Advertisement
“ಇನ್ನೇನ್ರೀಪಾ…’ ಮುಂಜಾನೆ ಎದ್ದ ತಕ್ಷಣ ಕೂದಲು ಹಿಕ್ಕಿ ಗಂಟು ಬಿಡಿಸಿಕೊಳ್ಳುವ ಕೆಲಸ ಶುರು. ಅದೇನು ಸಣ್ಣ ಕೆಲಸವಾ ಹೇಳಿ. ಗಂಟು ಹಿಕ್ಕುವುದಕ್ಕೆ ಹತ್ತಾರು ವಿನ್ಯಾಸದ ಬಾಚಣಿಗೆಗಳು, ಹಚ್ಚಿಕೊಳ್ಳಲು ಸಿರಮ್ ಗಳು ಲಭ್ಯವಿದ್ದರೂ ಸುಲಭವಾಗಿ ಬಿಡುವುದಿಲ್ಲ. ಹಾಗೂ ಹೀಗೂ ಗುದ್ದಾಡಿ ಹಿಕ್ಕಿ, ಕೂದಲನ್ನು ಎತ್ತಿ ನೆತ್ತಿಯ ಮೇಲೆ ಗಂಟು ಬಿಗಿದು, ಉದುರಿರುವ ಕೂದಲುಗಳನ್ನು ಸಂಕಟಪಡುತ್ತಲೇ ಗಂಟು ಕಟ್ಟಿ ಡಸ್ಟ್‌ಬಿನ್ ಗೆ ಒಗೆದಾಗಲೇ ಬೆಳಗು ಸಂಪನ್ನ. ತಲೆಸ್ನಾನ ಮಾಡಿದಾಗಲೂ ಸಹ ಹೆಂಗಸರು ಉದ್ದನೆಯ ಕೂದಲಿಗೆ ತುದಿಗಂಟು ಹಾಕಿ ಪೂಜೆ ಮಾಡುವುದು ಹಳೆಯ ಕಾಲದಲ್ಲಿತ್ತು. ಈಗಿನವರದೆಲ್ಲ ಕತ್ತರಿಸಿದ ಮೊಂಡುಕೂದಲಾದ್ದರಿಂದ ಅದನ್ನೆಲ್ಲ ಯೋಚಿಸುವ ಹಾಗಿಲ್ಲ.
Related Articles
Advertisement
ಇನ್ನು ಮನೆಯಲ್ಲಿ ಗಂಡ, ಮಕ್ಕಳು, ಅತ್ತೆ, ಮಾವ, ಹೀಗೆ ಯಾವಾಗ ಯಾರ ಹುಬ್ಬು ಗಂಟಿಕ್ಕುತ್ತದೆಯೋ, ಯಾರ ಮುಖ ಗಂಟಿಕ್ಕುತ್ತದೆಯೋ ಯಾರಿಗೂ ಗೊತ್ತಾಗುವುದಿಲ್ಲ. ಉಳಿದವರ ಗಂಟು ಮಾರಿಗಳನ್ನು ಹೇಗಾದರೂ ರಿಪೇರಿ ಮಾಡಬಹುದೇನೋ, ಪತಿ ದೇವರ ಗಂಟುಮಾರಿ ಸರಿಮಾಡಲು ಈ ಜನ್ಮದಲಿ ಸಾಧ್ಯವಿಲ್ಲ ಬಿಡಿ.
ಅದೇನು ಮುಖವನ್ನು ಬೇಕೂ ಅಂತಾ ಗಂಟು ಹಾಕಿರುತ್ತಾರೋ, ಸಡಿಲ ಬಿಟ್ಟರೆ ಹೆಂಡತಿ ಎಲ್ಲಿ ತಲೆಯ ಮೇಲೆ ಹತ್ತಿ ಕುಳಿತುಬಿಡುತ್ತಾಳ್ಳೋ ಎನ್ನುವ ಭಯವೋ ಗೊತ್ತಿಲ್ಲ. ಒಟ್ಟಿನಲ್ಲಿ ಕಲಿತ ಬುದ್ದಿಯೆಲ್ಲ ಖರ್ಚಾಗದಿದ್ದರೆ ಕೇಳಿ. ಇನ್ನು ಅಡುಗೆಗೆ ಅಂತಾ ಹೋದರೆ ಉಪ್ಪಿಟ್ಟೋ, ಶಿರಾನೋ ಮಾಡುವಾಗ ಕೈಯ್ನಾಡಿಸುವುದನ್ನು ಮರೆತರೆ ಮುಗಿಯಿತು, ಗೋಡಂಬಿ ದ್ರಾಕ್ಷಿಯ ಬದಲಾಗಿ ಗಂಟುಗಳೇ ಹೆಚ್ಚು ಕಾಣುತ್ತಿರುತ್ತವೆ. ಗಂಟಿಲ್ಲದಂತೆ ಮುದ್ದೆ ಮಾಡುವುದು, ಹಿಟ್ಟು ಕಲೆಸುವುದೂ ಸಹ ಸುಲಭವಾಗಿ ಒಲಿಯದ ಕಲೆಯೆಂದೇ ಹೇಳಬಹುದು.
