ಡಾ| ಮೋಹನ್ ಆಳ್ವರವರು ನಮ್ಮ ಕಾಲದ ಕಲಾ ಸಾರ್ವಭೌಮ. ಕನ್ನಡ ನಾಡಿನಲ್ಲೆ ಅಲ್ಲ, ಭಾರತದ ಭೌಗೋಳಿಕ ಪರಿಸರದಲ್ಲಿ ಕಲಾವಿದರ ಕಣ್ಮಣಿಯಾಗಿ, ಸಾಹಿತಿಗಳ ಭ್ರಮರಾಂಭರರಾಗಿ, ನಿಸ್ವಾರ್ಥವಾಗಿ ಅವರಲ್ಲಿ ಹೊಂದಿಕೊಂಡು, ಅವರಲ್ಲಿ ಕೂಡಿಕೊಂಡು ಅವರನ್ನು ಜೀವನದ ಮೌಖೀಕತೆಗೆ ಕೊಂಡು ಹೋಗುವವರಾಗಿದ್ದಾರೆ. ಓರ್ವ ಮಾನವನು ಎಣಿಸಿದ್ದಲ್ಲಿ ಯಾವುದೇ ಕಾರ್ಯವನ್ನು ಯಶಸ್ವಿಯಾಗಿ, ಕಾರ್ಯಬದ್ಧವಾಗಿ ನಿರ್ವಹಿಸಬಹುದು ಎಂದು ಜಗತ್ತಿಗೆ ಸಾರಿದವರಲ್ಲಿ ಡಾ| ಮೋಹನ್ ಆಳ್ವರವರು. ಇವರು ತಮ್ಮ ಶೋಭಾವನದ ಪರಿಸರಲ್ಲಿ ನಿರ್ವಹಿಸುತ್ತಿರುವ ಆಳ್ವಾಸ್ ವರ್ಣ ವಿರಾಸತ್, ಆಳ್ವಾಸ್ ನುಡಿಸಿರಿ, ಅಲ್ಲದೆ ಭಾರತೀಯ ಪರಂಪರೆಯಲ್ಲಿ ಕಲೆಯನ್ನು ಕಲಿತು ಕೊಂಡು ಜಗತ್ತಿಗೆ ಕಲಾ ವರ್ಣವನ್ನು ತೋರಿಸುತ್ತಿರುವುದು ಒಂದು ವರದಾನ ಇದು ಆಳ್ವ ಅವರ ಏಕವ್ಯಕ್ತಿ ಪ್ರದರ್ಶನವೂ ಆಗಿದೆ. ಕಳೆದ ಸಾಲಿನವಿರಾಸತ್‌ನಲ್ಲಿ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆದವರು ಮುಂಬಯಿಯ ಮುಲುಂಡ್‌ನ ಕಲಾವಿದ ದೇವದಾಸ್ ಶೆಟ್ಟಿ ಅವರು.
ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದು ತನ್ನ ಪರಿಸರ, ತನ್ನ ಊರು, ತನ್ನ ಜನರು ಅವರ ನಿತ್ಯ ಜೀವನವನ್ನು ತನ್ನ ಕ್ಯಾನ್‌ವಾಸ್‌ನಲ್ಲಿ ಪಡಿಮೂಡಿಸಿದ ಈ ಕಲಾವಿದ ದಕ್ಷಿಣ ಕನ್ನಡದ ಜನಜೀವನವನ್ನು ವಿಶ್ವಕ್ಕೆ ತೋರಿಸಿದ್ದಾರೆ. ಇದು ಅವರ ನಿಸ್ವಾರ್ಥ ಸೇವಾ ಮನೋಭಾವ. ತುಂಬಾ ಖ್ಯಾತಿವಂತ ಕಲಾವಿದರಾದ ದೇವದಾಸ್ ಶೆಟ್ಟಿ ಅವರಿಗೆ ಬೆರಳೆಣಿಕೆಯ ಕನ್ನಡ ಮಿತ್ರರು. ಅವರಲ್ಲಿ ಡಾ| ಮೋಹನ್ ಆಳ್ವರವರು ಒಬ್ಬರು. ದೇವದಾಸ ಶೆಟ್ಟಿ ಅವರಿಗೆ ಕನ್ನಡಿಗರು ಮಾತ್ರವಲ್ಲ ಬಂಗಾಲಿಗಳು, ಮರಾಠಿಗರು, ಗುಜರಾತಿಗಳು ಹೀಗೆ ತುಂಬಾ ಕಲಾಸಕ್ತರು ಪರಿಚಯವಾಗಿದ್ದಾರೆ. ಆದರೆ ಎಲ್ಲೂ ಅವರು ಬೀಗಿದವರಲ್ಲ.
