Advertisement
ದೇಶದ ವಿವಿಧೆಡೆ ಬೈಕ್, ಕಾರು, ಬಸ್, ಲಾರಿಗಳ ಮುಂಭಾಗ/ಹಿಂಭಾಗದಲ್ಲಿ, ಮೊಬೈಲ್ ಗಳಲ್ಲಿ ‘ಆ್ಯಂಗ್ರಿ ಹನುಮಾನ್’ ಸ್ಟಿಕ್ಕರೊಂದನ್ನು ಪರಿಚಯಿಸಿ ಸಾರ್ವತ್ರಿಕ ಪ್ರಶಂಸೆಗೆ ಪಾತ್ರರಾಗಿರುವ ಕರಣ್ ಆಚಾರ್ಯ ಅವರು ರಾಮನ ವೆಕ್ಟರ್ ಆರ್ಟ್ ಮೂಲಕ ತಯಾರಿಸಿರುವ ಚಿತ್ರಗಳೀಗ ಸಾಮಾಜಿಕ ಜಾಲತಾಣಗಳ ಮೂಲಕ ಭಾರೀ ಗಮನ ಸೆಳೆಯುತ್ತಿವೆ.
ಕೇರಳದಲ್ಲಿ ಆಚರಿಸಲ್ಪಡುವ ‘ರಾಮಾಯಣ ಮಾಸ’ಕ್ಕೆ ಶುಭ ಕೋರುವ ಸಲುವಾಗಿ ಕರಣ್ ಆಚಾರ್ಯ ತಯಾರಿಸಿದ ಈ ಚಿತ್ರಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಬೆನ್ನಲ್ಲಿ ಬಾಣಗಳಿಂದ ಕೂಡಿದ ಬತ್ತಳಿಕೆಯನ್ನು ಹೊತ್ತು ಸಾಗುವ ರಾಮನ ಚಿತ್ರವನ್ನು ಕರಣ್ ಆಚಾರ್ಯ ಅವರು ಕೆಂಪು, ಕೇಸರಿ ಹಾಗೂ ಬಿಳಿ ಬಣ್ಣಗಳಲ್ಲಿ ತಯಾರಿಸಿದ್ದು, ಒಂದೊಂದು ಬಣ್ಣದಲ್ಲಿ ಗಡ್ಡ ಇರುವ ಹಾಗೂ ಗಡ್ಡ ರಹಿತ ರಾಮನನ್ನು ಚಿತ್ರಿಸಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಅದನ್ನು ಸ್ಟಿಕ್ಕರ್ ರೂಪಕ್ಕೆ ತರಲಾಗುವುದು ಎಂದು ಕರಣ್ ಆಚಾರ್ಯ ಉದಯವಾಣಿ ಸುದಿನಕ್ಕೆ ತಿಳಿಸಿದ್ದಾರೆ. ಗಡ್ಡಧಾರಿ ರಾಮ ಏಕೆ ?
ಈ ಚಿತ್ರದಲ್ಲಿ ರಾಮ ಗಡ್ಡಧಾರಿಯಾಗಿ ಕಾಣಿಸಿಕೊಂಡಿದ್ದಾನೆ. ಯಾಕೆ ಎಂದು ಕರಣ್ ಅವರಲ್ಲಿ ಕೇಳಿದರೆ ‘ಹದಿನಾಲ್ಕು ವರ್ಷಗಳ ವನವಾಸ ಮಾಡಲು ತೆರಳಿದ್ದ ಸಂದರ್ಭ ರಾಮನು ಕೂಡ ಗಡ್ಡ ಬೆಳೆಸಿರಬಹುದು ಎಂಬ ಕಲ್ಪನೆಯಿಂದ ನಾನು ಈ ಮಾದರಿಯ ಚಿತ್ರ ಬಿಡಿಸಿದ್ದೇನೆ. ಇದು ಎಲ್ಲರಿಗೂ ಇಷ್ಟವಾಗದಿರಬಹುದು ಎಂಬ ಕಾರಣಕ್ಕೆ ಮೂರು ಬಣ್ಣಗಳಲ್ಲಿ ಎರಡು ಮಾದರಿಯ ರಾಮನ ಚಿತ್ರ ಬಿಡಿಸಿದ್ದೇನೆ’ ಎನ್ನುತ್ತಾರೆ.
Related Articles
ಕೇರಳದಲ್ಲಿ ಆಟಿಯಲ್ಲಿ ಒಂದು ತಿಂಗಳು ರಾಮಾಯಣ ಪಾರಾಯಣ ಮಾಡುವುದನ್ನು ರಾಮಾಯಣ ಮಾಸ ಎನ್ನಲಾಗುತ್ತದೆ. ಜು. 17ರಿಂದ ಆರಂಭವಾಗಿ ಆ. 16ಕ್ಕೆ ಈ ಮಾಸ ಕೊನೆಗೊಳ್ಳುತ್ತದೆ. ಇದು ಒಂದು ರೀತಿ ಆಧ್ಯಾತ್ಮಿಕ ನಡೆಯ ಮೂಲಕ ಹೊಸ ವರ್ಷವನ್ನು ಸ್ವಾಗತಿಸುವ ರೀತಿ.
