Advertisement

ಆ್ಯಶಸ್‌: ಇಂಗ್ಲೆಂಡಿಗೆ ತಲೆನೋವು ತಂದ ಹೆಡ್‌

09:26 PM Dec 09, 2021 | Team Udayavani |

ಬ್ರಿಸ್ಬೇನ್‌: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ ಮನ್‌ ಟ್ರ್ಯಾವಿಸ್‌ ಹೆಡ್‌ ಬಾರಿಸಿದ ಅಜೇಯ ಶತಕ, ಡೇವಿಡ್‌ ವಾರ್ನರ್‌ ಮತ್ತು ಮಾರ್ನಸ್‌ ಲಬುಶೇನ್‌ ಅವರ ಸೊಗಸಾದ ಬ್ಯಾಟಿಂಗ್‌ ಸಾಹಸದಿಂದ ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯ 196 ರನ್‌ ಮುನ್ನಡೆ ಸಾಧಿಸಿದೆ. 7 ವಿಕೆಟಿಗೆ 343 ರನ್‌ ಪೇರಿಸಿ ದಿನದಾಟ ಮುಗಿಸಿದೆ.

Advertisement

ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 147ಕ್ಕೆ ಕುಸಿದಿತ್ತು. ಅಲ್ಲಿಗೆ ಮಳೆ ಸುರಿದುದರಿಂದ ಮೊದಲ ದಿನದ ಅಂತಿಮ ಅವಧಿಯ ಆಟ ನಷ್ಟವಾಗಿತ್ತು. ಗುರುವಾರ ಮೊದಲ ಇನ್ನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯ ಉತ್ತಮ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಯಿತು

5ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಹೆಡ್‌ 85 ಎಸೆತಗಳಲ್ಲಿ ಶತಕ ಪೂರೈಸಿದರು. ಅವರ ಅಜೇಯ 112 ರನ್‌ 95 ಎಸೆತಗಳಿಂದ ಬಂದಿದೆ. ಸಿಡಿಸಿದ್ದು 12 ಫೋರ್‌ ಹಾಗೂ 2 ಸಿಕ್ಸರ್‌. ಇದು ಹೆಡ್‌ ಅವರ 3ನೇ ಶತಕ; ಆ್ಯಶಸ್‌ನಲ್ಲಿ ಮೊದಲನೆಯದು.

156 ರನ್‌ ಜತೆಯಾಟ:

ಇದಕ್ಕೂ ಮೊದಲು ಡೇವಿಡ್‌ ವಾರ್ನರ್‌ ಮತ್ತು ಮಾರ್ನಸ್‌ ಲಬುಶೇನ್‌ ದ್ವಿತೀಯ ವಿಕೆಟಿಗೆ 156 ರನ್‌ ಪೇರಿಸಿ ತಂಡಕ್ಕೆ ಮೇಲುಗೈ ಒದಗಿಸಿದ್ದರು. ವಾರ್ನರ್‌ ಕೇವಲ 6 ರನ್ನಿನಿಂದ ಸೆಂಚುರಿ ತಪ್ಪಿಸಿಕೊಂಡರು. 176 ಎಸೆತಗಳ ಈ ಜವಾಬ್ದಾರಿಯುತ ಆಟದ ವೇಳೆ 11 ಬೌಂಡರಿ, 2 ಸಿಕ್ಸರ್‌ ಸಿಡಿದಿತ್ತು. ಲಬುಶೇನ್‌ ಗಳಿಕೆ 117 ಎಸೆತಗಳಿಂದ 74 ರನ್‌ (6 ಬೌಂಡರಿ, 2 ಸಿಕ್ಸರ್‌). ಆಸ್ಟ್ರೇಲಿಯದ ಓಪನರ್‌ ಮಾರ್ಕಸ್‌ ಹ್ಯಾರಿಸ್‌ (3) ಬೇಗನೇ ಪೆವಿಲಿಯನ್‌ ಸೇರಿಕೊಂಡ ಬಳಿಕ ವಾರ್ನರ್‌-ಲಬುಶೇನ್‌ ಜತೆಯಾಟ ಮೊದಲ್ಗೊಂಡಿತ್ತು.

Advertisement

ಆದರೆ ಸ್ಟೀವನ್‌ ಸ್ಮಿತ್‌ (12), ಕ್ಯಾಮರಾನ್‌ ಗ್ರೀನ್‌ (0). ಅಲೆಕ್ಸ್‌ ಕ್ಯಾರಿ (12), ನಾಯಕ ಪ್ಯಾಟ್‌ ಕಮಿನ್ಸ್‌ (12) ಬೇಗನೇ ಪೆವಿಲಿಯನ್‌ ಸೇರಿಕೊಂಡರು. ಈ ಹಂತದಲ್ಲಿ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡಿದ್ದ ಹೆಡ್‌ ಇಂಗ್ಲೆಂಡಿಗೆ ತಲೆನೋವಾಗಿ ಪರಿಣಮಿಸಿದರು.

