ವಿಜಯಪುರ : ಚುನಾವಣೆ ಪೂರ್ವದಲ್ಲೇ ಸೋಲು ಒಪ್ಪಿಕೊಂಡಿರುವ ಕಾಂಗ್ರೆಸ್ ಪಕ್ಷ ಅಭಿವೃದ್ಧಿ ವಿಷಯ ಪ್ರಸ್ತಾಪಿಸದೇ ಹಿಟ್ ಎಂಡ್ ರನ್ ಮಾಡುತ್ತದೆ. ಕ್ಷೇತ್ರಕ್ಕೆ ಮಾಡುವ ಕೆಲಸದ ಬಗ್ಗೆ ಮಾತನಾಡದೇ, ಬಿಜೆಪಿ ನಾಯಕರ ಮಧ್ಯೆ ಅಪಪ್ರಚಾರದ ಹೇಳಿಕೆಯಲ್ಲಿ ತೊಡಗಿರುವುದೇ ಸಾಕ್ಷಿ ಎಂದು ಮಾಜಿ ಶಾಸಕ ಅರುಣ ಶಹಾಪುರ ಹೇಳಿದರು.
ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿ ಜಿಗಜಿಣಗಿ ಎಂದು ಟೀಕಿಸುವ ಕಾಂಗ್ರೆಸ್ ಅಭ್ಯರ್ಥಿಗೆ ನಮಗೂ ತಿರುಗೇಟು ನೀಡಲು ಬರುತ್ತದೆ ಎಂಬುದು ಗೊತ್ತಿರಲಿ. ಎಂ.ಬಿ.ಪಾಟೀಲ ಅವರಿಗೆ ಚುನಾವಣೆ ಪೂರ್ವದಲ್ಲಿ ನಡೆದ ಭಾರತ ಜೋಡೋ ಕಾಂಗ್ರೆಸ್ ರ್‍ಯಾಲಿಗೆ ಬಳಸಿಕೊಂಡು, ಉಪ ಮುಖ್ಯಮಂತ್ರಿ ಸ್ಥಾನವನ್ನೂ ನೀಡದೇ, ಕನಿಷ್ಠ ಅವರು ಕೇಳಿದ ಖಾತೆಯನ್ನೂ ನೀಡದೇ ಅವಮಾನ ಮಾಡಿಲ್ಲವೇ ಎಂದು ಕುಟುಕಿದರು.
ಯತ್ನಾಳ ಎಂದರೆ ಅವರ ಸ್ಟೈಲೇ ಬೇರೆ, ಶೈಲಿಯೇ ಬೇರೆ, ಅವರು ತಮ್ಮ ವೈಖರಿಯಲ್ಲಿ ಪ್ರಚಾರ ಮಾಡಿದ್ದಾರೆ. ಜೆಡಿಎಸ್ ಮಾಜಿ ಶಾಸಕ ದೇವಾನಂದ ಚವ್ಹಾಣ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದ ಬಾಗಲಕೋಟೆ ಸಮಾವೇಶಕ್ಕೆ ಬಂದಿದ್ದರು. ಪ್ರತಿಯೊಬ್ಬರೂ ತಮ್ಮ ಕೆಲಸ ತಾವು ಮಾಡುತ್ತಿದ್ದಾರೆ ಎಂದರು.
ಸ್ವಯಂ ತಮ್ಮದೇ ನಾಯಕ ರಾಹುಲ್ ಗಾಂಧಿ ನಗರಕ್ಕೆ ಬಹಿರಂಗ ಪ್ರಚಾರಕ್ಕೆ ಬಂದಾಗ ದಲಿತ ಅಭ್ಯರ್ಥಿಯಾದ ರಾಜು ಆಲಗೂರ ಅವರನ್ನು ವೇದಿಕೆ ಕರೆಯುವುದಿರಲಿ, ಬ್ಯಾನರ್ ನಲ್ಲಿ ಅವರ ಫೋಟೋ ಕೂಡ ಹಾಕಿರಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಯಾರೆಂದೂ ಪ್ರಸ್ತಾಪಿಸಿ ಮತ ಯಾಚನೆ ಮಾಡದಿರುವುದು ಕಾಂಗ್ರೆಸ್ ಚುನಾವಣೆ ಪೂರ್ವದಲ್ಲೇ ಸೋಲು ಒಪ್ಪಿಕೊಂಡಂತಾಗಿದೆ ಎಂದರು.
ಶಾಸಕರಾಗಿದ್ದಾಗಲೇ ರಾಜು ಆಲಗೂರ ಅವರಿಗೆ ಟಿಕೆಟ್ ನಿರಾಕರಿಸಿ ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ನೀಡಿದ್ದರು. ಕಳೆದ ವಿಧಾನಸಭೆ ಚುನಾವಣೆಯಲೂ ಟಿಕೆಟ್ ನೀಡಿರಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳೇ ಸಿಗದ ಕಾರಣ ರಾಜು ಆಲಗೂರ ಕೊರಳಿಗೆ ಕಟ್ಟಲಾಗಿದೆ ಎಂದು ಕುಟುಕಿದರು.
ಬಿಜೆಪಿ ವಿರುದ್ಧ ಆರೋಪ ಮಾಡಿದ್ದ ಗುತ್ತೇದಾರರೇ ಇವರ ಸರ್ಕಾರದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಹಣವೂ ಸಿಗದೇ ಕಾಂಗ್ರೆಸ್ ಪಕ್ಷದ ಶಾಸಕರೇ ಅಸಮಾಧಾನ ಹೊರಹಾಕಿದ್ದಾರೆ. ಹೀಗಾಗಿ ಸೋಲುವ ಭೀತಿಯಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಅಭಿವೃದ್ಧಿ ಆಧಾರಿತ ಮತಯಾಚನೆ ಮಾಡದೇ ಬಿಜೆಪಿ ಅಭ್ಯರ್ಥಿ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.