ಮದುವೆಗಳು ಸ್ವರ್ಗದಲ್ಲೇ ನಡೆಯುತ್ತವೆ ಎಂದು ಬಲ್ಲವರು ಹೇಳಿದರೂ, ಆ ಬ್ರಹ್ಮಗಂಟು ರಿಜಿಸ್ಟರ್ ಆಗುವುದು ಹೆಣ್ಣಿನ ಕೊರಳಿಗೆ ತಾಳಿಸರದ ಮೂರುಗಂಟು ಬಿದ್ದ ಮೇಲೆಯೇ. ಆ ತಾಳಿಸರದಲ್ಲೂ ಮತ್ತೆ ಐದು ಗಂಟು ಹಾಕಿರುತ್ತಾರೆ. ನಂತರವೂ ಸಪ್ತಪದಿ ಸುತ್ತುವಾಗ ಮತ್ತೆ ವಧು ವರರಿಬ್ಬರ ಉತ್ತರೀಯಕ್ಕೆ ಗಂಟು ಹಾಕಿರುತ್ತಾರೆ. ನಂತರ ಜೀವನ ಪೂರ್ತಿ ಪರಸ್ಪರ ಒಬ್ಬರನ್ನೊಬ್ಬರು “ಶನಿ ಗಂಟು ಬಿದ್ದಂತೆ ಗಂಟು ಬಿದ್ದಿದ್ದೀಯಾ ನೀನು’ ಎಂದು ಶಪಿಸಿಕೊಳ್ಳುತ್ತಲೇ ಸಾಗುವುದೇ ಜೀವನ. ಹರಿಶ್ಚಂದ್ರನಿಗೆ ನಕ್ಷತ್ರಿಕ ಗಂಟುಬಿದ್ದಂತೆ ಬದುಕು.
ಕತ್ತೆ ಇರುವುದೇ ಬಟ್ಟೆಯ ಗಂಟು ಹೊರುವುದಕ್ಕೆ ಎನ್ನುವ ಕಾಲವೂ ಇತ್ತು. ಹಳ್ಳಿಯ ಜನ ಸಂತೆಗೆ ಹೋದರೆಂದರೆ ಹೊರಲಾರದಷ್ಟು ಸಾಮಾನುಗಳನ್ನು ಚೀಲಗಳಲ್ಲಿ ತುಂಬಿ ಗಂಟು ಕಟ್ಟಿ, ಹೆಣ್ಣು ಮಕ್ಕಳಾದರೆ ತಲೆಯ ಮೇಲೊಂದು ಕಂಕುಳದಲ್ಲೊಂದು ಹೊತ್ತು ನಡೆಯುತ್ತಾರೆ. ಗಂಡಸರಾದರೆ ಹೆಗಲಲ್ಲೊಂದು, ಬಗಲಲ್ಲೊಂದು. ಈಗಲೂ ಬುತ್ತಿಗಂಟು ಕಟ್ಟಿಕೊಂಡು ಸೊಪ್ಪಿನ ಗಂಟು, ಹೂವಿನ ಗಂಟುಗಳನ್ನು ಹೊತ್ತು ಕೇರಿ ಕೇರಿ ತಿರುಗಿ ಮಾರಿ ಹೊಟ್ಟೆ ಹೊರೆಯುವವರಿದ್ದಾರೆ. ಮನೆಮನೆಗೆ ಬಟ್ಟೆಗಂಟು ಹೊತ್ತು ತಂದು ಮಾರುವವರು ಇತ್ತೀಚೆಗೆ ಕಡಿಮೆಯಾಗಿದ್ದಾರೆ.
ಸಣ್ಣಮಟ್ಟಿಗಿನ ಇಡುಗಂಟು ಕೂಡಿಡುವುದು ಪ್ರತಿಯೊಬ್ಬರ ಕನಸು. ಎಷ್ಟೋ ಜನರ ಕನಸುಗಳು ಕನ್ನಡಿಯೊಳಗಿನ ಗಂಟಾಗುವುದೇ ಹೆಚ್ಚು. ರಾಜಕಾರಣಿಗಳಂತೂ ಮೂರು ತಲೆಮಾರಿಗಾಗುವಷ್ಟು ಆಸ್ತಿಯನ್ನು ವಾಮಮಾರ್ಗದಲ್ಲಿ ಗಂಟಿಕ್ಕಿರುತ್ತಾರಾದ್ದರಿಂದ ಒಂದು ರೀತಿಯಲ್ಲಿ ಗಂಟುಕಳ್ಳರು ಎನ್ನಬಹುದು. ಕೊರೋನಾ ಸಮಯದಲ್ಲಿ ನಗರಗಳಿಂದ ಗಂಟು-ಮೂಟೆ ಕಟ್ಟಿಕೊಂಡು ತಮ್ಮ ಮೂಲ ನೆಲೆಗೆ ಹೊರಟವರು ನೆನಪಿರಬಹುದು.