Advertisement
ಕುಂಬಳೆಯ ಕರಣ್ ಆಚಾರ್ಯಕರಣ್ ಆಚಾರ್ಯ ಕಾಸರಗೋಡಿನ ಕುಂಬಳೆಯ ಕಲಾವಿದ. ಪಿಯುಸಿ ಮುಗಿಸಿದ ಬಳಿಕ ಕೇರಳದ ರಿದಂ ಶಾಲೆಯಲ್ಲಿ ಚಿತ್ರಕಲೆ ಅಭ್ಯಾಸ ಮಾಡಿ ಬಳಿಕ ಡ್ರಾಯಿಂಗ್ ಟೀಚರ್ ಆಗಿ ಕಾಸರಗೋಡಿನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೇವೆ ಸಲ್ಲಿಸಿದರು. ಬಳಿಕ ಮಂಗಳೂರಿಗೆ ಬಂದ ಕರಣ್ ಇ-ಲರ್ನಿಂಗ್ ಸೆಂಟರ್‌ನಲ್ಲಿ ಕೆಲಸ ಮಾಡಿದರು. ಈಗ ಬೆಂಗಳೂರಿನ ಆ್ಯನಿಮೇಶನ್ ಸಂಸ್ಥೆಯಲ್ಲಿ ಇದ್ದಾರೆ. 2ಡಿ, 3ಡಿ ಆ್ಯನಿಮೇಶನ್‌ನಲ್ಲಿ ಕರಣ್ ಫೇಮಸ್. ಎಳೆಯ ವಯಸ್ಸಿನಿಂದಲೇ ಚಿತ್ರಕಲೆ, ಡಿಸೈನಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ಅವರಿಗೆ ಅವರ ತಾಯಿಯೇ ಮೊದಲ ಗುರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಮಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಹನುಮಾನ್ ಚಿತ್ರ ರಚಿಸಿದ್ದ ಕರಣ್ ಆಚಾರ್ಯ ಅವರ ಹೆಸರು ಪ್ರಸ್ತಾವಿಸಿ ಹೊಗಳಿದ್ದರು. ನಗರದ ಈ ಯುವಕನ ಸಾಧನೆ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವುದು ಸಂತಸದ ವಿಷಯ ಎಂದು ಹೊಗಳಿದ್ದರು. ಅದರೊಂದಿಗೆ ಟ್ವಿಟ್ಟರ್ ನಲ್ಲಿ ಹನುಮಾನ್ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದರು. ಕೆಲಸದ ಒತ್ತಡ ಮುಗಿದ ಬಳಿಕ ರಾಮನ ಸ್ಟಿಕ್ಕರ್
ಕೇರಳದಲ್ಲಿ ಆಚರಿಸುವ ರಾಮಾಯಣ ಮಾಸಕ್ಕೆ ಶುಭಕೋರುವ ಸಲುವಾಗಿ ಕಳೆದ ತಿಂಗಳು ರಾಮನ ವೆಕ್ಟರ್ ಆರ್ಟ್ ರಚಿಸಿದ್ದೆ. ಕಳೆದ ವಾರ ರಾಮಾಯಣ ಮಾಸ ಆರಂಭಗೊಂಡ ಹಿನ್ನೆಲೆಯಲ್ಲಿ ಆ ಚಿತ್ರದ ಮೂಲಕ ಫೇಸ್ ಬುಕ್, ಬ್ಲಾಗ್ ಗಳಲ್ಲಿ ಶುಭಾಶಯ ಕೋರಿದ್ದೆ. ಇದೀಗ ಆ ಚಿತ್ರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಈಗ ನಾನು ಆ್ಯನಿಮೇಶನ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಅದರಲ್ಲೇ ಬ್ಯುಸಿ ಇದ್ದೇನೆ. ಇದೆಲ್ಲಾ ಆದ ಬಳಿಕ ಆ ಚಿತ್ರವನ್ನು ಸ್ಟಿಕ್ಕರ್ ಹಾಗೂ ಟೀ ಶರ್ಟ್ ರೂಪಕ್ಕೆ ತರುವ ಬಗ್ಗೆ ಆಲೋಚನೆ ಮಾಡುತ್ತೇನೆ.
– ಕರಣ್ ಆಚಾರ್ಯ, ಚಿತ್ರ ಕಲಾವಿದ — ಪ್ರಜ್ಞಾ ಶೆಟ್ಟಿ