Advertisement

Koppala; ಕಾಂಗ್ರೆಸ್ ಗ್ಯಾರಂಟಿ ಉಳಿಯಲ್ಲ, ಮೋದಿ ಗ್ಯಾರಂಟಿ ಮಾತ್ರ ಶಾಶ್ವತ: ಎ.ಎಸ್.ನಡಹಳ್ಳಿ

12:37 PM Apr 11, 2024 | Team Udayavani |

ಕೊಪ್ಪಳ: ಹಿಂದೆ ಅಪ್ಪ ಮಾಡಿದ ಗಳಿಕೆ ಖರ್ಚು ಮಾಡುವುದಲ್ಲ. ಮೋದಿ ಅವರ ಆರ್ಥಿಕ ನೀತಿಯಿಂದ ರಾಜ್ಯದಲ್ಲಿ ಗ್ಯಾರಂಟಿ ಹಣ ವಿತರಣೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಉಳಿಯಲ್ಲ, ಮೋದಿ ಗ್ಯಾರಂಟಿ ಮಾತ್ರ ಶಾಶ್ವತ ಉಳಿಯಲಿವೆ ಎಂದು ಕೊಪ್ಪಳದಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್ ನಡಹಳ್ಳಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ದೇಶ ಲೋಕಸಭಾ ಚುನಾವಣೆ ಎದುರಿಸುತ್ತಿದೆ. ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಮೋದಿ ಅವರು ಜನಪ್ರಿಯ ನಾಯಕ ಎಂದೆನಿಸಿದ್ದಾರೆ. ಮೋದಿ ದೇಶಕ್ಕೆ ಅಷ್ಟೇ ಅಲ್ಲ ವಿಶ್ವದ ನಾಯಕ ಎನಿಸಿದ್ದಾರೆ. ಅನೇಕ ಸಂಸ್ಥೆಗಳು ಅವರನ್ನು ನಾಯಕ ಎಂದಿವೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಿದೆ. ರೈಪ ಪರ ಯೋಜನೆಗಳನ್ನು ಕಾಂಗ್ರೆಸ್ ರದ್ದು ಮಾಡಿದೆ. ರಾಜ್ಯದಲ್ಲಿ ಪಿಎಂ ಕಿಸಾನ್ ಯೋಜನೆ ರದ್ದು ಮಾಡಿದೆ‌. ಕೇಂದ್ರ ಪಿಎಂ ಕಿಸಾನ್ ನಡಿ 6 ಸಾವಿರ ಕೊಡುತ್ತಿದೆ. ಹಿಂದೆ ಸಿಎಂ ಆಗಿದ್ದ ಬಿ ಎಸ್ ಯಡಿಯೂರಪ್ಪ ಅವರ ಸರ್ಕಾರ 4 ಸಾವಿರ ಕೊಡುತ್ತಿದ್ದರು. ಈಗ ಕಾಂಗ್ರೆಸ್ ಸರ್ಕಾರ 4 ಸಾವಿರ ರದ್ದು ಪಡಿಸಿದೆ. ಹಿಂದೆ ರೈತರ ಪಂಪ್ ಸೆಟ್ ಗೆ 10 ಹೆಚ್.ಪಿ ವರೆಗೂ ಉಚಿತ ವಿದ್ಯುತ್ ಪೂರೈಕೆ ಮಾಡಿದೆ. ಬಿಜೆಪಿ ಕಡಿಮೆ‌ ದರದಲ್ಲಿ ವಿದ್ಯುತ್ ಕೊಡುತ್ತಿತ್ತು. ಕಾಂಗ್ರೆಸ್ ಸರ್ಕಾರ‌ ಅಧಿಕಾರಕ್ಕೆ ಬಂದ ಬಳಿಕ ರೈತರ ವಿದ್ಯುತ್ ಪೂರೈಕೆಯ ಸಬ್ಸಿಸಿ ಯೋಜನೆ ರದ್ದು ಮಾಡಿದೆ. ರಾಜ್ಯದಲ್ಲಿ ಹಾಲು ಉತ್ಪಾದಕ ಸಂಖ್ಯೆ ಹೆಚ್ಚಿದೆ. ರೈತ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಯಡಿಯೂರಪ್ಪ ಸರ್ಕಾರ ಹಾಲಿಗೆ 5 ರೂ. ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹ ಕೊಟ್ಟಿದೆ. ಕಾಂಗ್ರೆಸ್ ಸರ್ಕಾರ ಅದನ್ನು ಬಂದ್‌ ಮಾಡಿದೆ. ನಮ್ಮ ಹೋರಾಟದ ಬಳಿಕ ಸ್ವಲ್ಪ ಹಣ ಕೊಟ್ಟಿದೆ. ಬೊಮ್ಮಾಯಿ ಸರ್ಕಾರವು ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿ ಮಾಡಿತ್ತು. ಕಾಂಗ್ರೆಸ್ ಸರ್ಕಾರ ಅದನ್ನು ರದ್ದು ಮಾಡಿದೆ. ಕಾಂಗ್ರೆಸ್ ಸರ್ಕಾರ ರೈತರ ಯೋಜನೆ ಸಂಪೂರ್ಣ ಬಂದ್‌ ಮಾಡಿವೆ. ಕಾಂಗ್ರೆಸ್ ರೈತ ವಿರೋಧಿ ನಿಲುವು ತಾಳಿದೆ. ಬಿಜೆಪಿ ಸರ್ಕಾರ ಪ್ರತಿ ತಿಂಗಳು 2-5 ಸಾವಿರ ರೂ. ಸಹಾಯಧನ ಸಿಗುತ್ತಿತ್ತು. ಅದನ್ನು ಕಾಂಗ್ರೆಸ್ ಬಂದ್‌ಮಾಡಿದೆ. ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಮನೆ ಮನೆಗೆ ತಲುಪಿಸಲು ಬಿಜೆಪಿ ಕೆಲಸ ಮಾಡಲಿದೆ ಎಂದು ಅವರು ಹೇಳಿದರು.

