Advertisement

ಆಷಾಢ: ಅಗತ್ಯ ಸಿದ್ಧತೆಗೆ ಡಿಸಿ ಸೂಚನೆ

12:22 PM Jun 23, 2018 | Team Udayavani |

ಮೈಸೂರು: ನಾಡ ದೇವತೆ ಶ್ರೀಚಾಮುಂಡೇಶ್ವರಿ ದೇವಸ್ಥಾನದಲ್ಲಿ ಆಷಾಢ ಶುಕ್ರವಾರ ಹಾಗೂ ಅಮ್ಮನವರ ಜನ್ಮೋತ್ಸವ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಮುಂಡಿಬೆಟ್ಟಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು  ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಸೂಚಿಸಿದರು.

Advertisement

ಚಾಮುಂಡಿಬೆಟ್ಟದ ದಾಸೋಹ ಭವನದಲ್ಲಿ ಪೂರ್ವಸಿದ್ಧತಾ ಸಭೆ ನಡೆಸಿದ ಅವರು, ಈ ವರ್ಷ ಜು.20ರಂದು ಮೊದಲನೇ ಆಷಾಢ ಶುಕ್ರವಾರ, ಜು.27ರ ಎರಡನೇ ಆಷಾಢ ಶುಕ್ರವಾರ, ಆ.3 ಮೂರನೇ ಆಷಾಢ ಶುಕ್ರವಾರ ಹಾಗೂ ಅಮ್ಮನವರ ಜನ್ಮೋತ್ಸವ, ಆ.10 ಕೊನೆಯ ಆಷಾಢ ಶುಕ್ರವಾರಗಳಂದು ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದ್ದು, ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು.

ದೇವಿಗೆ ಅಭಿಷೇಕ: ಎರಡನೇ ಅಷಾಢ ಶುಕ್ರವಾರ ಜುಲೈ 27ರಂದು ಚಂದ್ರಗ್ರಹಣವಿದ್ದು, ರಾತ್ರಿ 9ರಿಂದ ದೇವಿಗೆ ಅಭಿಷೇಕ ನಡೆಯಲಿರುವುದವರಿಂದ ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ ರಾತ್ರಿ 9ರಿಂದ ದರ್ಶನ ಇರುವುದಿಲ್ಲ. ಅಂದು ಸಂಜೆ 7 ಗಂಟೆಗೆ ಬೆಟ್ಟಕ್ಕೆ ಬಸ್‌ ಸಂಚಾರ ನಿಲ್ಲಿಸಲಾಗುವುದು ಎಂದು ಹೇಳಿದರು.

ಭದ್ರತಾ ವ್ಯವಸ್ಥೆ: ಆಷಾಢ ಶುಕ್ರವಾರಗಳಂದು ಚಾಮುಂಡಿಬೆಟ್ಟಕ್ಕೆ ಬರುವ ಎಲ್ಲ ಖಾಸಗಿ ವಾಹನಗಳನ್ನು ಹೋಟೆಲ್‌ ಲಲಿತ್‌ ಮಹಲ್‌ ಹೆಲಿಪ್ಯಾಡ್‌ ಬಳಿ ನಿಲ್ಲಿಸಿ, ಅಲ್ಲಿಂದ ಬೆಟ್ಟಕ್ಕೆ ಉಚಿತವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಬರುವ ವ್ಯವಸ್ಥೆ ಮಾಡುವುದು, ಸೂಕ್ತ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡುವುದು ಹಾಗೂ ಲಲಿತ ಮಹಲ್‌ ಹೆಲಿಪ್ಯಾಡ್‌ ಬಳಿ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಶಾಮಿಯಾನ, ಬ್ಯಾರಿಕೇಡ್‌, ವಿದ್ಯುತ್‌ ದೀಪದ ವ್ಯವಸ್ಥೆಗಳನ್ನು ತಾತ್ಕಾಲಿಕವಾಗಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ: ಸ್ವಚತೆ, ಕಸ ಸಂಗ್ರಹಣೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಹಾ ನಗರಪಾಲಿಕೆ ವತಿಯಿಂದ ಮಾಡಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲು ಬರುವಂತಹ ಕಲಾವಿದರಿಗೆ ಸೂಕ್ತ ಧ್ವನಿವರ್ಧಕ, ಕುರ್ಚಿ ಇತ್ಯಾದಿಗಳ ವ್ಯವಸ್ಥೆಯನ್ನು ದೇವಸ್ಥಾನದ ವತಿಯಿಂದ ಮಾಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಹಾಗೂ ಉಸ್ತುವಾರಿ ಮಾಡಲು ಕ್ರಮವಹಿಸಬೇಕು ಎಂದರು.

Advertisement

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬೆಟ್ಟಕ್ಕೆ ಆಗಮಿಸುವುದರಿಂದ ಮುಂಜಾಗ್ರತೆಯಾಗಿ ಭಕ್ತಾದಿಗಳ ವೈದ್ಯಕೀಯ ಚಿಕಿತ್ಸೆಗಾಗಿ ಬೇಕಾದ ಔಷಧಗಳೊಂದಿಗೆ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸುವುದು, ಆಂಬ್ಯುಲೆನ್ಸ್‌ ವ್ಯವಸ್ಥೆ ಮಾಡುವುದು ಎಂದು ಆರೋಗ್ಯ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.

ಮುಂಜಾಗ್ರತಾ ಕ್ರಮ: ಎರಡು ಅಗ್ನಿಶಾಮಕ ವಾಹನಗಳು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಬೇಕು. ದೇವಸ್ಥಾನದ ಮುಂಭಾಗದಲ್ಲಿರುವ ರಾಗರಾಗಿಣಿ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಕಲಾವಿದರಿಂದ ಅರ್ಜಿ ಆಹ್ವಾನಿಸಿ ಆಯ್ಕೆ ಮಾಡುವಂತೆ ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ ಅವರು, ಚಾಮುಂಡಿ ಬೆಟ್ಟದ ಸುತ್ತಲೂ ಹಾಗೂ ದೇವಿ ಕೆರೆಯ ಬಳಿಯಿರುವ ವಿದ್ಯುತ್‌ ದೀಪಗಳನ್ನು ದುರಸ್ತಿಗೊಳಿಸಿ ವಿದ್ಯುತ್‌ ನಿಲುಗಡೆಯಾಗದಂತೆ ಸೆಸ್ಕ್ ಎಚ್ಚರ ವಹಿಸಬೇಕು ಎಂದರು.

ಸಭೆಯಲ್ಲಿ ಉಪ ವಿಭಾಗಾಧಿಕಾರಿ ಶಿವೇಗೌಡ, ಮುಜರಾಯಿ ತಹಶೀಲ್ದಾರ್‌ ಯತಿರಾಜ್‌, ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಸಾದ್‌, ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ್‌ ದೀಕ್ಷಿತ್‌ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next