Advertisement
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಉದ್ಧವ್ ಠಾಕ್ರೆಗೆ ಗುರುವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಂತೆ ಸೂಚಿಸಿದ್ದರು. ಬಳಿಕ ಗವರ್ನರ್ ಆದೇಶವನ್ನು ಪ್ರಶ್ನಿಸಿ ಶಿವಸೇನಾ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆದರೆ ಸುಪ್ರೀಂಕೋರ್ಟ್ ಮಹಾ ವಿಕಾಸ್ ಅಘಾಡಿಯ ಅರ್ಜಿಯನ್ನು ವಜಾಗೊಳಿಸಿ, ಬಹುಮತ ಸಾಬೀತುಪಡಿಸುವಂತೆ ಆದೇಶ ನೀಡಿತ್ತು.
Related Articles
Advertisement
ಜ್ಯೋತಿರಾದಿತ್ಯ ಸಿಂಧ್ಯಾ ಬಂಡಾಯವೆದ್ದ ಪರಿಣಾಮ ಕಮಲನಾಥ್ ನೇತೃತ್ವದ ಸರ್ಕಾರ ಮಾರ್ಚ್ 10ರಂದು ಪತನಗೊಂಡಿತ್ತು. ಜ್ಯೋತಿರಾದಿತ್ಯ ಹಾಗೂ 22 ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದರು.
ದೇವೇಂದ್ರ ಫಡ್ನವೀಸ್-ಮಹಾರಾಷ್ಟ್ರ:
2019 ನವೆಂಬರ್ 26: ಮಹಾರಾಷ್ಟ್ರದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಅಧಿಕಾರ ವಹಿಸಿಕೊಂಡ ಕೇವಲ 80 ಗಂಟೆಗಳ ನಂತರ ಸಿಎಂ ಸ್ಥಾನಕ್ಕೆ ಫಡ್ನವೀಸ್ ರಾಜೀನಾಮೆ ಘೋಷಿಸಿದ್ದರು.
ಅಜಿತ್ ಪವಾರ್ ರಾಜೀನಾಮೆ ಬಳಿಕ, ನಮಗೆ ಬಹುಮತ ಇಲ್ಲ, ನಾವು ಯಾವುದೇ ಕುದುರೆ ವ್ಯಾಪಾರ ನಡೆಸುವುದಿಲ್ಲ ಎಂದು ತಿಳಿಸಿದ್ದ ಫಡ್ನವೀಸ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನಂತರ ಶಿವಸೇನಾ, ಎನ್ ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರದ ಗದ್ದುಗೆ ಏರಿ ಉದ್ಧವ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಬಿಎಸ್ ಯಡಿಯೂರಪ್ಪ- ಕರ್ನಾಟಕ
2018, ಮೇ 19: 2018ರ ಮೇ 17ರಂದು ಬಿಎಸ್ ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಅಗತ್ಯವಿರುವ ಶಾಸಕರ ಬೆಂಬಲ ಇಲ್ಲದ ಪರಿಣಾಮ ಮೇ 19ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ರಾಜೀನಾಮೆ ನೀಡುವ ಮುನ್ನ ವಿಧಾನಸಭೆಯಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ಬಿಜೆಪಿ ಪಕ್ಷಕ್ಕೆ ರಾಜ್ಯದಲ್ಲಿ ಜನಾರ್ಶಿವಾದ ಇದ್ದು 104 ಸ್ಥಾನಗಳಲ್ಲಿ ಜಯ ಗಳಿಸಿದ್ದೇವೆ. ಮತದಾರರು ಕಾಂಗ್ರೆಸ್ ಅಥವಾ ಜೆಡಿಎಸ್ ಗೆ ಅಧಿಕಾರ ನೀಡಿಲ್ಲ. ಕಳೆದ ಎರಡು ವರ್ಷಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಾಗ ಜನರ ಮುಖದಲ್ಲಿ ನೋವನ್ನು ಕಂಡಿದ್ದೇನೆ. ಜನರ ಪ್ರೀತಿ ವಿಶ್ವಾಸವನ್ನು ನಾನೆಂದಿಗೂ ಮರೆಯಲಾರೆ ಎಂದು ಹೇಳಿ, ರಾಜೀನಾಮೆ ಘೋಷಿಸಿದ್ದರು. ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚಿಸಿತ್ತು.
ನಬಮ್ ಟುಕಿ-ಅರುಣಾಚಲ ಪ್ರದೇಶ:
2016, ಜುಲೈ 16: ಜುಲೈ 13ರಂದು ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಅರುಣಾಚಲ ಪ್ರದೇಶ ರಾಜ್ಯಪಾಲ ತಥಾಗತ ರಾಯ್ ಅವರು ನಬಮ್ ಟುಕಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಮರು ಅಧಿಕಾರದ ಗದ್ದುಗೆ ಏರುವಂತೆ ಸೂಚನೆ ನೀಡಿದ್ದರು. ಅಲ್ಲದೇ ಜುಲೈ 16ರಂದು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಸೂಚಿಸಿದ್ದರು.ಜುಲೈ 16ರಂದು ವಿಶ್ವಾಸಮತ ಯಾಚನೆಗೆ ಕೆಲವೇ ಗಂಟೆಗಳ ಮೊದಲು ನಮಬ್ ಟುಕಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಜಿತನ್ ರಾಮ್ ಮಾಂಝಿ-ಬಿಹಾರ:
2015, ಫೆಬ್ರುವರಿ 20: ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತುಪಡಿಸುವ ಮುನ್ನವೇ ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ರಾಜೀನಾಮೆ ನೀಡಿದ್ದರು. ಲೋಕಸಭಾ ಚುನಾವಣೆಯಲ್ಲಿ ಜೆಡಿಯು ಪಕ್ಷ ಹೀನಾಯ ಸೋಲು ಅನುಭವಿಸಿದ್ದರಿಂದ ನೈತಿಕ ಹೊಣೆ ಹೊತ್ತು ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಮಾಂಝಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದರು. ಆದರೆ ನಿತೀಶ್ ಮತ್ತು ಮಾಂಝಿ ನಡುವಿನ ಮುಸುಕಿನ ಗುದ್ದಾಟದ ಪರಿಣಾಮ ಮಾಂಝಿ ಅವರನ್ನು ಜೆಡಿಯುನಿಂದ ಉಚ್ಛಾಟಿಸಲಾಗಿತ್ತು. ನಂತರ ಬಹುಮತ ಸಾಬೀತುಪಡಿಸಲು ಸೂಚಿಸಲಾಗಿತ್ತು. ಕೊನೆಗೆ ಮಾಂಝಿ ಬಹುಮತ ಸಾಬೀತುಪಡಿಸುವ ಮುನ್ನ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.