ಲೀಡ್ಸ್: ಅತ್ಯಂತ ರೋಚಕವಾಗಿ ಸಾಗಿದ ಆ್ಯಶಸ್ ಸರಣಿಯ ಲೀಡ್ಸ್ ಟೆಸ್ಟ್ ಪಂದ್ಯವನ್ನು 3 ವಿಕೆಟ್‌ಗಳಿಂದ ಗೆದ್ದ ಇಂಗ್ಲೆಂಡ್ ಹಳಿ ಏರುವಲ್ಲಿ ಯಶಸ್ವಿಯಾಗಿದೆ. ಹಿನ್ನಡೆಯನ್ನು 1-2ಕ್ಕೆ ಇಳಿಸಿಕೊಂಡಿದೆ. ವಿಶ್ವ ಚಾಂಪಿಯನ್ ಆದ ಬಳಿಕ ಆಸ್ಟ್ರೇಲಿಯ ಮೊದಲ ಸೋಲಿನ ಆಘಾತಕ್ಕೆ ಸಿಲುಕಿದೆ.
ಗೆಲುವಿಗೆ 251 ರನ್ ಮಾಡಬೇಕಿದ್ದ ಇಂಗ್ಲೆಂಡ್, 4ನೇ ದಿನವಾದ ರವಿವಾರ ಆಗಾಗ ಆತಂಕದ ಕ್ಷಣಗಳನ್ನು ಅನುಭವಿಸಿಯೂ ಗುರಿ ಮುಟ್ಟಿತು. 171ಕ್ಕೆ 6ನೇ ವಿಕೆಟ್ ಬಿದ್ದಾಗ ಈ ಟೆಸ್ಟ್ ಕೂಡ ಇಂಗ್ಲೆಂಡ್‌ಗೆ ಬರೆ ಏಳೆದೀತು ಎಂದೇ ಭಾವಿಸಲಾಗಿತ್ತು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್ ಹ್ಯಾರಿ ಬ್ರೂಕ್ ಮತ್ತು ಆಲ್‌ರೌಂಡರ್ ಕ್ರಿಸ್ ವೋಕ್ಸ್ ಸೇರಿಕೊಂಡು ತಂಡವನ್ನು ದಡ ಮುಟ್ಟಿಸಿದರು. ಆಸ್ಟ್ರೇಲಿಯದ 3-0 ಯೋಜನೆ ವಿಫಲಗೊಂಡಿತು.
ಹ್ಯಾರಿ ಬ್ರೂಕ್ 75 ರನ್ ಬಾರಿಸಿ ತಂಡದ ನೆರವಿಗೆ ನಿಂತರು (93 ಎಸೆತ, 9 ಬೌಂಡರಿ). ಬ್ರೂಕ್ ಅಮೋಘ ಇನ್ನಿಂಗ್ಸ್ ವೇಳೆ ಅತೀ ಕಡಿಮೆ ಎಸೆತಗಳಿಂದ (1,058) ಟೆಸ್ಟ್ ನಲ್ಲಿ ಸಾವಿರ ರನ್ ಪೂರ್ತಿಗೊಳಿಸಿದ ದಾಖಲೆ ಸ್ಥಾಪಿಸಿದರು. ವೋಕ್ಸ್ ಅಜೇಯ 32 ರನ್ ಮಾಡಿದರು. ಸ್ಟಾರ್ಕ್ ಎಸೆತವನ್ನು ಬೌಂಡರಿಗೆ ಬಡಿದಟ್ಟುವ ಮೂಲಕ ಇಂಗ್ಲೆಂಡ್ ಗೆಲುವನ್ನು ಸಾರಿದರು.
ಇದು ಹೇಡಿಂಗ್ಲೆ ಅಂಗಳದಲ್ಲಿ 250 ಪ್ಲಸ್ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿ ಗೆದ್ದ 6ನೇ ದೃಷ್ಟಾಂತ. ಎಂಸಿಜಿಯಲ್ಲಿ ಇಂಥ 7 ಗೆಲುವಿನ ನಿದರ್ಶನ ಕಂಡುಬಂದಿದ್ದು, ಇದೊಂದು ದಾಖಲೆಯಾಗಿದೆ.
ಇದು ಬೆನ್ ಸ್ಟೋಕ್ಸ್ ನಾಯಕತ್ವದ 17ನೇ ಟೆಸ್ಟ್ ಆಗಿದ್ದು, ಎಲ್ಲವೂ ಸ್ಪಷ್ಟ ಫಲಿತಾಂಶ ಕಂಡಿರುವುದು ವಿಶೇಷ (12 ಜಯ, 5 ಸೋಲು). ಈ ಯಾದಿಯಲ್ಲಿರುವ ಮತ್ತಿಬ್ಬರು ನಾಯಕರೆಂದರೆ ವಕಾರ್ ಯೂನಿಸ್ (10 ಜಯ, 7 ಸೋಲು) ಮತ್ತು ಶಕಿಬ್ ಅಲ್ ಹಸನ್ (3 ಜಯ, 14 ಸೋಲು).
ಮೊದಲೆರಡು ಟೆಸ್ಟ್‌ಗಳನ್ನು ಆಸ್ಟ್ರೇಲಿಯ 2 ವಿಕೆಟ್ ಹಾಗೂ 43 ರನ್ನುಗಳಿಂದ ಜಯಿಸಿತ್ತು. 4ನೇ ಟೆಸ್ಟ್ ಜು. 19ರಂದು ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-263 ಮತ್ತು 224. ಇಂಗ್ಲೆಂಡ್-237 ಮತ್ತು 7 ವಿಕೆಟಿಗೆ 254 (ಬ್ರೂಕ್ಸ್ 75, ಕ್ರಾಲಿ 44, ವೋಕ್ಸ್ ಔಟಾಗದೆ 32, ಸ್ಟಾರ್ಕ್ 78ಕ್ಕೆ 5). ಪಂದ್ಯಶ್ರೇಷ್ಠ: ಮಾರ್ಕ್ ವುಡ್.