ಕೆಲವರು “ಅಲ್ಲೇನು ಗಂಟಿಕ್ಕಿದೀಯಾ’, “ನಿನ್ನ ಗಂಟು ಏನು ತಿಂದಿದೀನಿ ನಾನು’ ಎಂದು ಮುಖ ಗಂಟಿಕ್ಕಿ, ಏನು ಗಂಟುಕೊಟ್ಟು ಬಿಟ್ಟಿದ್ದಾರೇನೋ ಎನ್ನುವಂತೆ ದಬಾಯಿಸುತ್ತಿರುತ್ತಾರೆ. ಆಗಿನ ಕಾಲದಲ್ಲಿ ಮೊಣಕಾಲುಗಂಟು ನೋವುಗಳು ಅಷ್ಟಾಗಿ ಬಾಧಿಸುತ್ತಿರಲಿಲ್ಲ. ಈಗ ನಲ್ವತ್ತು ವರ್ಷಕ್ಕೇ ಗಂಟುನೋವುಗಳು ಗಂಟುಬಿದ್ದು, ನಾಲ್ಕು ಹೆಜ್ಜೆ ನಡೆಯಲು ಕಷ್ಟಪಡುವವರು ತುಂಬ ಇದ್ದಾರೆ. ಜಾನುವಾರುಗಳಿಗೆ ಚರ್ಮಗಂಟು ರೋಗ ಮಾರಕವಾದರೆ ಮನುಷ್ಯರಿಗೆ ದೇಹದಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಗಂಟುಗಳ ಪೀಡೆ. ಮನುಷ್ಯ ಮಾಡಿದ ಪಾಪದ ಗಂಟು, ಪುಣ್ಯದ ಗಂಟು ದೇವರು ಲೆಕ್ಕ ಇಡುತ್ತಾನೆಂದು ಹೇಳುತ್ತಾರೆ.
ಹೂವಿನ ಮಾಲೆ ಅಥವಾ ಹಾರವಾಗುವುದೆಂದರೆ ಅದು ಗಂಟಿನ ನಂಟೇ. ಪೋಣಿಸುವುದಿದ್ದರೆ ದಾರಕ್ಕೆ ಎರಡೂ ಕಡೆ ತುದಿಗಂಟು, ಮಾಲೆ ಮಾಡುವುದಿದ್ದರೆ ಹೂವಿನ ಕುತ್ತಿಗೆಗೆ ಕೋಮಲಗಂಟು ಹಾಕಲೇಬೇಕು. ಉಲ್ಲನ್ ಅಥವಾ ದಾರದಿಂದ ಗಂಟಿನ ಹೆಣಿಕೆ ಹಾಕುವುದು ಜೊತೆಗೆ ಗಂಟು ರಂಗೋಲಿ ಕಲೆ ಹೆಣ್ಣುಮಕ್ಕಳಿಗೆ ತುಂಬ ಪ್ರಿಯವಾದದ್ದು. ಕೊಡದ ಕುತ್ತಿಗೆಗೆ ಕುಣಿಕೆ ಗಂಟು ಹಾಕದಿದ್ದರೆ ನೀರು ಸೇದಲು ಸಾಧ್ಯವೇ? ಆದರೆ ನೇಣಿನ ಕುಣಿಕೆಯ ಗಂಟು ತರುವ ನೋವು ಅಪಾರ.
ಕೆಲವು ಗಂಟುಗಳು ಗಂಟಾಗಿದ್ದರೆ ಮಾತ್ರ ಸುಂದರ ಅನುಬಂಧ, ಕೆಲವು ಗಂಟುಗಳು ಬಿಡುಗಡೆಯಾದಾಗಲೇ ಚಂದ. ಗಂಟಿನ ನಂಟಿನ ಅಂಟು ಮಾತ್ರ ಮನುಷ್ಯನ ಜೀವನದುದ್ದಕ್ಕೂ ವಿವಿಧ ರೂಪಗಳಲ್ಲಿ ಜೊತೆಯಾಗಿ ಸಾಗಿಬರುವುದುಂಟು.
-ನಳಿನಿ ಟಿ. ಭೀಮಪ್ಪ, ಧಾರವಾಡ