ಅಬುಧಾಬಿ: ಅಫ್ಘಾನಿಸ್ಥಾನ ಕ್ರಿಕೆಟ್ ತಂಡದ ಹಿರಿಯ ಆಟಗಾರ ಅಸ್ಗರ್ ಅಫ್ಘಾನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಣೆ ಮಾಡಿದ್ದಾರೆ. 33 ವರ್ಷದ ಬಲಗೈ ಆಟಗಾರ ಅಸ್ಗರ್ ಇಂದು ನಮೀಬಿಯಾ ವಿರುದ್ಧ ತನ್ನ ಕೊನೆಯ ಪಂದ್ಯವಾಡುತ್ತಿದ್ದಾರೆ.
ಅಸ್ಗರ್ ಅಫ್ಘಾನ್ ಅವರು ಅಫ್ಘಾನಿಸ್ಥಾನ ತಂಡದ ಪರವಾಗಿ ಆರು ಟೆಸ್ಟ್ ಪಂದ್ಯ, 114 ಏಕದಿನ ಪಂದ್ಯ ಮತ್ತು 75 ಟಿ20 ಪಂದ್ಯಗಳನ್ನು ಆಡಿದ್ದರು. ಅಂತಾರಾಷ್ಟ್ರೀಯ ಕರಿಯರ್ ನಲ್ಲಿ ಅಸ್ಗರ್ 4215 ರನ್ ಗಳನ್ನು ಗಳಿಸಿದ್ದಾರೆ.
2009ರಲ್ಲಿ ಸ್ಕಾಟ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಅಸ್ಗರ್, 2010ರಲ್ಲಿ ಐರ್ಲೆಂಡ್ ವಿರುದ್ಧ ಟಿ20 ಕ್ರಿಕೆಟ್ ಗೆ ಕಾಲಿರಿಸಿದ್ದರು.
ಇದನ್ನೂ ಓದಿ:ಈ ಆಟಗಾರನಿಗೆ ಯಾಕೆ ಟಿ20 ತಂಡದಲ್ಲಿ ಸ್ಥಾನ?: ಕಿಡಿಕಾರಿದ ಶೇನ್ ವಾರ್ನ್
ಅಸ್ಗರ್ ಅಫ್ಘಾನ್ ಅವರು ಅಫ್ಘಾನಿಸ್ಥಾನ ಟೆಸ್ಟ್ ತಂಡದ ಮೊದಲ ನಾಯಕ ಎಂಬ ಖ್ಯಾತಿಗೆ ಪಾತ್ರರಾದವರು. 2018ರಲ್ಲಿ ಭಾರತ ವಿರುದ್ಧ ಅಫ್ಘಾನ್ ತಂಡ ಮೊದಲ ಟೆಸ್ಟ್ ಪಂದ್ಯವನ್ನಾಡಿತ್ತು. ಅಸ್ಗರ್ ಒಟ್ಟು 115 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಎರಡು ಜಯ, ಎರಡು ಸೋಲು, 59 ಏಕದಿನ ಪಂದ್ಯಗಳಲ್ಲಿ 34 ಜಯ ಮತ್ತು 21 ಸೋಲು ಕಂಡಿದ್ದಾರೆ. ಟಿ20 ತಂಡದ ನಾಯಕನಾಗಿ ಹೆಚ್ಚು ಯಶಸ್ಸು ಗಳಿಸಿರುವ ಅಫ್ಗಾನ್ 52 ಪಂದ್ಯಗಳಲ್ಲಿ 42 ಪಂದ್ಯಗಳಲ್ಲಿ ಗೆಲುವು ಕಂಡಿದ್ದಾರೆ.