ಈ ಹಿಂದೆ ಭಾರತ ಆರ್ಥಿಕ ಸಂಕಷ್ಟ ಎದುರಿಸಿತ್ತು. ಪ್ರಧಾನಿ ಮೋದಿ ಅವರು ಬಂದ ಬಳಿಕ ಸುಧಾರಣೆ ಕಂಡಿವೆ. ಈಗ ಭಾರತ ವಿಶ್ವದಲ್ಲಿ ಐದನೇ ಆರ್ಥಿಕ ದೇಶ ಎಂದೆನಿಸಿದೆ. ಮೋದಿ ಅವರ ಆರ್ಥಿಕ ನೀತಿಯಿಂದ ಖಜಾನೆ‌ ತುಂಬಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಬರ ಬರುತ್ತದೆ. ಹಿಂದೆ ಯಡಿಯೂರಪ್ಪ ಅವರು ಸಿಎಂ ಆಗಿದ್ದ ವೇಳೆ ನೆರೆ ಪ್ರವಾಹ ಪ್ರವಾಸ ಮಾಡಿದ್ದರು. ಆಗ ನೆರೆ ಸಂತ್ರಸ್ತರಿಗೆ ಪರಿಹಾರ, ಬೆಳೆ ನಷ್ಟ ಕೊಡುವ ಕೆಲಸ‌ ಮಾಡಿದ್ದರು. ಬರದ ಪರಿಸ್ಥಿತಿ ವೇಳೆ ಕಾಂಗ್ರೆಸ್ ಸರ್ಕಾರ ರೈತರಿಗೆ ಎರಡು ಸಾವಿರ ಬರ ಪರಿಹಾರ ಕೊಟ್ಟಿದೆ. ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಬೇಕು ಮತ್ತೆ ಬಿಜೆಪಿಗೆ ಮತ ನೀಡಬೇಕು. ರೈತರ ಮನೆ ಮನೆಗೆ ಕಾಂಗ್ರೆಸ್ ವಿರೋಧಿ ನೀತಿಗಳನ್ನು ತಿಳಿಸಬೇಕು ಎಂದರು.

ಸಚಿವ ಶಿವರಾಜ ತಂಗಡಗಿ ಅವರು ಕೆಟ್ಟ ಅಸಂಸ್ಕೃತಿಯ ಮಾತನಾಡಿದ್ದಾರೆ. ನಮ್ಮ ಯುವಕರು ಮೋದಿ‌ ಮೋದಿ ಎಂದು ಶಿವರಾಜ ತಂಗಡಗಿ ಅವರನ್ನು ಮನೆಗೆ ಕಳಿಸುತ್ತಾರೆ. ಮೋದಿ ಮೋದಿ ಎಂದೇ ನಿಮಗೆ ಕಪಾಳಮೋಕ್ಷ ಮಾಡುತ್ತಾರೆ ಎಂದು ನಡಹಳ್ಳಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ರೈತ ಮೋರ್ಚಾದ ಭಾರತಿ ಮಲ್ಲಿಕಾರ್ಜುನ, ಅಶೋಕ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next