ದೇಹದ ಸಂದುಗಳ ಕೀಹೋಲ್ ಶಸ್ತ್ರಚಿಕಿತ್ಸೆಯನ್ನು ಆರ್ಥ್ರೊಸ್ಕೋಪಿ ಎಂದು ಕರೆಯಲಾಗುತ್ತದೆ. ಗ್ರೀಕ್ ಪದ ಆರ್ಥ್ರೊ ಅಂದರೆ ಸಂದು ಮತ್ತು ಸ್ಕೊಪ್ ಅಂದರೆ ನೋಡು ಎಂಬುದು ಈ ಪದದ ಮೂಲ; ಸಂದಿನ ಒಳಭಾಗವನ್ನು ನೋಡು ಎಂಬುದಾಗಿ ಅರ್ಥವನ್ನು ಮೂಡಿಸುತ್ತದೆ. ಈ ತಂತ್ರದಲ್ಲಿ ದೇಹದಲ್ಲಿರುವ ವಿವಿಧ ಸಂದಿಗಳ ಮೇಲ್ಭಾಗದಲ್ಲಿರುವ ಚರ್ಮದಲ್ಲಿ ಕಿರು ರಂಧ್ರಗಳನ್ನು ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಅತ್ಯಂತ ಕಡಿಮೆ ಗಾಯವನ್ನು ಉಂಟು ಮಾಡುವ ಶಸ್ತ್ರಚಿಕಿತ್ಸಾ ತಂತ್ರ ಎಂಬುದಾಗಿಯೂ ಇದನ್ನು ವರ್ಗೀಕರಿಸಬಹುದು.
ಮೊಣಗಂಟಿನಲ್ಲಿ ಲಿಗಮೆಂಟಲ್ ಮತ್ತು ಮೆನಿಸ್ಕಲ್ ಗಾಯಗಳು; ಭುಜ ಸಂದಿಯಲ್ಲಿ ಹರಿದಿರುವ ರೊಟೇಟರ್ ಕಫ್ಗಳನ್ನು ಈ ಶಸ್ತ್ರಚಿಕಿತ್ಸಾ ತಂತ್ರದ ಮೂಲಕ ಚಿಕಿತ್ಸೆಗೆ ಒಳಪಡಿಸಬಹುದು. ಸೌಂದರ್ಯಾತ್ಮಕವಾಗಿ ಉತ್ತಮ, ಚರ್ಮದ ಮೇಲೆ ದೊಡ್ಡ ಗಾಯದ ಕಲೆಯನ್ನು ಉಂಟು ಮಾಡುವುದಿಲ್ಲ, ಅರ್ಥ್ರೊಸ್ಕೋಪಿಕ್ ಶಸ್ತ್ರಕ್ರಿಯೆಯ ಬಳಿಕ ವ್ಯಕ್ತಿ ಬೇಗನೆ ಚೇತರಿಸಿಕೊಳ್ಳುತ್ತಾನೆ ಹಾಗೂ ಸುತ್ತಲಿನ ಜೀವಕೋಶಗಳಿಗೆ ಹಾನಿ ಉಂಟು ಮಾಡುವುದಿಲ್ಲ ಎಂಬ ಕಾರಣಕ್ಕಾಗಿ ಈ ಶಸ್ತ್ರಚಿಕಿತ್ಸಾ ತಂತ್ರ ಈಚೆಗಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಮೊಣಕಾಲು, ಭುಜದ ಸಂದಿ, ಮಣಿಗಂಟು, ಮಣಿಕಟ್ಟು ಶಸ್ತ್ರಕ್ರಿಯೆಯಲ್ಲಿ ಈ ತಂತ್ರವನ್ನು ಹೆಚ್ಚು ಹೆಚ್ಚಾಗಿ ಉಪಯೋಗಿಸಲಾಗುತ್ತಿದೆ ಹಾಗೂ ತೆರೆದ ಶಸ್ತ್ರಚಿಕಿತ್ಸೆಗಳಿಗೆ ಪ್ರಮುಖ ಪರ್ಯಾಯವಾಗಿ ಬೆಳೆಯುತ್ತಿದೆ.
ಆರ್ಥ್ರೊಸ್ಕೋಪಿಯ ವಿಕಾಸ ಆರಂಭವಾದದ್ದು 1912ರಲ್ಲಿ. ಆಗ ಕ್ರಿಶ್ಚಿಯನ್ ಜೇಕಬ್ಸ್ ಎಂಬ ಶಸ್ತ್ರಕ್ರಿಯಾ ತಜ್ಞರು ಮೊಣಕಾಲು ಸಂದಿಯ ಚಿಕಿತ್ಸೆಯಲ್ಲಿ ಎಂಡೊಸ್ಕೊಪಿಯನ್ನು ಬಳಸಿದರು, ಆರ್ಥ್ರೊಸ್ಕೋಪಿ ಎಂಬ ಹೆಸರು ನೀಡಿದರು.ಆರ್ಥ್ರೊಸ್ಕೋಪಿಯ ವಿಶೇಷ ದೃಶ್ಯ ಸಾಧನವನ್ನು ಜಪಾನೀ ಪ್ರೊಫೆಸರ್ ಕೆಂಜಿ ತಕಾಗಿ 1918ರಲ್ಲಿ ಪರಿಷ್ಕರಿಸಿದರು. 1962ರಲ್ಲಿ ಜಪಾನೀ ಪ್ರೊಫೆಸರ್ ಮಸಾಕಿ ವತಾನಬೆ ಎಂಬವರು ಮೊತ್ತಮೊದಲ ಪಾರ್ಶಿಯಲ್ ಮೆನಿಸೆಕ್ಟೊಮಿಯನ್ನು ನಡೆಸಿದರು.
ತಾಂತ್ರಿಕ ಆವಿಷ್ಕಾರಗಳು ಮುಂದುವರಿದಂತೆ ಟೆಲಿವಿಶನ್‌ಗಳಿಗೆ ಸಂಪರ್ಕ ನೀಡಿದ ವಿಡಿಯೋ ಕೆಮರಾಗಳ ಮೂಲಕ ಸಂದುಗಳ ಒಳಭಾಗವನ್ನು ವಿಡಿಯೋ ಮೂಲಕ ನೋಡುವುದಕ್ಕೆ ಸಾಧ್ಯವಾಗಿದೆ. ಇದರಿಂದಾಗಿ ಆರ್ಥ್ರೊಸ್ಕೋಪಿ ಶಸ್ತ್ರಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆಯಲ್ಲದೆ ಅದರ ಅನ್ವಯಿಕೆಗಳ ವ್ಯಾಪ್ತಿಯನ್ನೂ ಹಿಗ್ಗಿಸಿದೆ.
(ಮುಂದುವರಿಯುತ್ತದೆ)
– ಡಾ| ಎಂ. ಅರವಿಂದ,
ಡಾ| ಸಂದೀಪ್ ಕೆ.ಆರ್.,
ಕ್ರೀಡಾ ಗಾಯಗಳು ಮತ್ತು ಅರ್ಥ್ರೊಸ್ಕೋಪಿ ವಿಭಾಗ,
ಕೆಎಂಸಿ ಆಸ್ಪತ್ರೆ, ಮಂಗಳೂರು