Advertisement

ದಿನಾಲೂ ಅಪ್ಡೇಟ್ ಆಗುತ್ತಿದ್ದೇನೆ..: ರಾಬರ್ಟ್ ಬೆಡಗಿ ಆಶಾ ಭಟ್

11:17 AM May 21, 2021 | Team Udayavani |

“ರಾಬರ್ಟ್‌’ ಸಿನಿಮಾದ ಮೂಲಕ ಚಂದನವನಕ್ಕೆ ಪರಿಚಯವಾದ ಚೆಲುವೆ ಆಶಾ ಭಟ್‌. ಮೊದಲ ಚಿತ್ರದಲ್ಲಿ ಸಿನಿ ಮಂದಿಯ ಗಮನ ಸೆಳೆಯುವ ಮೂಲಕ ಒಂದಷ್ಟು ಆಶಾಭಾವ ಮೂಡಿಸಿದ ಆಶಾ ಭಟ್‌, “ರಾಬರ್ಟ್‌’ ಬಳಿಕ ಯಾವ ಸಿನಿಮಾ ಮಾಡುತ್ತಾರೆ ಅನ್ನೋ ಕುತೂಹಲ  ಸಹಜವಾಗಿಯೇ ಪ್ರೇಕ್ಷಕರಲ್ಲಿತ್ತು. ಇನ್ನೇನು ಆಶಾ ಭಟ್‌ ಹೊಸ ಸಿನಿಮಾ ಅನೌನ್ಸ್‌ ಆಗಬೇಕು ಎನ್ನುವಷ್ಟರಲ್ಲಿ, ಕೊರೊನಾ ಎರಡನೇ ಅಲೆಯ ಆತಂಕದಿಂದ ಮತ್ತೂಂದು ಲಾಕ್‌ಡೌನ್‌ಘೋಷಣೆಯಾಗಿದೆ. ಸದ್ಯಕ್ಕೆ ಚಿತ್ರರಂಗದ ಬಹುತೇಕ ಚಟುವಟಿಕೆಗಳು ಬಂದ್‌ ಆಗಿದ್ದರಿಂದ, ಅನೌನ್ಸ್‌ ಆಗಬೇಕಾಗಿದ್ದ ಆಶಾ ಭಟ್‌ ಹೊಸ ಸಿನಿಮಾ ಕೂಡ ಕೆಲಕಾಲ ಮುಂದಕ್ಕೆ ಹೋಗಿದೆ. ಸದ್ಯ ಕೊರೊನಾ ಲಾಕ್‌ಡೌನ್‌ ಬ್ರೇಕ್‌ನಲ್ಲಿರುವ ಆಶಾ ಭಟ್‌ ಮನೆಯಲ್ಲೇ ಒಂದಷ್ಟು ವರ್ಕೌಟ್‌, ಪ್ರಾಕ್ಟೀಸ್‌ ಅಂಥ ಮನೆ ಮಂದಿಯ ಜೊತೆ ಸಮಯ ಕಳೆಯುತ್ತಿದ್ದಾರೆ.

Advertisement

“ಸದ್ಯಕ್ಕೆ ಲಾಕ್‌ಡೌನ್‌ ಇರೋದ್ರಿಂದ ಮನೆಯಲ್ಲೇ ಇದ್ದೀನಿ. ಮನೆಯಲ್ಲೇ ಡ್ಯಾನ್ಸ್‌ ಪ್ರಾಕ್ಟೀಸ್‌, ವರ್ಕೌಟ್‌ ಮಾಡೋದು ಮನೆಯ ಅಂಗಳದಲ್ಲಿ ಬ್ಯಾಡ್ಮಿಂಟನ್‌ ಆಡೋದು ಉಳಿದಂತೆ ಒಂದಷ್ಟು ಸಿನಿಮಾಗಳನ್ನ ನೋಡೋದು ಹೀಗೆ ದಿನ  ಕಳೆಯುತ್ತಿದೆ. ಒಂದಷ್ಟು ಒಳ್ಳೆಯ ಸ್ಕ್ರಿಪ್ಟ್, ಆಫ‌ರ್ ಬಂದಿವೆ. ಅದರ ಬಗ್ಗೆ ನಿರ್ಧಾರ  ಕೈಗೊಳ್ಳುವ ಹೊತ್ತಿಗೆ ಲಾಕ್‌ಡೌನ್‌ ಅನೌನ್ಸ್‌ ಆಗಿದೆ. ಹಾಗಾಗಿ ಸದ್ಯಕ್ಕೆ ಲಾಕ್‌ಡೌನ್‌ ಮುಗಿದು, ಇಂಡಸ್ಟ್ರಿ ಆ್ಯಕ್ಟಿವಿಟಿಸ್‌ ಮತ್ತೆ ಶುರುವಾದ ನಂತರವೇ ಹೊಸ ಸಿನಿಮಾದ ಮಾತು’ ಎನ್ನುತ್ತಾರೆ ಆಶಾ ಭಟ್‌.

