Advertisement

ಅರಮನೆ-ಬನ್ನಿಮಂಟಪದವರೆಗೆ ನೀರು, ಇ-ಶೌಚಾಲಯವಿರಲಿ

09:19 PM Aug 31, 2019 | Lakshmi GovindaRaj |

ಮೈಸೂರು: ಜಂಬೂ ಸವಾರಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ವೀಕ್ಷಣೆಗೆ ಬರುವ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಅನುಕೂಲವಾಗುವಂತೆ ಇ-ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಅರಮನೆಯ ಬಲರಾಮ ದ್ವಾರದಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ಮೆರವಣಿಗೆ ಸ್ಥಳ ಪರಿವೀಕ್ಷಣೆ ನಡೆಸಿದ ಅವರು, ಜಂಬೂಸವಾರಿ ವೀಕ್ಷಣೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಕಾರಣ ಅರಮನೆಯಿಂದ ಬನ್ನಿಮಂಟಪದವರೆಗೆ ವೀಕ್ಷಕರಿಗೆ ತೊಂದರೆ ಆಗದಂತೆ ಯಾವ್ಯಾವ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂಬುದನ್ನು ಜಿಲ್ಲಾಧಿಕಾರಿಗಳ ಜೊತೆ ಸೇರಿ ಸಂಬಂಧಿಸಿದ ಅಧಿಕಾರಿಗಳು ನೀಲನಕ್ಷೆ ರೂಪಿಸುವಂತೆ ತಿಳಿಸಿದರು.

ಜಯಚಾಮರಾಜೇಂದ್ರ ವೃತ್ತಕ್ಕೆ ಹೊಂದಿಕೊಂಡಂತೆ ಇರುವ ಡಾ.ರಾಜ್‌ಕುಮಾರ್‌ ಉದ್ಯಾನದಲ್ಲಿನ ಚರಂಡಿ ಸ್ವಚ್ಛಗೊಳಿಸಬೇಕು ಹಾಗೂ ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವಂತೆ ಕೋರಿದ ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಸಚಿವರು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಹಾ ನಗರಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ರಸ್ತೆಬದಿ ಅಂಗಡಿ ತೆರವು: ನಗರದ ಚಿಕ್ಕ ಗಡಿಯಾರ ಗೋಪುರದ ವೇದಿಕೆಯಲ್ಲಿ ದಸರಾ ಕಾರ್ಯಕ್ರಮಗಳು ನಡೆಯುವುದರಿಂದ ಅಲ್ಲಿರುವ ಮಾರಾಟ ವಸ್ತುಗಳನ್ನು ಮತ್ತು ಸಯ್ನಾಜಿರಾವ್‌ ರಸ್ತೆಯ ಎರಡೂ ಬದಿಗಳಲ್ಲಿ ಇರುವ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸುವ ಕಾರ್ಯವನ್ನು ನಾಳೆಯಿಂದಲೇ ಪ್ರಾರಂಭಿಸಬೇಕು ಎಂದು ತಿಳಿಸಿದರು. ಜಂಬೂಸವಾರಿ ಮೆರವಣಿಗೆ ಸಾಗುವ ರಸ್ತೆಯ ಎಲ್ಲಾ ಬ್ಯಾರಿಕೇಡ್‌ ವ್ಯವಸ್ಥೆಗಳನ್ನು ನಗರಪಾಲಿಕೆ ನಿರ್ವಹಿಸಬೇಕು ಹಾಗೂ ಸೀrಲ್‌ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕು. ಎಲ್ಲಾ ಕಡೆಗಳಲ್ಲೂ ಕಸದ ಬುಟ್ಟಿಗಳನ್ನು ಅಳವಡಿಸುವಂತೆ ಸೂಚಿಸಿದರು.

ರಸ್ತೆ ಸೌಂದರ್ಯ ಹೆಚ್ಚಿಸಿ: ರಸ್ತೆಯ ಎರಡೂ ಬದಿಗಳಲ್ಲಿ ಹಲವಾರು ಹಳೆಯ ಮರಗಳು ಇದ್ದು, ಒಣಗಿದ ಕೊಂಬೆಗಳು ತುಂಬಾ ಇದೆ. ಇದು ವೀಕ್ಷಕರಿಗೆ ತೊಂದರೆಗಳನ್ನು ಉಂಟುಮಾಡುತ್ತದೆ. ಹೀಗಾಗಿ ಶೀಘ್ರವೇ ಒಣ ಕೊಂಬೆಗಳನ್ನು ಕತ್ತರಿಸಿ ಹಾಕಿ ಹಾಗೂ ಈ ರಾಜ ಮಾರ್ಗಕ್ಕೆ ಸಂಬಂಧಿಸಿದ ಎಲ್ಲಾ ಸಣ್ಣ ರಸ್ತೆಗಳಿಗೆ ಡಾಂಬರ್‌ ಹಾಕಿಸಿ ಸೌಂದರ್ಯ ಹೆಚ್ಚಿಸಬೇಕು ಎಂದರು.

Advertisement

ಟಾಂಗಾ ನಿಲ್ದಾಣ ಸ್ಥಳಾಂತರ: ಖಾಸಗಿ ಬಸ್‌ ನಿಲ್ದಾಣ ಪಕ್ಕದಲ್ಲಿರುವ ಟಾಂಗಾ ನಿಲ್ದಾಣ ತುಂಬಾ ಅಶುಚಿತ್ವದಿಂದ ಕೂಡಿದ್ದು, ಅದನ್ನು ಸ್ವಚ್ಛಗೊಳಿಸುವ ಕಾರ್ಯ ಆಗಬೇಕು. ಅಗತ್ಯಬಿದ್ದರೆ ಟಾಂಗಾ ನಿಲ್ದಾಣ ಸ್ಥಳಾಂತರಕ್ಕೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಎಲ್‌.ನಾಗೇಂದ್ರ, ತನ್ವೀರ್‌ ಸೇಠ್, ಮೇಯರ್‌ ಪುಷ್ಪಲತಾ ಜಗನ್ನಾಥ್‌, ಉಪ ಮೇಯರ್‌ ಶಫೀ ಅಹಮದ್‌, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಜಿಪಂ ಸಿಇಒ ಕೆ.ಜ್ಯೋತಿ, ನಗರ ಪೊಲೀಸ್‌ ಆಯುಕ್ತ ಕೆ.ಟಿ. ಬಾಲಕೃಷ್ಣ, ಮುಡಾ ಆಯುಕ್ತ ಪಿ.ಎಸ್‌. ಕಾಂತರಾಜು, ಮೈಸೂರು ಮಹಾ ನಗರಪಾಲಿಕೆ ಆಯುಕ್ತ ಗುರುದತ್‌ ಹೆಗಡೆ ಮತ್ತಿತರರು ಹಾಜರಿದ್ದರು.

ಲ್ಯಾನ್ಸ್‌ಡೌನ್‌ ಕಟ್ಟಡ ಸುತ್ತಮುತ್ತ ದುರ್ವಾಸನೆ: ನಗರದ ಪಾರಂಪರಿಕ ಕಟ್ಟಡ ಲ್ಯಾನ್ಸ್‌ಡೌನ್‌ ಕಟ್ಟಡದ ಹಿಂಭಾಗದ ರಸ್ತೆಯಲ್ಲಿ ಸ್ವಚ್ಛತೆಯೇ ಇಲ್ಲವಾಗಿದೆ. ತುಂಬಾ ದುರ್ವಾಸನೆ ಕಂಡು ಬಂದಿದ್ದು, ವಾರ್ಡ್‌ನ ಪಾಲಿಕೆ ಸದಸ್ಯರು ಅಧಿಕಾರಿಗಳಿಗೆ ಹೇಳಿ ಈ ಕೆಲಸಗಳನ್ನು ಮಾಡಿಸಿಕೊಳ್ಳಬೇಕು. ನಗರದ ಮಧ್ಯ ಭಾಗದಲ್ಲೇ ಸ್ವಚ್ಛತೆ ಇಲ್ಲದಿರುವುದು ಸ್ವಚ್ಛ ನಗರಿ ಮೈಸೂರಿಗೆ ಶೋಭೆ ತರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next