Advertisement

ಎಲ್ಲೆಡೆ ಕೃತಕ ನೆರೆ, ಬಾಯ್ದೆರೆದಿದೆ ಕಲ್ಲು ಕೋರೆ!

04:24 PM Jul 08, 2023 | Team Udayavani |

ಕಾರ್ಕಳ: ಮನೆಗಳ ಪಕ್ಕದಲ್ಲೇ ನೀರು ತುಂಬಿದ ಕಲ್ಲಿನ ಕೋರೆಗಳಲ್ಲಿ ಅನೇಕ ದುರ್ಘ‌ಟನೆಗಳಾಗಿರುದು ಆಗಾಗ ಸುದ್ದಿ ಬರುತ್ತಲೇ ಇರುತ್ತದೆ. ಇದು ಕಾರ್ಕಳ, ಹೆಬ್ರಿ ತಾ|ನ ಜನತೆ ಪ್ರತೀ ಮಳೆಗಾಲದಲ್ಲಿ ಎದುರಿಸುವ ಭೀತಿಯೂ ಇದೇ. ಇಲ್ಲಿನ ಇರುವ ನೂರಾರು ಕಲ್ಲಿನ ಕೋರೆಗಳು ಸುರಕ್ಷತೆ ಇಲ್ಲದೆ ಮೃತ್ಯು ಕೂಪವಾಗಿ ಪರಿಣಮಿಸಿವೆ.

Advertisement

ಮಳೆಗಾಲದಲ್ಲಿ ಕಲ್ಲು ಕೋರೆ ಗುಂಡಿಗಳು ಮುಚ್ಚದೇ ಬಿಡುವುದರಿಂದ ಮಳೆ ನೀರು ತುಂಬಿ ಅಪಾಯಕ್ಕೆ ಆಹ್ವಾನ ನೀಡುತ್ತದೆ. ಪಕ್ಕದ ಜನವಸತಿ ಪ್ರದೇಶಗಳ ನಿವಾಸಿಗಳು ಆತಂಕದಲ್ಲೇ ದಿನಗಳನ್ನು ಕಳೆಯುತ್ತಾರೆ, ಬೇಸಗೆಯಲ್ಲಿ ಶಬ್ಧ, ಮಾಲಿನ್ಯಗಳಿಂದ ತೊಂದರೆ ಅನುಭವಿಸಿದರೆ ಮಳೆಗಾಲ ಹೊಂಡದ ಕೃತಕ ನೆರೆಯಿಂದ ಸಮಸ್ಯೆ ಎದುರಿಸುತ್ತಾರೆ.

ಮಳೆಗಾಲ ಆರಂಭದಲ್ಲೇ ಮಾನವ ನಿರ್ಮಿತ ಕಲ್ಲುಕೋರೆ, ಹೊಂಡ, ಗುಂಡಿ, ಕೊಳವೆ ಹಾಗೂ ತೆರೆದ ಬಾವಿಗೆ ಬಿದ್ದು ಅನಾಹುತಗಳು ಸಂಭವಿಸುವ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಅದರಲ್ಲೂ ಮಕ್ಕಳು, ಮಹಿಳೆಯರೇ ಇದಕ್ಕೆ ಅತಿಯಾದ ಅನೇಕ ನಿದರ್ಶನಗಳಿದ್ದು ಕೋರೆ ಪಕ್ಕದಲ್ಲಿರುವ ನಿವಾಸಿಗಳು ಮಕ್ಕಳ ಬಗ್ಗೆ ಹಾಗೂ ತಾವೂ ಅತ್ತಿಂದಿತ್ತ ಹೋಗುವಾಗ ಎಚ್ಚರಿಕೆ ವಹಿಸುವುದು ಅಗತ್ಯ.

ಎಚ್ಚರಿಕೆ ನಾಮಫ‌ಲಕ ಇಲ್ಲ
ಬೇಸಗೆ ಕಳೆದು ಮಳೆ ಆರಂಭವಾಗುವ ವೇಳೆ ಕಲ್ಲಿನ ಕೋರೆಗಳನ್ನು ಮುಚ್ಚಬೇಕು. ಇಲ್ಲವೇ ಕಲ್ಲಿನ ಕೋರೆಗಳ ಸುತ್ತ ತಂತಿ ಬೇಲಿ ನಿರ್ಮಾಣ, ಎಚ್ಚರಿಕೆ ನಾಮಫ‌ಲಕ ಮುಂತಾದ ಸುರಕ್ಷತೆ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಕಾರ್ಕಳದಲ್ಲಿ ಕಲ್ಲು ಕೋರೆ ಹೆಚ್ಚು
ಕರಿಕಲ್ಲುಗಳ ಊರಾದ ಕಾರ್ಕಳ, ಹೆಬ್ರಿ ಭಾಗದಲ್ಲಿ ದೊಡ್ಡ ಮಟ್ಟದ ಕಲ್ಲಿನ ಕೋರೆಗಳು ವಿಶಾಲವಾಗಿವೆ. ಅಲ್ಲಿಗೆ ಹೋಗಿ ತೆರಳಿದಾಗ ಕೆರೆ, ಜಲಾಶಯದಂತೆ ದೊಡ್ಡ ಹೊಂಡಗಳಲ್ಲಿ ನೀರು ನಿಂತಿರುವುದು ಕಂಡುಬರುತ್ತಿದೆ. ಕೃತಕ ನೆರೆ ನಿಂತ ಕಲ್ಲುಕೋರೆಗಳ ಸುತ್ತಲೂ ಯಾವುದೇ ಸುರಕ್ಷತೆಗಳಿಲ್ಲದೆ ಹಾಗೇ ಬಿಟ್ಟಿರುವುದು ಕಂಡುಬರುತ್ತಿದೆ.

