ಮುಂಬಯಿ:ಪರಿಷತ್ ಚುನಾವಣೆಯಲ್ಲಿ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ನೇತೃತ್ವದ ಸರ್ಕಾರಕ್ಕೆ ತೀವ್ರ ಮುಖಭಂಗವಾದ ಬೆನ್ನಲ್ಲೇ ಶಿವಸೇನಾ ಮುಖಂಡ ಏಕನಾಥ್ ಶಿಂಧೆ ನೇತೃತ್ವದಲ್ಲಿ 22ಕ್ಕೂ ಅಧಿಕ ಮಂದಿ ಶಾಸಕರು ಗುಜರಾತ್ ನ ಮೆರಿಡಿಯನ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡುವ ಮೂಲಕ ಬಂಡಾಯದ ಕಹಳೆ ಮೊಳಗಿದ್ದಾರೆ.
ಇದನ್ನೂ ಓದಿ:Watch: 46 ವರ್ಷಗಳಿಂದ ತೇಲುತ್ತಿದ್ದ ಪ್ರಸಿದ್ಧ ಹಾಂಗ್ ಕಾಂಗ್ ರೆಸ್ಟೋರೆಂಟ್ ಮುಳುಗಡೆ!
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರುವ ಶಿಂಧೆ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ವರದಿ ತಿಳಿಸಿದೆ. ಅದೇ ರೀತಿ ಪಾಲ್ಘಾಟ್ ಶಾಸಕ ಶ್ರೀನಿವಾಸ್ ವಂಗಾ, ಅಲಿಬಾಗ್ ಶಾಸಕ ಮಹೇಂದ್ರ ದಳ್ವಿ ಮತ್ತು ಭಿವಂಡಿ ಗ್ರಾಮಾಂತರ ಶಾಸಕ ಶಾಂತರಾಮ್ ಮೋರೆ ಕೂಡಾ ಬಂಡಾಯ ಎದ್ದಿದ್ದು, ಗುಜರಾತ್ ಹೋಟೆಲ್ ನಲ್ಲಿ ಶಿವಸೇನಾದ ಐವರು ಸಚಿವರು ಸೇರಿದಂತೆ 22 ಮಂದಿ ವಾಸ್ತವ್ಯ ಹೂಡಿದ್ದಾರೆ.
ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗುತ್ತಿದ್ದಂತೆಯೇ ಉದ್ಧವ್ ಠಾಕ್ರೆ ತುರ್ತು ಸಭೆಯನ್ನು ಕರೆದಿದ್ದಾರೆ. ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವನ್ನು ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಸರ್ಕಾರವನ್ನು ಉರುಳಿಸಿದಂತೆ ಇಲ್ಲಿಯೂ ಬಿಜೆಪಿ ಸಂಚು ರೂಪಿಸಿದೆ ಎಂದು ಸಂಜಯ್ ರಾವತ್ ಆರೋಪಿಸಿದ್ದಾರೆ.
ವಿಪಕ್ಷ ಬಿಜೆಪಿಯ ಮೂಲಗಳ ಪ್ರಕಾರ, ಏಕನಾಥ್ ಶಿಂಧೆ ಸೇರಿದಂತೆ 13 ಮಂದಿ ಬಿಜೆಪಿ ಶಾಸಕರು ಹಾಗೂ ಐವರು ಪಕ್ಷೇತರ ಶಾಸಕರು ಸೂರತ್ ನ ಹೋಟೆಲ್ ನಲ್ಲಿ ತಂಗಿರುವುದಾಗಿ ತಿಳಿಸಿದೆ. ಶಿಂಧೆ ಎನ್ ಸಿಪಿಯ ವರಿಷ್ಠ ಶರದ್ ಪವಾರ್ ಅವರ ಜೊತೆಗೆ ಮಾತನಾಡದೇ ನಾವು ಈ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ ಎಂದು ರಾವತ್ ತಿಳಿಸಿದ್ದಾರೆ.
ಮಹಾರಾಷ್ಟ್ರ ಬಿಜೆಪಿ ಮುಖಂಡ, ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಈಗಾಗಲೇ ದೆಹಲಿಯನ್ನು ತಲುಪಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಶಿವಸೇನಾ ಶಾಸಕರು ಅಹಮದಾಬಾದ್ ಗೆ ತೆರಳಲಿದ್ದು, ಅಲ್ಲಿ ಶಾ ಜೊತೆ ಮಾತುಕತೆ ನಡೆಯುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.