Advertisement

ಬಿಜೆಪಿ ಸೇರಿದಾಕ್ಷಣ ಶುದ್ಧರಾಗಲು ಆ ಪಕ್ಷ ವಾಷಿಂಗ್‌ ಮಶೀನಾ: ರಮಾನಾಥ ರೈ

05:26 PM May 06, 2024 | Team Udayavani |

■ ಉದಯವಾಣಿ ಸಮಾಚಾರ
ಕಾರವಾರ: ಕಾಂಗ್ರೆಸ್‌ನಲ್ಲಿದ್ದ ಭ್ರಷ್ಟಾಚಾರಿಗಳು ಬಿಜೆಪಿ ಸೇರಿದ ಮೇಲೆ ಹೇಗೆ ಒಳ್ಳೆಯ ಜನರಾಗುತ್ತಾರೆ? ಬಿಜೆಪಿ ಏನು ವಾಶಿಂಗ್‌ ಮಶೀನಾ? ಆ ಪಕ್ಷ ಸೇರಿದ ಮೇಲೆ ಪರಿಶುದ್ಧ ಆಗಲಿಕ್ಕೆ? ಎಂದು ಮಾಜಿ ಸಚಿವ ರಮಾನಾಥ ರೈ ಪ್ರಶ್ನಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀನು ತಿನ್ನುವವರ ಬಗ್ಗೆ ಪ್ರಧಾನಿ ಮಾತನಾಡುತ್ತಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನಿಮ್ಮ ಕರಿಮಣಿ ಸರ ಉಳಿಯಲ್ಲ ಎನ್ನುತ್ತಾರೆ. ಇವೆಲ್ಲ ಪ್ರಧಾನಿಗಳು ಮಾತನಾಡುವ ವಿಷಯವೇ? ಅವರು ಹೇಳುವುದರಲ್ಲಿ ಅಸಲಿಯತ್ತಿಲ್ಲ. ಮತಕ್ಕಾಗಿ ಸಂದರ್ಭಕ್ಕನುಸಾರವಾಗಿ ಮಾತನಾಡುತ್ತಾರೆ ಎಂದರು.

ಬಿಜೆಪಿ ಸರ್ಕಾರದಲ್ಲಿ ಕಪ್ಪು ಹಣ ಚುನಾವಣಾ ಬಾಂಡ್‌ ಮೂಲಕ ದುಪ್ಪಟ್ಟಾಗಿದೆ. ಹಸಿವಿನ ವಿಷಯ ಬಂದಾಗ ಅದನ್ನು ಬದಿಗೆ ಸರಿಸಿ, ಭಾವನಾತ್ಮಕವಾಗಿ ದೇವರು, ಧರ್ಮದ ವಿಷಯ ಮಾತನಾಡುತ್ತಾರೆ. ಬಿಜೆಪಿಯ ಪುಢಾರಿಗಳು ಕಾಂಗ್ರೆಸ್‌ ಮಾಡಿದ್ದ ಸಾಲ ಈಗ ತುಂಬುತ್ತಿದ್ದೇವೆ ಎನ್ನುತ್ತಾರೆ. ಬಿಜೆಪಿ ಸರ್ಕಾರದ ಹತ್ತು ವರ್ಷದಲ್ಲಿ ಸಾಲ 174 ಲಕ್ಷ ಕೋಟಿ ರೂ.ಆಗಿದೆ.ಮೋದಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಸಾಲ ನಾಲ್ಕು ಪಟ್ಟು ಹೆಚ್ಚಿದೆ ಎಂದರು.

ಬಿಜೆಪಿ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಲ್ಲಿ ಶೇ. 10 ಕೂಡ ಈಡೇರಿಸಿಲ್ಲ. ಕಾಂಗ್ರೆಸ್‌ ಶೇ.90 ರಷ್ಟು ಈಡೇರಿಸಿದೆ. ಜನರನ್ನು ಋಣಮುಕ್ತ ಮಾಡಿದ್ದು ಕಾಂಗ್ರೆಸ್‌. ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಜನರ ಜೀವನ ಸುಧಾರಿಸಿದೆ. ದಿ|ಇಂದಿರಾ ಗಾಂಧಿಯವರ20 ಅಂಶಗಳ ಕಾರ್ಯಕ್ರಮದಿಂದ ಬಡಜನರ ಆರ್ಥಿಕತೆ ಸುಧಾರಣೆಯಾಗಿದೆ ಎಂದರು.

