Advertisement

Desi Swara: ಜ್ಞಾನವನ್ನು ಬಳಸಿದರಷ್ಟೇ ಶ್ರೇಷ್ಠ

12:29 PM Apr 06, 2024 | Team Udayavani |

ಬೃಹತ್ತಾಗಿದ್ದ ದಟ್ಟಡವಿಗೆ ಹೊಂದಿಕೊಂಡಿದ್ದ ಒಂದು ಗ್ರಾಮ. ಜನಸಂಖ್ಯೆಯೂ ತೀರಾ ಕಡಿಮೆಯಿತ್ತು. ವ್ಯವಸಾಯವೇ ಪ್ರಮುಖ ಕಸುಬಾಗಿತ್ತಾದರೂ ಕೆಲವರು ಕಾಡಿಗೆ ತೆರಳಿ ಒಣಮರಗಳನ್ನು ಕಡಿದು ಕಟ್ಟಿಗೆಯನ್ನು ಹೊತ್ತೂಯ್ದು ಕಾಡಿನಿಂದಾಚೆ ಇದ್ದ ನಗರದಲ್ಲಿ ಮಾರಿ ಜೀವನ ಸಾಗಿಸುತ್ತಿದ್ದರು.

Advertisement

ಅಂತವರಲ್ಲಿ ನಿಜಗುಣನೂ ಒಬ್ಬ. ಸ್ವಲ್ಪ ಧಡೂತಿ ದೇಹದವನಾದರೂ ಕೆಲಸದಲ್ಲೇನೂ ಕಳ್ಳಾಟವಿರಲಿಲ್ಲ. ಅವನ ಮೈಯೊಂದೇ ಸ್ವಲ್ಪ ಭಾರವೆನಿಸಿ ಕೆಲಸದ ನಡುವೆ ಆಗಾಗ್ಗೆ ವಿಶ್ರಾಂತಿ ಪಡೆಯುತ್ತಿದ್ದುದೊಂದೇ ಅವನ ಅವಗುಣ.
ಇಂತಹ ನಿಜಗುಣನು ಅಂದೂ ಸಹ ತನ್ನ ನಿತ್ಯದ ಕಾರ್ಯಕ್ಕಾಗಿ ಕಾಡಿಗೆ ತೆರಳಲು ಸಿದ್ಧವಾದನು. ಅವನ ತಾಯಿ ಅವನಿಗೆ ದೊಡ್ಡದೊಂದು ಡಬ್ಬಿಯಲ್ಲಿ ಆಹಾರವನ್ನು ತುಂಬಿಕೊಟ್ಟು ಮನೆಯಿಂದ ಬೀಳ್ಕೊಟ್ಟಳು.

ಕಾಡಿನೊಳಗೆ ಸ್ವಲ್ಪದೂರದ ವರೆಗೂ ನಡೆದ ನಿಜಗುಣನಿಗೆ ತಲೆಯ ಮೇಲೆ ಹೊತ್ತಿದ್ದ ಡಬ್ಬಿ ಹಾಗೂ ಬೃಹತ್‌ ಗಾತ್ರದ ಮೈಯಿಂದಾಗಿ ದೂರ ನಡೆಯುವುದು ಆಯಾಸವಾಗತೊಡಗಿತು. ಸಮೀಪದ ಮರದ ನೆರಳೊಂದರಡಿ ಕುಳಿತ ನಿಜಗುಣನು ಅಮ್ಮ ಕೊಟ್ಟಿದ್ದ ಬುತ್ತಿಯ ಡಬ್ಬಿಯನ್ನು ಬಿಚ್ಚಿ ಅದರಲ್ಲಿದ್ದ ಆಹಾರವನ್ನು ಸೇವಿಸಿದನು. ಕೆಲವು ಸಮಯದ ವಿಶ್ರಾಂತಿಯನ್ನೂ ಪಡೆದ ಅನಂತರ ಅವನಲ್ಲಿ ಹೊಸದೊಂದು ಉತ್ಸಾಹ ಮೂಡಿತು. ತಲೆಯ ಮೇಲಿಟ್ಟಾಗ ಭಾರವೆನಿಸಿದ್ದ ಆಹಾರವು ಹೊಟ್ಟೆಗಿಳಿದಾಗ ಭಾರವೆನಿಸಲಿಲ್ಲ. ತನ್ನೆಲ್ಲ ಆಯಾಸವನ್ನೂ ಮರೆತ ಅವನು ಕಟ್ಟಿಗೆಯನ್ನು ಕಡಿದು ಗಂಟುಕಟ್ಟಿ ಹೊತ್ತೂಯ್ದು ನಗರದಲ್ಲಿ ಮಾರಿ ಬಂದನು.

ಇಲ್ಲಿ ನಾವು ತಿಳಿಯಬಹುದಾದ ಅಂಶವೇನೆಂದರೆ ನಾವೂ ಸಹ ನಿಜಗುಣನಂತೆಯೇ ನಮ್ಮ ಜ್ಞಾನ ಹಾಗೂ ಬುದ್ಧಿಮಟ್ಟವನ್ನು ಕೇವಲ ತಲೆಯ ಮೇಲೆ ಬುತ್ತಿಯನ್ನು ಹೊತ್ತಂತೆ ಹೊತ್ತು ಗರ್ವದಿಂದ ತಿರುಗುತ್ತಿರುತ್ತೇವೆ. ಅದರಿಂದ ನಮಗೆ ಕೇಡಾಗುವುದೇ ವಿನಃ ಯಾವುದೇ ಲಾಭವಾಗದು. ಅದರ ಬದಲಿಗೆ ಆ ಜ್ಞಾನವನ್ನೇ ಬಳಸಿಕೊಂಡು ಅದರ ಆಶಯದಂತೆ ಸತ್ಯ ಹಾಗೂ ಸಹಕಾರಗುಣವನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಿದರೆ ಜೀವನವೂ ಸಹ ತ್ರಾಸದಾಯಕವಾಗಿರದೇ ಸಂತಸ ಹಾಗೂ ಸುಖಕರವಾಗುತ್ತದೆ. ಕಲಿತ ಅಥವಾ ತಿಳಿದ ಜ್ಞಾನವು ನಮ್ಮ ಪ್ರಯೋಜನಕ್ಕೆ ಬಳಕೆಯಾದಾಗಲೇ ಅದು ಶ್ರೇಷ್ಠತೆಯನ್ನು ಗಳಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next