Advertisement

ಕಲಾವಿದರು ಜನರ ಜೀವನದ ಭಾಗ

03:03 PM May 02, 2018 | Team Udayavani |

ಬೆಂಗಳೂರು: ಸಿನಿಮಾ ಕಲಾವಿದರು ಹಾಗೂ ಸಾಹಿತಿಗಳು ಜನರ ಜೀವನದ ಭಾಗವಾಗಿದ್ದು, ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆಸುವಂತವರು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ತಿಳಿಸಿದರು.  

Advertisement

ರೇಸ್‌ ಕೋರ್ಸ್‌ ರಸ್ತೆಯ ಭಾರತೀಯ ವಿದ್ಯಾ ಭವನದಲ್ಲಿ ಮಂಗಳವಾರ ನಡೆದ ಪದ್ಮಭೂಷಣ ಡಾ.ಬಿ.ಸರೋಜ ದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜವನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮುನ್ನಡೆಸುವಲ್ಲಿ ಸಿನಿಮಾ ಬಹುಮುಖ್ಯ ಪಾತ್ರವಹಿಸುತ್ತವೆ. ಕೇವಲ ಮೂರು ಗಂಟೆಗಳಲ್ಲಿ ನೋವು-ನಲಿವಿನಂತಹ ಅನೇಕ ಭಾವನೆಗಳನ್ನು ನೀಡಿ ಜೀವನದ ಕಲ್ಪನೆಯನ್ನು ಕಟ್ಟಿಕೊಡುತ್ತಿವೆ ಎಂದರು.

ನನ್ನ ತಂದೆಯವರಿಗೆ ಸಿನಿಮಾ ಬಗ್ಗೆ ತುಂಬಾ ಆಸಕ್ತಿ ಇತ್ತು. ನನ್ನ ಮಕ್ಕಳು ಸಿನಿಮಾದಲ್ಲಿ ನಟನೆ ಮಾಡಬೇಕು ಎಂಬ ಆಸೆ ಹೊಂದಿದ್ದರು. ಹಾಗಾಗಿಯೇ ಶಂಕರ್‌ ಸಿಂಗ್‌ ನಿರ್ದೇಶನದ ಮಂಜುನಾಥ ಮಹಿಮೆ ಚಿತ್ರದಲ್ಲಿ ಚಿಕ್ಕದಾಗಿ ನಾನು ಕಾಣಿಸಿಕೊಂಡಿದ್ದೆ ಎಂದು ಹೇಳಿದರು.

ರಾಜೇಂದ್ರ ಸಿಂಗ್‌ ಬಾಬು ಅವರು ಉತ್ತಮ ನಿರ್ದೇಶಕರಾಗಿದ್ದು, ತಮ್ಮ ಚಿತ್ರಗಳ ಮೂಲಕ ಹೊಸ ಪರಂಪರೆಯನ್ನು ಬರೆದಿದ್ದಾರೆ. ಕಲಾತ್ಮಕ ಹಾಗೂ ಸ್ಪರ್ಧಾತ್ಮಕ ಯುಗಗಳೆರಡರಲ್ಲೂ ಯಶಸ್ವಿ ಚಿತ್ರಗಳ ಮಾಡುತ್ತಿರುವ ಇಂತಹ ವ್ಯಕ್ತಿಯನ್ನು ಸನ್ಮಾನಿಸುವುದು ಸಂತಸದ ವಿಚಾರ ಎಂದು ಹೇಳಿದರು.

ನಟ ಅಂಬರೀಷ್‌ ಮಾತನಾಡಿ, ರಾಜೇಂದ್ರ ಸಿಂಗ್‌ ಅವರಿಗೆ ರಕ್ತದಲ್ಲಿಯೇ ನಿರ್ದೇಶನದ ಕಲೆ ಬಂದಿದೆ. ಅವರ ತಂದೆ ಶಂಕರ್‌ ಸಿಂಗ್‌ ಅವರು ಅಂದಿನ ಕಾಲಕ್ಕೆ ಅನೇಕ ದೊಡ್ಡ ಮಟ್ಟದ ಸಿನಿಮಾ ಮಾಡಿ ಕನ್ನಡ ಚಿತ್ರರಂಗವನ್ನು ಕಟ್ಟಿದ್ದಾರೆ. ಇನ್ನು ರಾಜೇಂದ್ರ ಸಿಂಗ್‌ ಅವರು ರಿಷಿ ಕಪೂರ್‌, ದೀಲಿಪ್‌ ಕುಮಾರ್‌ನಂತಹ ದೊಡ್ಡ ಕಲಾವಿದರಿಗೆ ನಿರ್ದೇಶನ ಮಾಡಿದ್ದಾರೆ ಎಂದರು.

Advertisement

ಮೊದಲು ಖಳ ನಾಯಕನಾಗಿ ಚಿತ್ರರಂಗಕ್ಕೆ ಬಂದು, ನಂತರ ನಾಯಕನಾದೆ. ಆನಂತರ ಜನಸೇವೆ ಮಾಡೋಣ ಎಂದು ರಾಜಕೀಯಕ್ಕೆ ಬಂದು ಜನನಾಯಕನಾದೆ. ಈಗ ವಯಸ್ಸಾಗಿದ್ದು, ರಾಜಕೀಯದಿಂದ ದೂರವಾಗಿದ್ದೇನೆ. ಇದರ ಹೊರತಾಗಿಯೂ ಜನಸೇವೆಯಲ್ಲಿ ಮುಂದುವರಿಯುತ್ತೇನೆ. ಜತೆಗೆ ಜೀವಂತ ಇರುವವರೆಗೂ ಸಿನಿಮಾಗಳಲ್ಲಿ ನಟಿಸುತ್ತೇನೆ ಎಂದು ತಿಳಿಸಿದರು. 

ಹಿರಿಯ ನಿರ್ದೇಶಕ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ಅವರಿಗೆ ಪ್ರಸಕ್ತ ಸಾಲಿನ ಡಾ.ಬಿ.ಸರೋಜ ದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ನಟಿ ಡಾ.ಬಿ.ಸರೋಜದೇವಿ, ಭಾರತೀಯ ವಿದ್ಯಾ ಭವನ ಅಧ್ಯಕ್ಷ ಎನ್‌.ರಾಮಾನುಜ, ಸಂಗೀತ ನಿರ್ದೇಶಕ ಹಂಸಲೇಖ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಸೇರಿದಂತೆ ಚಿತ್ರರಂಗದ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next