ಶಿಗ್ಗಾವಿ: ಕಲೆ ಅಪ್ಪಿಕೊಂಡು ಅದನ್ನು ಸಾಬೀತು ಪಡಿಸಿದರೆ ಯಾವ ಕಲಾವಿದರೂ ಬಡವರಲ್ಲ. ಏಕೆಂದರೆ ಅವರಿಗೆ ಅನೇಕ ರೀತಿಯ ಬೇಡಿಕೆ ಇದೆ. ಅಂಥಹದನ್ನು ಬಳಸಿಕೊಳ್ಳಬೇಕು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ (ಪ್ರಭಾರ) ಪ್ರೊ| ಕೆ.ಎನ್. ಗಂಗಾನಾಯಕ ಹೇಳಿದರು.
ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ದೃಶ್ಯಕಲೆ ಅಧ್ಯಯನ ವಿಭಾಗದಿಂದ ಆಯೋಜಿಸಿದ್ದ ಎರಡು ದಿನದ ಭಾವಚಿತ್ರ ಪ್ರಾತ್ಯಕ್ಷಿಕೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಯಶಸ್ಸನ್ನು ನಮ್ಮ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ ಎಂಬುದನ್ನು ಅವರು ಬಿಡಿಸಿದ ಚಿತ್ರ ನೋಡಿದಾಗ ಗೊತ್ತಾಯಿತು. ಸಂಪನ್ಮೂಲ ವ್ಯಕ್ತಿಯಾದ ಹರ್ಷದಾ ಕೆರಕರ ತರಬೇತಿ ಪ್ರಭಾವ ಬೀರಿದೆ ಎನ್ನುವುದು ಸ್ಪಷ್ಟವಾಯಿತು. ಹಾಗೆಯೇ ಗೋವಾದಿಂದ ಬಂದಿದ್ದ ಅಂತಾರಾಷ್ಟ್ರೀಯ ಕಲಾವಿದೆ ಹರ್ಷದಾ ಕರಕರೆ ಕಲೆಯ ಹೆಚ್ಚುಗಾರಿಕೆ ಪ್ರಶಂಸಿದರು.
ಮುಖ್ಯ ಅತಿಥಿಯಾಗಿ ಹಾಗೂ ಪ್ರಾತ್ಯಕ್ಷಿಕೆ ಸಂಪನ್ಮೂಲ ವ್ಯಕ್ತಿಯಾಗಿದ್ದ ಅಂತಾರಾಷ್ಟ್ರೀಯ ಕಲಾವಿದೆ ಹರ್ಷದಾ ಕೆರಕರ ಸೋನಕ್ ಎರಡು ದಿನ ತಮ್ಮ ಕಲೆ ಪ್ರಾತ್ಯಕ್ಷಿಕೆ ನೀಡಿ ಕೊನೆಗೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಎರಡು ದಿನ ನಾನು ಇಲ್ಲಿ ಸಂತಸದ ಕ್ಷಣ ಕಳೆದಿದ್ದೇನೆ. ಈ ವಿಶ್ವವಿದ್ಯಾಲಯದ ಆವರಣ ತುಂಬ ವಿಶಿಷ್ಟವಾಗಿದ್ದು ಕಲಾವಿದರನ್ನು ಸೃಷ್ಟಿಸುವಲ್ಲಿ ಕೊಡುಗೆ ನೀಡುತ್ತದೆ ಎಂದರು.
ವಿದ್ಯಾರ್ಥಿಗಳಾದ ಅಪ್ಪು ಕೆ. ಮತ್ತು ಅರ್ಪಿತಾ ಹಿರೇಮಠ ಅನಿಸಿಕೆ ಹಂಚಿಕೊಂಡರು. ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವರಾದ ಶಹಜಾನ ಮುದಕವಿ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
ದೃಶ್ಯ ಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ರವಿ ನಾಯಕ ಸ್ವಾಗತಿಸಿದರು. ವಿದ್ಯಾರ್ಥಿನಿ ಸುವರ್ಣಾ ನಾಯಕ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಡಾ| ಶಂಕರ ಕುಂದಗೋಳ ವಂದಿಸಿದರು.