ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅಮೇಠಿ ಕ್ಷೇತ್ರ ಕೈಬಿಟ್ಟು, ರಾಯ್ ಬರೇಲಿಯಿಂದ ಸ್ಪರ್ಧಿಸುವುದಾಗಿ ಕಾಂಗ್ರೆಸ್ ಅಧಿಕೃತವಾಗಿ ಬಿಡುಗಡೆ ಮಾಡಿರುವ ಪಟ್ಟಿಯಿಂದ ಖಚಿತವಾಗಿದ್ದು, ಮತ್ತೊಂದೆಡೆ ವಯನಾಡ್ ಸಂಸದ ಉತ್ತರಪ್ರದೇಶದ ಅಮೇಠಿ ಕ್ಷೇತ್ರ ಬಿಟ್ಟು ಓಡಿ ಹೋಗಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಇದನ್ನೂ ಓದಿ:Belagavi; ನೇಹಾ ಹತ್ಯೆ ಪ್ರಕರಣ ಸಿಬಿಐಗೆ ಕೊಡಿ, ಆರೋಪಿಗಳ ತಲೆ ಕೆಳಗೆ ಮಾಡ್ತೀವಿ: ಶಾ ಗುಡುಗು
ಸ್ಮೃತಿ ಇರಾನಿ ವಿರುದ್ಧ ರಾಹುಲ್ ಸ್ಪರ್ಧಿಸುವ ಸಾಧ್ಯತೆಯೇ ಇಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸ್ಮೃತಿ ಇರಾನಿ ವಿರುದ್ಧ ಪರಾಜಯಗೊಂಡಿದ್ದು, ಈ ಬಾರಿ ಕಾಂಗ್ರೆಸ್ ನಿಂದ ಗಾಂಧಿ ಕುಟುಂಬದ ನಿಷ್ಠಾವಂತ ಕೆ.ಎಲ್.ಶರ್ಮಾ ಅಖಾಡಕ್ಕಿಳಿದಿದ್ದಾರೆ.
ಈ ಎಲ್ಲಾ ನಾಟಕ ಯಾಕೆ, ರಾಹುಲ್ ಗಾಂಧಿ ಇಲ್ಲಿಂದ ಓಡಿಹೋಗಿದ್ದು, ಅಮೇಠಿಗೆ ಕೆ.ಎಲ್ ಶರ್ಮಾ ಅವರನ್ನು ಕಣಕ್ಕಿಳಿಸಿದೆ. ಇದು ಅಮೇಠಿಯನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿದೆ ಎಂಬುದಕ್ಕೆ ಪುರಾವೆಯಾಗಿದೆ. ಸ್ಮೃತಿ ಇರಾನಿ ಮುಂದೆ ರಾಹುಲ್ ಗೆಲುವು ಅಸಾಧ್ಯ ಎಂಬುದು ಮನವರಿಕೆಯಾಗಿದೆ ಎಂದು ಬಿಜೆಪಿ ವಕ್ತಾರ ಶೆಹಝಾದ್ ಪೂನಾವಾಲಾ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿಯನ್ನು ರಾಯ್ ಬರೇಲಿಗೆ ಕಳುಹಿಸಿದ್ದು, ಅದು ಸುರಕ್ಷತೆಯ ಸ್ಥಾನ ಎಂಬುದಾಗಿ ಪರಿಗಣಿಸಿದೆ. ಆದರೆ ಇದು ವಯನಾಡ್ ಜನತೆಗೆ ಎಸಗಿದ ಮೋಸವಲ್ಲವೇ? ರಾಯ್ ಬರೇಲಿಯಲ್ಲಿ ಗೆದ್ದರೂ ಕೂಡಾ ಇದು ಕಾಂಗ್ರೆಸ್ ನ ಯೂಸ್ ಆಂಡ್ ಥ್ರೋ ಮನಸ್ಥಿತಿಯನ್ನು ಪ್ರದರ್ಶಿಸುತ್ತದೆ. ಹಾಗಾಗಿ ರಾಯ್ ಬರೇಲಿ ಜನತೆಯೂ ಕೂಡಾ ರಾಹುಲ್ ಗಾಂಧಿಯನ್ನು ತಿರಸ್ಕರಿಸಬೇಕು ಎಂದು ಪೂನಾವಾಲ್ ಹೇಳಿದರು.