನ್ ಪಂದ್ಯದಲ್ಲಿ ಡೇವಿಡ್ ವಾರ್ನರ್-ಕ್ಯಾಮರಾನ್ ಬಾನ್‌ಕ್ರಾಫ್ಟ್ 122 ರನ್ ಪೇರಿಸಿದ್ದರು. 12 ರನ್ನುಗಳ ಇನ್ನಿಂಗ್ಸ್ ಹಿನ್ನಡೆಗೆ ಸಿಲುಕಿದ ಇಂಗ್ಲೆಂಡ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ 395 ರನ್ ಗಳಿಸಿತು.