2 ವರ್ಷಗಳ ಬಳಿಕ ಮೊದಲ ಶತಕ :

ಟ್ರ್ಯಾವಿಸ್ ಹೆಡ್‌ ಪಾಲಿಗೆ ಇದು ಭರ್ಜರಿ ಕಮ್‌ ಬ್ಯಾಕ್‌. 2020ರ ಪ್ರವಾಸಿ ಭಾರತದೆದುರಿನ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯ ಸೋತ ಬಳಿಕ ಹೆಡ್‌ ಅವರನ್ನು ತಂಡದಿಂದ ಹೊರಗಿಡಲಾಗಿತ್ತು. ಮಹತ್ವದ ಹಾಗೂ ಪ್ರತಿಷ್ಠಿತ ಆ್ಯಶಸ್‌ ಸರಣಿಗೆ ಅವರನ್ನು ಮರಳಿ ಸೇರಿಸಿಕೊಂಡಾಗ ಅಚ್ಚರಿಪಟ್ಟವರೇ ಹೆಚ್ಚು. ಆದರೀಗ ಹೆಡ್‌ ತಮ್ಮ ಆಯ್ಕೆಯನ್ನು ಮೊದಲ ಅವಕಾಶದಲ್ಲೇ ಸಮರ್ಥಿಸಿಕೊಂಡಿದ್ದಾರೆ.

ಇದು 2 ವರ್ಷಗಳ ಬಳಿಕ ಹೆಡ್‌ ಬಾರಿಸಿದ ಮೊದಲ ಟೆಸ್ಟ್‌ ಶತಕ. 2019ರ ನ್ಯೂಜಿಲ್ಯಾಂಡ್‌ ಎದುರಿನ ಬಾಕ್ಸಿಂಗ್‌ ಡೇ ಟೆಸ್ಟ್‌ ನಲ್ಲಿ ಹೆಡ್‌ ಕೊನೆಯ ಸೆಂಚುರಿ ಹೊಡೆದಿದ್ದರು. ಆಸ್ಟ್ರೇಲಿಯ “ಎ’ ತಂಡದೊಂದಿಗೆ ಇಂಗ್ಲೆಂಡ್‌ನ‌ಲ್ಲಿ 3-4 ತಿಂಗಳು ಆಡಿದ್ದರಿಂದ ಇಂಥದೊಂದು ಇನ್ನಿಂಗ್ಸ್‌ ಕಟ್ಟಲು ಸಾಧ್ಯವಾಯಿತು ಎಂಬುದಾಗಿ ಹೆಡ್‌ ಪ್ರತಿಕ್ರಿಯಿಸಿದ್ದಾರೆ.

ಸ್ಟೋಕ್ಸ್‌ ಎಸೆದದ್ದು 14 ನೋಬಾಲ್‌, ಅಂಪಾಯರ್‌ ಕಂಡದ್ದು ಕೇವಲ 2:

ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯದಲ್ಲಿ ಅಂಪಾಯರ್‌ಗಳ ಗುಣಮಟ್ಟ ಭಾರೀ ವಿವಾದ ಸೃಷ್ಟಿಸಿದೆ. ಪಂದ್ಯದ ಎರಡನೇ ದಿನ ಇಂಗ್ಲೆಂಡ್‌ ತಂಡದ ವೇಗಿ ಬೆನ್‌ ಸ್ಟೋಕ್ಸ್‌ ಒಬ್ಬರೇ ಬರೋಬ್ಬರಿ 14 ನೋಬಾಲ್‌ ಎಸೆದಿದ್ದು, ಇದರಲ್ಲಿ ಅಂಪಾಯರ್ ಗುರುತಿಸಿದ್ದು 2 ನೋಬಾಲ್‌ ಮಾತ್ರ! ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಸ್ಟೋಕ್ಸ್‌ ಎಸೆದ 14 ನೋಬಾಲ್‌ಗ‌ಳ ಬಗ್ಗೆ ಪ್ರತಿಕ್ರಿಯಿಸಿರುವ ರಿಕಿ ಪಾಂಟಿಂಗ್‌, ಪಂದ್ಯದಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಅಂಪಾಯರ್‌ಗಳು ಮತ್ತು ಬಳಕೆ ಮಾಡಲಾಗಿರುವ ತಂತ್ರಜ್ಞಾನದ ಗುಣಮಟ್ಟವನ್ನು ಪ್ರಶ್ನಿಸಿದ್ದಾರೆ.

“ಈ ವರ್ಷ ನಡೆಯುತ್ತಿರುವ ಅತೀ ದೊಡ್ಡ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ತಾಂತ್ರಿಕ ದೋಷ ಎನ್ನುವುದು ಭಾರೀ ನಿರಾಸೆಯೇ ಸರಿ. ಈ ಬಗ್ಗೆ ಗಮನ ನೀಡಬೇಕಿದ್ದವರು ಇದನ್ನು ನೋಬಾಲ್‌ ಎಂದು ಪರಿಗಣಿಸೇ ಇಲ್ಲ. ಇದು ಅತ್ಯಂತ ಕಳಪೆ ಅಂಪಾಯರಿಂಗ್‌’ ಎಂದು ಪಾಂಟಿಂಗ್‌ ಟೀಕಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-147. ಆಸ್ಟ್ರೇಲಿಯ-7 ವಿಕೆಟಿಗೆ 343 (ಹೆಡ್‌ ಬ್ಯಾಟಿಂಗ್‌ 112, ವಾರ್ನರ್‌ 94, ಲಬುಶೇನ್‌ 74, ರಾಬಿನ್ಸನ್‌ 48ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next