Advertisement

ಜ್ಞಾನ ಹೆಚ್ಚಾದಂತೆ ಶೋಷಣೆಯೂ ಹೆಚ್ಚಾಯ್ತು

01:02 PM Jun 09, 2017 | Team Udayavani |

ಮೈಸೂರು: ವೇದಗಳ ಕಾಲದಲ್ಲಿ ಸಮಾಜದಲ್ಲಿದ್ದ ಶೋಷಣೆಯನ್ನು ಜ್ಞಾನ ತೊಡಯಬೇಕಿತು. ಆದರೆ, ಅದೇ ಜ್ಞಾನವೇ ಹಲವು ವರ್ಗಗಳನ್ನು ಶೋಷಣೆಗೆ ಗುರಿ ಮಾಡಿದೆ ಎಂದು ಮೈಸೂರಿನ ರಮ್ಮನಹಳ್ಳಿ ಬಸವಧ್ಯಾನ ಮಂದಿರದ ಶರಣ ಬಸವಲಿಂಗಮೂರ್ತಿ ವಿಷಾದಿಸಿದರು.

Advertisement

 ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಲಿತ ವಚನಕಾರರ ಜಯಂತ್ಯುತ್ಸವ ಸಮಿತಿ ವತಿಯಿಂದ ನಗರದ ಕಲಾಮಂದಿರದ ಮನೆಯಂಗಳದಲ್ಲಿ ಗುರುವಾರ ಆಯೋಜಿಸಿದ್ದ ದಲಿತ ವಚನಕಾರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಗತ್ತು ಸೃಷ್ಟಿಯಾದ ಸಂದರ್ಭದಲ್ಲಿ ಯಾವುದೇ ಜಾತಿ, ಧರ್ಮಗಳು ಇರಲಿಲ್ಲ. ಹೀಗಾಗಿ ವೇದ ಪೂರ್ವದಲ್ಲಿ ಜಾತಿ, ಧರ್ಮಗಳಿರಲಿಲ್ಲ. ಆದರೆ ಮಾನವನ ವಿಕಾಸವಾದಂತೆ ನಾವೆಲ್ಲರೂ ನಾಗರಿಕತೆಯತ್ತ ಮುಖ ಮಾಡಿದ್ದು, ಅದರಂತೆ ವೇದಗಳ ಕಾಲದ ನಂತರ ಅಕ್ಷರಸ್ಥರು ಹಾಗೂ ಅನಕ್ಷರಸ್ಥರೆಂಬ ಬೇಧ ಶುರುವಾಗಿ, ಜೀತ ಪದ್ಧತಿ ಆರಂಭಗೊಂಡಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೇದ ಕಾಲದಲ್ಲಿ ಸಮಾಜದಲ್ಲಿದ್ದ ಶೋಷಣೆಯನ್ನು ಜ್ಞಾನ ಎಂಬುದು ತೊಡೆಯಬೇಕಾಗಿತ್ತು. ಆದರೆ, ಸಾರ್ವಜನಿಕವಾಗಬೇಕಿದ್ದ ಜ್ಞಾನ ಕೇವಲ ಉಳ್ಳವರ ಪರವಾಗಿ ಮಾತ್ರವೇ ಉಳಿದ ಪರಿಣಾಮ ಕೆಲವು ಸಮುದಾಯಗಳು ಶೋಷಣೆಗೆ ಗುರಿಯಾಗಬೇಕಾಯಿತು. ಅಲ್ಲದೆ ಅಕ್ಷರಸ್ಥರು ಹಾಗೂ ಪುರೋಹಿತರು ವೇದ, ಉಪನಿಷತ್ತನ್ನು ತಮಗೆ ಬೇಕಾದಂತೆ ಕರೆದುಕೊಂಡರು. ಇದರಿಂದಾಗಿ ಸಮಾಜದಲ್ಲಿ ಭೇದ ಭಾವಗಳು ಹೆಚ್ಚಾಯಿತು. ಇದೇ ಸಂದರ್ಭದಲ್ಲಿ ವರ್ಣಗಳು ಸಹ ಸೃಷ್ಟಿಯಾಯಿತು ಎಂದರು. 