ಕಾಂಗ್ರೆಸ್‌ ಬಡವರಿಗೆ ಅನ್ಯಾಯ ಮಾಡಿಲ್ಲ. ಪಡಿತರ ವ್ಯವಸ್ಥೆ ಜಾರಿಗೆ ತಂದಿದ್ದು ಇಂದಿರಾಗಾಂಧಿ . ಆಹಾರ ಭದ್ರತಾ ಕಾಯ್ದೆಯಿಂದ ಜನರ ಬದುಕನ್ನು ಹಸನುಗೊಳಿಸಿದ್ದು ಮನಮೋಹನ್‌ ಸಿಂಗ್‌ ಸರ್ಕಾರ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಏಳು ಕೇಜಿ ಅಕ್ಕಿ ಕೊಡಲಾಗುತ್ತಿತ್ತು. ಬಿಜೆಪಿ ಬಂದ ಮೇಲೆ ಅದನ್ನು ಐದು ಕೇಜಿಗೆ ಇಳಿಸಿದರು. ಆದರೆ ಈ ಬಾರಿ ಐದು ಕೇಜಿ ಜೊತೆಗೆ ಇನ್ನೈದು ಕೇಜಿ ಕೊಡಲು ತೀರ್ಮಾನಿಸಲಾಗಿತ್ತು. ಆಹಾರ ಕಾಯ್ದೆಯಡಿ ಅಕ್ಕಿ ಕೇಳಿದರೂ ಕೇಂದ್ರ ಅಕ್ಕಿ ಕೊಟ್ಟಿಲ್ಲ ಎಂದು ಆರೋಪಿಸಿದರು. ಪ್ರಧಾನಿ ಅಭ್ಯರ್ಥಿ ಯಾರೆಂದು ನಿರ್ಧರಿಸುವಲ್ಲಿ ಕಾಂಗ್ರೆಸ್‌ ಗೊಂದಲದಲ್ಲಿದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಬಿಜೆಪಿ “ಭವ್ಯ ಮೈತ್ರಿ’ ಮಾಡಿದ್ದಾಗಲೂ ಯಾರೂ ಪ್ರಧಾನಿ ಅಭ್ಯರ್ಥಿ ಇರಲಿಲ್ಲ.

Advertisement

ಚುನಾವಣೆಯಾಗಲಿ, ಅಭ್ಯರ್ಥಿಯನ್ನು ಮುಂದೆ ನೋಡೋಣ. ಅಧಿಕಾರಕ್ಕಾಗಿ ಎಲ್ಲರೂ ಹೋರಾಟ ಮಾಡುತ್ತಾರೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಲು ಅವಕಾಶವಿದೆ. ಮೋದಿ ಯಾಕೆ ವಾರಣಾಸಿಯಿಂದ ಸ್ಪರ್ಧೆ ಮಾಡಿದ್ದಾರೆ? ಅದನ್ನು ನಾವು ಪ್ರಶ್ನೆ ಮಾಡಬಾರದು. ಸುಳ್ಳು ಹೇಳಿ ಯಾಮಾರಿಸುವವರು ಅವರು. ಒಂದು ಸುಳ್ಳು ಹೇಳಿ ಒಮ್ಮೆ ಮೋಸ ಮಾಡಬಹುದು. ಪ್ರತಿ ಬಾರಿನೂ ಸುಳ್ಳು ಹೇಳಿ ಜನರನ್ನು ನಂಬಿಸಲು ಆಗಲ್ಲ ಎಂದರು.

ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಡಾ|ಅಂಜಲಿ ನಿಂಬಾಳ್ಕರ್‌ ಅವರಿಗೆ ವೈದ್ಯರಾಗಿ, ಶಾಸಕರಾಗಿ ಕೆಲಸ ಮಾಡಿದ ಅನುಭವವಿದೆ. ಅವರು ಈ ಕ್ಷೇತ್ರದ ಕಾವಲುಗಾರರಾಗಿ ಕೆಲಸ ಮಾಡುತ್ತಾರೆ. ಅವರಿಗೆ ಮತ ನೀಡಿ ಗೆಲ್ಲಿಸಿ ಎಂದು ರಮಾನಾಥ ರೈ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಶಂಭು ಶೆಟ್ಟಿ , ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಸಾಹಿರಾ ಶೆಹಜಾದ್‌ ,ಸಾಹಿಲ್‌ ಖಾನ್‌,ರಾಣೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next