ಮೂಡಬಿದ್ರೆಯ ಪ್ರಶಾಂತ ವಾತಾವರಣದಲ್ಲಿ ತನ್ನೆರಡು ಚಿತ್ರಗಳನ್ನು ನಿರ್ಮಿಸಿದ ದೇವದಾಸ್ ಶೆಟ್ಟಿ ಅವರು ತನ್ನ ತಂದೆಯವರ ಹುಟ್ಟೂರಲ್ಲಿ ತೃಪ್ತಿ ಹೊಂದಿದವರು. ಅಂತರಂಗದಲ್ಲಿ ನಿರ್ಮಿತವಾದ ದ್ವಂದ್ವ ದ್ವಯಗಳು ನಮಗೆ ಸಾಲುವತ್ತಾಗಿ ಕಾಣುವುದು. ಕಲಾವಿದ ತಾನು ಹಾಕುವ ಮೂಲ ಗೆರೆಯಲ್ಲಿ ಬಣ್ಣ ಹಚ್ಚಿ ತಾನು ಏನನ್ನು ಹೇಳಬಯಸುವನು ಅಂತ ನಮಗೆ ತೋರಿಸುವವರು. ಬಣ್ಣ ಹಚ್ಚಿದ ಅನಂತರ ತನ್ನ ಕೃತಿಯಲ್ಲಿ ಅದಕ್ಕೆ ಚಂದವನ್ನು ಕೊಡುವರು.
ತಾನು ನಿರ್ಮಾಣ ಮಾಡುವ ಕೃತಿಯಲ್ಲಿ ದೇವದಾಸರು ಗೊಂದಲಕ್ಕೆ ಹೋಗುವುದಿಲ್ಲ. ಗೌಜಿ, ಗಲಾಟೆ ಮಾಡುವುದಿಲ್ಲ. ಅವರದ್ದು ಶಾಂತವಾದ, ಅಂದವಾದ, ದೃಢವಾದ ನಿರ್ಮಾಣ. ಅವರು ತನ್ನ ಕೃತಿಯಲ್ಲಿ ಪರಿಸರಕ್ಕೆ ಯಾವ ರೀತಿಯಲ್ಲಿ ಹೊಂದಿಕೊಳ್ಳುತ್ತಾರೆ ಎಂದರೆ ಅವರ ಬಣ್ಣಗಳು ಮಾತನಾಡುತ್ತವೆ. ಕೃತಿಯ ಗೆರೆಗಳು ನೃತ್ಯ ಮಾಡುತ್ತವೆ. ನಿರ್ಮಾಣಗೊಂಡ ಪೂರ್ತಿ ಚಿತ್ರ ಪ್ರದರ್ಶನಕ್ಕೆ ಇಟ್ಟಾಗ ಕಲಾರಸಿಕರ ಮನವನ್ನು ಗೆಲ್ಲುತ್ತದೆ.
ಭಾರತದ ಹಳ್ಳಿಯಿಂದ ಬಂದ ಜಾನಪದ ಕಲಾವಿದರೊಡನೆ ಬೆರೆತುಕೊಂಡು ನಾನು ಧನ್ಯನಾದೆ. ನನಗೆ ಹೊಸ ಹುಮ್ಮಸ್ಸು, ಹೊಸ ಉತ್ಸಾಹ ಇಲ್ಲೇ ದೊರಕಿತು ಎಂದು ಹೇಳಿ ಪುನಃ ತಾನು ಮಾಡಿದ ಕೃತಿಯನ್ನು ಪೂರ್ಣಗೊಳಿಸಲು ಆರಂಭಿಸಿದ ದೇವದಾಸ ಶೆಟ್ಟಿ ಅವರು. ಜೀವನದ ಪಡೆಯಂಚಿನ ಸೂಜಿ ಮೊನೆಯಲ್ಲಿ ನಿಂತು ಸುಲಕ್ಷಣ ಜೀವನವನ್ನು ನಾನು ನನ್ನ ಕೃತಿಯನ್ನು ಚಿತ್ರಿಸುತ್ತಾ, ತಾನು ಜೀವನದಲ್ಲಿ ಸಂತಸವನ್ನು ಪಡೆದುಕೊಂಡೆನೆಂದು ಹೇಳುವುದು ಕಷ್ಟ. ಆದರೆ ಜನ ಜೀವನವನ್ನು ಚಿತ್ರದಲ್ಲಿ ನಮೂದಿಸುತ್ತಾ ಜಗತ್ತಿಗೆ ಜೀವನ ಎಂದರೇನು ಎಂದು ಕಲಿಸುವುದು ಪ್ರತಿ ಕಲಾವಿದನ ಕರ್ತವ್ಯ. ಅದನ್ನು ತಾನು ಮಾಡುತ್ತಾ ಸಾಗುತ್ತೇನೆ ಎಂದು ದೇವದಾಸ ಶೆಟ್ಟಿ ಅವರ ಮನದ ಮಾತು ಇತರರಿಗೆ ಪ್ರೇರಣೆಯಾಗಿದೆ. ನಿನಗೆ ಸಿಕ್ಕಲ್ಲಿ ನೀನು ಸಂತಸವನ್ನು ಪಡೆ. ಅತಿ ಆಸೆಯುಕ್ತನಾಗಬೇಡ. ನಿನ್ನ ಸಂಯಮವು ನಿನಗೆ ಫಲವನ್ನು ಕೊಡುವುದು. ನಿನಗೆ ಗೌರವವನ್ನು ಕೊಡುವುದು. ನಾನು ನನ್ನ ಚಿತ್ರದಲ್ಲಿ ಸತ್ಯತೆಯನ್ನು, ಆನಂದವನ್ನು ಕಾಣುತ್ತೇನೆ. ನಾನು ವ್ಯಾಘ್ರತೆಯಿಂದ, ಸಮಾಧಾನದತ್ತ, ಅಬ್ಬರದಿಂದ ಮೌನದತ್ತ, ಲೌಖೀಕ ವಿನ್ಯಾಸದಿಂದ ಅಲೌಖೀಕ ವಿದ್ಯಾಸದತ್ತ ಸಾಗುತ್ತಿರುವೆನು. ಇನ್ನೇನು ಬೇಕು ನನ್ನ ಜೀವನದಲ್ಲಿ ಎಂದು ಕಲಾವಿದ ದೇವದಾಸ ಶೆಟ್ಟಿ ಅವರು ಮುಗುಳ್ನಕ್ಕು ಹೇಳುತ್ತಾರೆ.
ಗೀತೆಯಲ್ಲಿ ಶ್ರೀ ಕೃಷ್ಣನು ಹೇಳಿದಂತೆ, ಯಾವುದೇ ಕೆಲಸಗಳನ್ನು ಲಾಭಕ್ಕಾಗಿ ಮಾಡಬೇಡ. ಯಾವುದೇ ಉಪದೇಶವನ್ನು ಸ್ವಂತ ಅನುಭವದ ಆಧಾರದ ಮೇಲೆ ಮಾಡು. ಗೀತಾಮೃತವು ನನ್ನ ನುಡಿ ಮಾತಾಗಿರುವುದು. ಕಲಾವಿದ ನಾಳೆ ಇರುವುದಿಲ್ಲ. ಅವನ ಕೃತಿಗಳು ನೂರು ವರ್ಷ ಬಾಳುತ್ತದೆ. ಇಂದು ನೋಡಿದ ನಾಟಕವು ನಾಳೆ ಮಾಯವಾಗಬಹುದು. ಆದರೆ ಕಲಾವಿದ ಮತ್ತು ಸಾಹಿತ್ಯ ಕೃತಿಗಳು ಚಿರಂಜೀವಿಯಾಗಿರುವುದು. ಕಲಾವಿದ ದೇವದಾಸ್ ಶೆಟ್ಟಿ ಅವರಲ್ಲಿ ಹೀಗೆ ನಿರಂತರವಾಗಿ ಮಾತನಾಡುತ್ತ, ಅವರ ಬಗ್ಗೆ ಕೃತಿಯೊಂದನ್ನು ಬರೆಯಲು ಅವರ ಕಲೆಗಳ ಬಗ್ಗೆ ಮನದಲ್ಲೇ ಅಂತರ್‌ಗುಂಗನ್ನು ನಿರ್ಮಿಸಿ ಕೃತಿಯ ಚೌಕಟ್ಟನ್ನು ಮಾಡಿಕೊಂಡು ಅವರಿಂದ ಆಶೀರ್ವಾದವನ್ನು ಪಡೆದುಕೊಂಡು ನಾನು ಅಲ್ಲಿಂದ ಹೊರಬಂದೆ.
ಅನುಪಮಾ ಎನ್. ಭಟ್ ಮೂಡಬಿದಿರೆ