ಬೀಜಿಂಗ್: ಕೊಂಚ ಕಾಲ ಬಹಿರಂಗವಾಗಿ ಯಾವುದೇ ತಕರಾರು ತೆಗೆಯದ ಚೀನ ಹೊಸ ಕಿಡಿಗೇಡಿತನ ಪ್ರದರ್ಶಿಸಿದೆ. ಅರುಣಾಚಲ ಪ್ರದೇಶದ ತನಗೇ ಸೇರಿದ್ದು ಎಂಬುದನ್ನು ಮತ್ತೊಮ್ಮೆ ಪ್ರತಿಪಾದಿಸುವ ನಿಟ್ಟಿನಲ್ಲಿ ಮೂರನೇ ಬಾರಿಗೆ ಚೀನೀ ಭಾಷೆಯಲ್ಲಿ ಇರುವ ಹೆಸರುಗಳ ವಿವರಗಳನ್ನು ಬಿಡುಗಡೆ ಮಾಡಿದೆ. ಒಟ್ಟು ಹನ್ನೊಂದು ಸ್ಥಳಗಳ ಹೆಸರುಗಳನ್ನು ಅದು ನೀಡಿದೆ.
ಅರುಣಾಚಲ ಪ್ರದೇಶವನ್ನು ಟಿಬೆಟ್‌ನ ದಕ್ಷಿಣ ಭಾಗ – ಝಂಗಾನ್ ಎಂದು ಡ್ರ್ಯಾಗನ್ ಸರಕಾರ ಹೇಳಿಕೊಳ್ಳುತ್ತಿದೆ.
ಅರುಣಾಚಲ ಪ್ರದೇಶದ ಎರಡು ಭೂಪ್ರದೇಶ, ಎರಡು ಜನವಸತಿ ಪ್ರದೇಶ, ಎರಡು ನದಿಗಳು, ಐದು ಪರ್ವತ ಪ್ರದೇಶಗಳ ವಿವರಗಳು ಚೀನ ಭಾಷೆಯಲ್ಲಿ ಇವೆ ಎಂದು ದಾಖಲೆಯಲ್ಲಿ ಹೇಳಿಕೊಳ್ಳಲಾಗಿದೆ. 2017ರಲ್ಲಿ ಮೊದಲ ಬಾರಿಗೆ ಈಶಾನ್ಯದ ರಾಜ್ಯದ ಆರು ಸ್ಥಳಗಳು ತನ್ನದು ಎಂದು ಹೇಳಿಕೊಂಡದ್ದು ಮಾತ್ರವಲ್ಲದೆ ಚೀನ ಭಾಷೆಯಲ್ಲಿ ಅದಕ್ಕೆ ಸೂಕ್ತ ಹೆಸರುಗಳು ಇವೆ ಎಂದು ಖೊಟ್ಟಿ ದಾಖಲೆಗಳನ್ನು ನೀಡಿತ್ತು. 2021ರಲ್ಲಿ 2ನೇ ಬಾರಿಗೆ 15 ಸ್ಥಳಗಳು ತನಗೆ ಸೇರಿದ್ದು ಎಂದು ಹೇಳಿತ್ತು. ಜತೆಗೆ ದಾಖಲೆಗಳನ್ನು ನೀಡಿತ್ತು.
ಆದರೆ ಈ ಅಂಶವನ್ನು ತಿರಸ್ಕರಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಗಚಿ ಅರುಣಾಚಲ ಪ್ರದೇಶ ಯಾವತ್ತಿದ್ದರೂ ಭಾರತ ಅವಿಭಾಜ್ಯ ಅಂಗವೇ ಎಂದು ಸಾರಿದ್ದರು.