ರಾಮಾನುಜಚಾರ್ಯರು ಶೋಷಿತರನ್ನು ಹರಿಜನರೆಂದು ಕರೆದು ದೀಕ್ಷೆ ನೀಡಿದರು, ಸಹಪಂಕ್ತಿ ಭೋಜನಕ್ಕೆ ಅವಕಾಶ ನೀಡಲಿಲ್ಲ. ಆದರೆ 12ನೇ ಶತಮಾನದಲ್ಲಿ ಬಸವಣ್ಣ ಎಲ್ಲಾ ಶೋಷಿತರನ್ನು ಒಗ್ಗೂಡಿಸಿದ ಪರಿಣಾಮ ಬಸವಣ್ಣನ ಕಾಲದಲ್ಲಿ 700ಕ್ಕೂ ಹೆಚ್ಚು ವಚನಕಾರರು ಬೆಳಕಿಗೆ ಬಂದರಲ್ಲದೆ, ಶೂದ್ರರು ಸಹ ಸಾಹಿತ್ಯ ಕ್ರಾಂತಿ ಮಾಡಿದರು ಎಂದು ತಿಳಿಸಿದರು. 

Advertisement

ಮೈಲ್ಯಾಕ್‌ ಅಧ್ಯಕ್ಷ ಎಚ್‌.ಎ. ವೆಂಕಟೇಶ್‌ ಮಾತನಾಡಿ, ವಚನಗಳು ಜನ ಸಾಮಾನ್ಯರಿಗೆ ಹತ್ತಿರವಾಗಿರುವ ಹಿನ್ನೆಲೆಯಲ್ಲಿ ವಚನಕಾರರು ಇಂದಿಗೂ ಜನ ಮಾನಸದಲ್ಲಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ ನ್ಯಾಯಕ್ಕಾಗಿ ವಚನಗಳ ಮೂಲಕ ಸಮಾಜವನ್ನು ಬಡಿದೆಬ್ಬಿಸುವ ಕೆಲಸ ಮಾಡಿದ್ದರು. ಆ ಮೂಲಕ ಹಲವು ವಚನಕಾರರು ತಮ್ಮ ಅನುಭವದಿಂದ ವಚನಗಳಿಂದ ಶ್ರಮದಿಂದ ಬದುಕುವ ವರ್ಗ, ಬಡವರ ಕಷ್ಟಗಳನ್ನು ಬಿಂಬಿಸಿದ್ದರು.

ಅಲ್ಲದೆ ಬಸವಣ್ಣ ಸೇರಿದಂತೆ ಹಲವು ವಚನಕಾರರು, ಅಂಬೇಡ್ಕರ್‌, ದೇವರಾಜ ಅರಸು ಸಮಾನತೆಯ ಕನಸನ್ನು ಸಾಕಾರಗೊಳಿಸುವ ಪ್ರಯತ್ನ ಮಾಡಿದರು. ಹೀಗಾಗಿ ಇವರುಗಳ ಜಯಂತಿಗಳಿಗೆ ರಜೆ ನೀಡುವುದು ಸರಿಯಲ್ಲ ಎಂದ ಅವರು, ಇದರ ಬದಲು ಜೀವನ‌ ಸಂದೇಶಗಳನ್ನು ಪ್ರತಿಯೊಬ್ಬರಿಗೆ ತಲುಪಿಸಿದಾಗ ಮಾತ್ರವೇ ಅವರ ಜಯಂತಿ ಸಾರ್ಥಕತೆ ಪಡೆಯುತ್ತದೆ ಎಂದು ಹೇಳಿದರು.

ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ, ಮೈಸೂರು ಉಪ ವಿಭಾಗಾಧಿಕಾರಿ ಶಿವೇಗೌಡ, ಸಾಹಿತಿ ಪೊ›. ಕೆ.ಎಸ್‌.ಭಗವಾನ್‌, ಸರ್ವಜನಾಂಗ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವೇಣುಗೋಪಾಲ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಚೆನ್ನಪ್ಪಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next