ಕಾಸರಗೋಡು: ಅರುಣಾಚಲ ಪ್ರದೇಶದಲ್ಲಿ ಶುಕ್ರವಾರ ರಕ್ಷಣಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟವರಲ್ಲಿ ಕಾಸರಗೋಡು ಮೂಲದ 24 ವರ್ಷದ ಸೇನಾ ಸಿಬಂದಿಯೊಬ್ಬರು ಸೇರಿದ್ದಾರೆ.
ಮೃತ ಅಶ್ವಿನ್, ಚೆರುವತ್ತೂರು ಸಮೀಪದ ಕಿಜಕ್ಕೆಮುರಿ ನಿವಾಸಿಯಾಗಿದ್ದು, ನಾಲ್ಕು ವರ್ಷಗಳಿಂದ ಸೇವೆಯಲ್ಲಿದ್ದರು.
ಅಕ್ಟೋಬರ್ 23 ರ ಭಾನುವಾರದೊಳಗೆ ಅಶ್ವಿನ್ ಅವರ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ತರಲಾಗುವುದು ಎಂದು ತಿಳಿದುಬಂದಿದೆ. ಆದರೆ, ಈ ಬಗ್ಗೆ ಜಿಲ್ಲಾಡಳಿತಕ್ಕೆ ಯಾವುದೇ ಸೂಚನೆ ಬಂದಿಲ್ಲ ಎಂದು ತಿಳಿದು ಬಂದಿದೆ.
ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯಲ್ಲಿ ಪತನಗೊಂಡ ಹೆಲಿಕಾಪ್ಟರ್‌ನಲ್ಲಿದ್ದ ನಾಪತ್ತೆಯಾದ ಓರ್ವ ಸೇನಾ ಸಿಬಂದಿಗಾಗಿ ಶನಿವಾರವೂ ಶೋಧ ನಡೆಸಲಾಗುತ್ತಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಇಬ್ಬರು ಪೈಲಟ್‌ಗಳು ಸೇರಿದಂತೆ ಐವರು ಸೇನಾ ಸಿಬಂದಿ ಪ್ರಯಾಣಿಸುತ್ತಿದ್ದ ಸುಧಾರಿತ ಲಘು ಹೆಲಿಕಾಪ್ಟರ್ ಶುಕ್ರವಾರ ಬೆಳಗ್ಗೆ 10.43 ಕ್ಕೆ ಟ್ಯೂಟಿಂಗ್‌ನಿಂದ ದಕ್ಷಿಣಕ್ಕೆ 25 ಕಿಮೀ ದೂರದಲ್ಲಿರುವ ಮಿಗ್ಗಿಂಗ್ ಬಳಿ ಅಪಘಾತಕ್ಕೀಡಾಗಿತ್ತು.