ಈಗಲೂ ಹಾಗೆಯೇ ಇದೆ

ಅಧಿಕ ಕಲ್ಲಿನ ಕೋರೆಗಳ ಸುತ್ತ ಇನ್ನು ಪೂರ್ಣ ಪ್ರಮಾಣದ ಸುರಕ್ಷತೆ ಕ್ರಮಗಳನ್ನು ಕೈಗೊಂಡಿಲ್ಲ. ತಾ|ನ ಕೆಲವೊಂದು ಕಲ್ಲಿನ ಕೋರೆಗಳ ಸ್ಥಳಗಳಿಗೆ ಭೇಟಿ ಕೊಟ್ಟಾಗ ಅರಿವಿಗೆ ಬಂದಿದೆ. ಕೃತಕ ನೆರೆ ಹೊಂಡಗಳಿರುವಲ್ಲೇ ಜನವಸತಿ ಪ್ರದೇಶಗಳಿವೆ. ರಸ್ತೆ ಪಕ್ಕ, ಬಸ್‌ ನಿಲ್ದಾಣ, ಶಾಲಾ ಪರಿಸರ, ಜನವಸತಿ ಇರುವ ಕಡೆಗಳಲ್ಲಿ ಈಗಲೂ ನೀರು ಸಂಗ್ರಹಗೊಂಡು ಅಪಾಯಕಾರಿ ಸ್ಥಿತಿಯಲ್ಲಿ ಬೃಹತ್‌ ಹೊಂಡಗಳು ಕಾಣಸಿಗುತ್ತವೆ.

Advertisement

ತಮಿಳು ಕುಟುಂಬಗಳೇ ಹೆಚ್ಚು
ಮಾನವ ನಿರ್ಮಿತ ಕಲ್ಲು ಕೋರೆಗಳಿರುವಲ್ಲಿ ಹೆಚ್ಚಾಗಿ ತಮಿಳು ಮೂಲದವರು ವಾಸವಿದ್ದಾರೆ. ಕಲ್ಲಿನ ಕೋರೆಗಳಲ್ಲಿ ಕಾರ್ಮಿಕರಾಗಿ ಕೆಲಸಕ್ಕೆ ಸೇರಿಕೊಂಡ ಕುಟುಂಬಗಳು ಅಲ್ಲೆ ವಾಸವಾಗಿದ್ದಾರೆ. ಸಣ್ಣಪುಟ್ಟ ಮಕ್ಕಳು ಆಟವಾಡುತ್ತ ನೀರಿರುವ ಹೊಂಡಗಳ ಕಡೆ ಹೋಗುತ್ತಿರುತ್ತಾರೆ. ಮಹಿಳೆಯರು ಕೈಕಾಲು ತೊಳೆಯಲು, ಕೆಲವೊಮ್ಮೆ ಬಟ್ಟೆ ಒಗೆಯಲು ಹೊಂಡಗಳ ಪಕ್ಕಕ್ಕೆ ತೆರಳು ತ್ತಾರೆ. ಆವಾಗೆಲ್ಲ ಅನಾಹುತಗಳಿಗೆ ಒಳಗಾಗುವ ಸಾಧ್ಯತೆಗಳೇ ಹೆಚ್ಚು.
ಇಂತಹ ಅಪಾಯಕಾರಿ ಕೃತಕ ಹೊಂಡಗಳು ರಸ್ತೆ, ಒಳ ರಸ್ತೆ, ಕಾಲು ದಾರಿಗಳ ಪಕ್ಕದಲ್ಲೇ ಹೆಚ್ಚಾಗಿದ್ದು ವಾಹನ ಸವಾರರು ತೆರಳುವಾಗ ಅಪಾಯಕ್ಕೆ ಸಿಲುಕುವ ಸಾಧ್ಯತೆಗಳಿವೆ. ಮಕ್ಕಳು ಶಾಲೆಗೆ ಕಾಲ್ನಡಿಗೆಯಲ್ಲಿ ತೆರಳುವಾಗ ಇದೇ
ಕೃತಕ ಹೊಂಡಗಳ ಪಕ್ಕದಲ್ಲೆ ಸಾಗುತ್ತಾರೆ.

