ನಂಬಿಕೆ ಸಂಬಂಧಗಳ ಬುನಾದಿಯಾಗಿರಬಹುದು. ಆದರೆ ಎಲ್ಲರೂ ನಂಬಿಕೆಗೆ ಅರ್ಹರಾಗುವುದಿಲ್ಲ. ಪ್ರೀತಿ ಭಾವನೆಯ ಅನುಬಂಧವೇ ಆಗಿರಬಹುದು ಆದರೆ ಎಲ್ಲರಿಗೂ ನೈಜ ಪ್ರೀತಿ ದೊರೆಯುವುದಿಲ್ಲ ಎಂಬ ಮಾತಿನಂತೆ ಈಗಿನ ಕಾಲದಲ್ಲಿ ನಂಬಿಕೆ ಎಂಬ ಪದಕ್ಕೆ ಬೆಲೆಯೇ ಇಲ್ಲದಂತಾಗಿದೆ. ಹಿಂದಿನ ಕಾಲದಲ್ಲಿ ಜನರು ನಂಬಿಕೆಯ ಮೇಲೆ ಜೀವನ ನಡೆಸುತ್ತಿದ್ದರು. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿ ಕಷ್ಟ ಎಂದು ಬಂದಾಗ ಸಹಾಯ ಮಾಡುತ್ತಿದ್ದರು. ಏಕೆಂದರೆ ಅವನಿಗೆ ನಂಬಿಕೆ ತಾನು ಕಷ್ಟದಲ್ಲಿರುವಾಗ ಆತ ತನಗೆ ಸಹಾಯ ಮಾಡಲು ಬರುತ್ತಾನೆ ಎಂದು. ಆದರೆ ಈಗ ಹಾಗಿಲ್ಲ. ಎಲ್ಲವೂ ಹಣದ ಮೇಲೆ ನಿಂತಿದೆ. ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ ಎಂಬಂತೆ ಜನರು ತಮಗೆ ಯಾರು ಜಾಸ್ತಿ ಹಣವು ನೀಡುತ್ತಾರೋ ಅವರ ಬಳಿ ಹೋಗುತ್ತಾರೆ.
ಜನರಿಗೆ ನಂಬಿಕೆ ಎಂಬ ಪದವೇ ಮರೆತು ಹೋದಂತೆ ಆಗಿದೆ. ಗೆಳೆತನ, ಸಂಬಂಧ ಪ್ರತಿಯೊಂದು ನಂಬಿಕೆಯ ಮೇಲೆ ನಿಂತಿರುತ್ತದೆ. ಈಗಿನ ಕಾಲದಲ್ಲಿ ಪ್ರತಿಯೊಂದು ಸಂಬಂಧವು ಹಾಳಾಗಲು ಮುಖ್ಯ ಕಾರಣ ಒಬ್ಬರ ಮೇಲೆ ಒಬ್ಬರಿಗೆ ನಂಬಿಕೆ ಇಲ್ಲದಿರುವುದು. ಯಾರ ಜೀವನದಲ್ಲೂ ಇವತ್ತು ಇರುವ ವ್ಯಕ್ತಿ ನಾಳೆ ಇರುತ್ತಾನೆ ಎಂಬ ನಂಬಿಕೆ ಇಲ್ಲ. ನಾವು ಮಾತ್ರ ಇನ್ನೊಬ್ಬರ ಮೇಲೆ ಅಪಾರವಾದ ನಂಬಿಕೆ ಇಟ್ಟರೆ ಸಾಲದು, ಅವರಿಗೂ ನಮ್ಮ ಮೇಲೆ ನಂಬಿಕೆ ಇರಬೇಕು.
ನಂಬಿಕೆ ಇಲ್ಲದ ಜೀವನ ಬದುಕಿದ್ದು ಸತ್ತ ಹಾಗೆ. ಬದುಕುವ ಮೂರು ದಿನಕ್ಕೆ ಯಾಕೆ ಬೇಕು ಈ ನಂಬಿಕೆ ದ್ರೋಹ. ಎಲ್ಲರನ್ನೂ ನಂಬಬೇಕು ಎಂದಿಲ್ಲ ಆದರೆ ನಮ್ಮವರ ಮೇಲೆ ನಂಬಿಕೆ ಇಡಿ. ಪ್ರಾಣಿಗಳಿಗೆ ಮನುಷ್ಯರ ಮೇಲೆ ಇರುವ ನಂಬಿಕೆಗೆ ಹೋಲಿಸಿದರೆ ಮನುಷ್ಯನಿಗೆ ಮನುಷ್ಯನ ಮೇಲೆ ಕಿಂಚಿತ್ತು ಸಹ ನಂಬಿಕೆ ಇಲ್ಲ. ನಂಬಿಕೆ ಇಲ್ಲದ ಜನರ ನಡುವೆ ಬದುಕುವುದಕ್ಕಿಂತ, ಪ್ರಾಣಿಗಳನ್ನು ಸಾಕಿ ಅದರ ನಡುವೆ ಬದುಕುವುದೇ ಉತ್ತಮ…
-ಮೇದಿನಿ ಎಸ್. ಭಟ್
ಎಂಜಿಎಂ ಕಾಲೇಜು, ಉಡುಪಿ