ಇದನ್ನೂಓದಿ: ವೈಲೆಂಟ್ ಬಿಟ್ಟು ಸೈಲೆಂಟ್ ಆಗಿರೋಣ.. ಮಾನ್ವಿತಾ ಹೇಳಿದ ಲಾಕ್ ಡೌನ್ ಅನುಭವ

“ಕೊರೊನಾ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹರಡಲು ನಾವೆಲ್ಲರೂ ಕಾರಣ. ಹಾಗಾಗಿ ಇದನ್ನ ನಾವೆಲ್ಲರೂ ಒಟ್ಟಾಗಿಯೇ ಎದುರಿಸಬೇಕು. ಇದರಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಜವಾಬ್ದಾರಿ ಇದೆ. ಪ್ರತಿಯೊಬ್ಬರೂ, ಅವರವರ ಕರ್ತವ್ಯವನ್ನು ಅವರು ಸರಿಯಾಗಿ ನಿಭಾಯಿಸಿದರೆ, ಖಂಡಿತವಾಗಿಯೂ ಕೊರೊನಾ ವಿರುದ್ಧದ ಹೋರಾಟದಲ್ಲಿ ಗೆಲ್ಲಬಹುದು’ ಎನ್ನುವುದು ಆಶಾ ಭಟ್‌ ಮಾತು.

“ಕೊರೊನಾ ಎರಡನೇ ಅಲೆಯ ಆತಂಕ ಜೋರಾಗಿರುವುದರಿಂದ, ಅದನ್ನ ಸಮರ್ಥವಾಗಿ ಎದುರಿಸಲು ಮನಸ್ಥೈರ್ಯ ಬೆಳೆಸಿಕೊಳ್ಳಬೇಕು. ಆದಷ್ಟು ಪಾಸಿಟಿವ್‌ ಆಗಿರಬೇಕು. ನಮ್ಮ ಸುತ್ತಮುತ್ತಕೂಡ ಅಂಥ ವಾತಾವರಣ ಕ್ರಿಯೇಟ್‌ ಮಾಡಬೇಕು. ಮೊದಲು ನಾವು ಸೇಫ್ ಆಗಿದ್ದು, ನಮ್ಮವರನ್ನು ಹೇಗೆ ಸೇಫ್ ಮಾಡಬೇಕು ಎಂದು ಯೋಚಿಸಬೇಕು’ ಎಂಬ ಸಲಹೆ ಆಶಾ ಭಟ್‌ ಅವರದ್ದು.

Advertisement

ಇನ್ನು ಆಶಾ ಭಟ್‌ ಬಿಡುವಿನ ವೇಳೆಯಲ್ಲೆ ಮನೆಯಲ್ಲಿ ಏನು ಮಾಡುತ್ತಾರೆ ಅನ್ನೋದಕ್ಕೆ ಅವರ ಉತ್ತರ ಹೀಗಿದೆ. “ಈಗಂತೂ ಲಾಕ್‌ಡೌನ್‌ ಇರೋದ್ರಿಂದ, ಒಂಥರಾ ದಿನವಿಡೀ ಬಿಡುವಾಗಿಯೇ ಇರುತ್ತೇನೆ. ಆದರೆ ಯಾವಾಗಲೂ ಕೂಡ, ಏನಾದರೊಂದು ಕೆಲಸದಲ್ಲಿ ನನ್ನನು ತೊಡಗಿಸಿಕೊಳ್ಳಲು ಬಯಸುತ್ತೇನೆ. ಡ್ಯಾನ್ಸ್‌ ಪ್ರಾಕ್ಟೀಸ್‌, ವರ್ಕೌಟ್‌, ಬ್ಯಾಡ್ಮಿಂಟನ್‌, ಸಿನಿಮಾ,  ಕುಕ್ಕಿಂಗ್‌,  ಸೋಶಿಯಲ್‌ ಮೀಡಿಯಾ, ಓದುವುದು… ಹೀಗೆ ಏನಾದರೊಂದುಕೆಲಸದಲ್ಲಿ ಯಾವಾಗಲೂ ಎಂಗೇಜ್‌ ಆಗಿರುತ್ತೇನೆ. ನಾನು ಸಿನಿಮಾ ಇಂಡಸ್ಟ್ರಿಗೆ ಬಂದ ನಂತರ ಸಿನಿಮಾದ ‌ ಬಗ್ಗೆ ಹೆಚ್ಚುಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಕ‌ನ್ನಡದ ಜೊತೆಗೆ ಬೇರೆ ಬೇರೆ ಭಾಷೆಗಳ ‌ ಹತ್ತಾರು ಸಿನಿಮಾಗಳ‌ನ್ನು ನೋಡುತ್ತಿದ್ದೇನೆ. ಇತ್ತೀಚೆಗೆ “ದೃಶ್ಯಂ-2′, “ವಂಡರ್‌ ವುಮೆನ್‌’ ಸಿನಿಮಾಗಳನ್ನು ನೋಡಿದೆ. ಕ‌ಲಾವಿದೆಯಾಗಿ ನಾನು ದಿನದಿಂ‌ದ ದಿನಕ್ಕೆ ಅಪ್ಡೇಟ್‌ ಆಗಲು ಬಯಸುತ್ತೇನೆ’ ಎನ್ನುತ್ತಾರೆ ಆಶಾ ಭಟ್‌.

ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next