ಕಾಗದಕ್ಕೆ ಸೀಮಿತವಾದ ಸೂಚನೆ
ಕಲ್ಯಾ, ಕುಕ್ಕುಂದೂರು ಗ್ರಾ.ಪಂ.ಗಳಲ್ಲಿ ಅಧಿಕ ಪ್ರಮಾಣದ ಕಲ್ಲಿನ ಕೋರೆಗಳಿವೆ. ಅನುಮತಿ ಪಡೆದು ಕೋರೆ ನಡೆಸುತ್ತಿರುವವರ ಜತೆ ಅನುಮತಿಯಿಲ್ಲದೆ ಅನಧಿಕೃತ ಕಲ್ಲು ಕೋರೆಗಳು ಇಲ್ಲಿ ಕಾರ್ಯಾಚರಿಸುತ್ತಿವೆ. ಇಂತಹ ಅಪಾಯಕಾರಿ ಕೋರೆಗಳನ್ನು ಪತ್ತೆ ಹಚ್ಚಿ ಮಳೆಗಾಲದ ಮುನ್ನವೇ ಸೂಕ್ತ ಕ್ರಮ ಕೈಗೊಳ್ಳಬೇಕಿದ್ದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಕಲ್ಲುಕೋರೆಗಳಿರುವ ಗ್ರಾ.ಪಂ.ಗಳಿಗೆ ಸೂಕ್ತ ಸುರಕ್ಷತೆ ವಹಿಸಿಕೊಳ್ಳುವಂತೆ ತಾ| ಆಡಳಿತದಿಂದ ಸೂಚನೆಗಳು ಹೋಗಿದ್ದರೂ ಖುದ್ದಾಗಿ ಕಲ್ಲುಕೋರೆಗಳಿಗೆ ಹೋಗಿ ನೋಡಿದರೇ ಅಲ್ಲಿ ಇಲ್ಲಿ ತನಕ ಯಾವ ಸುರಕ್ಷತೆಗಳು ಕಾಣಿಸುತ್ತಿಲ್ಲ.

ನೂರಾರು ಕೋರೆಗಳಿವೆ
ಕಾರ್ಕಳ, ಹೆಬ್ರಿ ತಾಲೂಕಿನ 56 ಗ್ರಾಮಗಳಲ್ಲಿ ಬಹುತೇಕ ಎಲ್ಲ ಕಡೆಗಳಲ್ಲಿ ಕಲ್ಲಿನ ಕೋರೆಗಳಿವೆ. ಕಾರ್ಕಳ 45, ಹೆಬ್ರಿ 6 ಕ್ರಷರ್‌ ಕೋರೆಗಳನ್ನು ಹೊರತುಪಡಿಸಿ, ಇನ್ನುಳಿದಂತೆ ಹಲವು ಕಡೆಗಳಲ್ಲಿ ಅನಧಿಕೃತ ಕೋರೆಗಳು ಸೇರಿ 200 ಘಟಕಗಳು ಕಾರ್ಯಾಚರಿಸುತ್ತಿವೆ.

ಪಿಡಿಒಗಳಿಗೆ ಸೂಚನೆ
ಮಳೆಗಾಲದ ಅಪಾಯಕಾರಿ ಕಲ್ಲುಕೋರೆಗಳಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಈಗಾಗಲೇ ಎಲ್ಲ ಪಂಚಾಯತ್‌ಗಳಿಗೆ ಸೂಚನೆ ನೀಡಲಾಗಿದೆ. ಇತ್ತೀಚೆಗೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲೂ ಶಾಸಕರಾದಿಯಾಗಿ ನಾನು ಸಹಿತ ಸ್ಪಷ್ಟ ಸೂಚನೆ ನೀಡಿದ್ದೇನೆ. ನಮ್ಮಲ್ಲಿ ನಾಲ್ಕು ಪಂ. ವ್ಯಾಪ್ತಿಯಲ್ಲಿ ಹೆಚ್ಚಿನ ಕೋರೆಗಳಿದ್ದು ಇನ್ನು ಸುರಕ್ಷತೆ ಕೈಗೊಳ್ಳದೆ ಇರುವ ಬಗ್ಗೆ ಮಾಹಿತಿ ಪಡೆಯುವೆ. -ಅನಂತಶಂಕರ ಬಿ.,
ತಹಶೀಲ್ದಾರ್‌ ಕಾರ್ಕಳ

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next