Advertisement

ಕಲೆ ಮತ್ತು ಸಾಹಿತ್ಯಕ್ಕೆ ಸೃಜನಶೀಲತೆಯೇ ಮೂಲ

11:42 AM Feb 15, 2017 | |

ಬೆಂಗಳೂರು: “ಚಿತ್ರಕಲೆ ಮತ್ತು ಸಾಹಿತ್ಯಕ್ಕೆ ಸೃಜನಶೀಲತೆಯೇ ಮೂಲ,” ಎಂದು ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟಿದ್ದಾರೆ. “ಫೈನ್‌ ಆರ್ಟ್‌ ಕಾಲೇಜ್‌’ ಹಾಗೂ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಮಂಗಳವಾರ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಕಲಾವಿದರ ಶಿಬಿರದಲ್ಲಿ ಮಾತನಾಡಿದ ಅವರು, “ಸೃಜನಶೀಲತೆಯೇ ಕಲೆಯ ದೊಡ್ಡ ಸಂಪತ್ತು. ಅದು ಎಂದಿಗೂ ಸ್ವಂತಿಕೆಯನ್ನೇ ಅಪೇಕ್ಷಿಸುತ್ತದೆ. ಕಲಾವಿದರ ಪ್ರತಿಭೆ ಕಲಾಕೃತಿಗಳಲ್ಲಿ ಅಡಕವಾಗಿರುತ್ತದೆ,” ಎಂದು ಹೇಳಿದರು.

Advertisement

“ಕಲಾವಿದರ ಮನದಾಳದ ಭಾವನೆಗಳನ್ನು ಅಭಿವ್ಯಕ್ತಿಗೊಳಿಸಲು ಉತ್ತಮ ವೇದಿಕೆಗಳ ಅಗತ್ಯವಿದೆ. ಚಿತ್ರಕಲಾ ಪರಿಷತ್ತು ಅಂತಹ ವೇದಿಕೆ ಒದಗಿಸಿದ್ದು, ಅದರ ಸದುಪಯೋಗವಾಗಬೇಕು. ಬದುಕು ಮತ್ತು ಅದರ ಹಿನ್ನೆಲೆ ಕಟ್ಟಿಕೊಡುವ ಕಲಾವಿದರ ಕಲಾಕೃತಿಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ,” ಎಂದು ಹೇಳಿದರು. 

ರಾಜ್ಯಸಭಾ ಸದಸ್ಯ ಡಾ.ಎಂ.ವಿ.ರಾಜೀವ್‌ಗೌಡ ಮಾತನಾಡಿ, “ಕಲಾವಿದರು ಕಲಾಕೃತಿಗಳ ಮೂಲಕ ಸಮಾಜಕ್ಕೆ ನೀಡುವ ಸಂದೇಶ ಕಾನೂನಿಗಿಂತ ಮಿಗಿಲಾದದ್ದು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಲು ಕಲಾವಿದರ ಕೊಡುಗೆ ದೊಡ್ಡದು,” ಎಂದರು.  ಕರ್ನಾಟಕ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್‌.ಶಂಕರ್‌, “ಕಲಾವಿದರು ರಚಿಸುವ ಕಲಾಕೃತಿಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.

ಕಲಾಕೃತಿ ಮತ್ತು ಕಲಾವಿದರು ಕರ್ನಾಟಕದ ಆಸ್ತಿ,” ಎಂದರು.  ಕಾರ್ಯಕ್ರಮದಲ್ಲಿ ಪರಿಷತ್ತಿನ ಕಾರ್ಯದರ್ಶಿ ಪ್ರೊ.ಎಂ.ಜೆ.ಕಮಲಾಕ್ಷಿ, ಸಹಾಯಕ ಕಾರ್ಯದರ್ಶಿ ಪ್ರೊ.ಕೆ.ಎಸ್‌.ಅಪ್ಪಜಯ್ಯ ಉಪಸ್ಥಿತರಿದ್ದರು. ಮಂಗಳವಾರದಿಂದ ಆರಂಭವಾಗಿರುವ ರಾಷ್ಟ್ರೀಯ ಕಲಾ ಶಿಬಿರದಲ್ಲಿ ವಿವಿಧ ರಾಜ್ಯಗಳ 16 ಕಲಾವಿದರು ಭಾಗವಹಿಸಿದ್ದರು.  

ಫೆ.25ರಿಂದ ನ್ಯಾಷನಲ್‌ ಕಲಾ ಶಿಬಿರ: “ಫೆ.25ರಿಂದ 10 ದಿನಗಳ ಕಾಲ ನ್ಯಾಷನಲ್‌ ಕಲಾ ಶಿಬಿರ ಆಯೋಜಿಸಲು ಸಿದ್ಧತೆ ನಡೆಸುತ್ತಿದ್ದೇವೆ. ವಿವಿಧ ರಾಜ್ಯಗಳ ಸುಮಾರು 111 ಕಲಾವಿದರು ಈ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಆಂತರಿಕ ದೃಷ್ಟಿ ಇರುವ ಕಲಾವಿದರಿಗೆ ತಮ್ಮ ಭಾವನೆಗಳನ್ನು ಅಭಿವ್ಯಕ್ತಿಗೊಳಿಸಲು ಬೆಂಗಳೂರಿನಲ್ಲಿ ಅವಕಾಶಗಳು ಬಹಳಷ್ಟಿವೆ. ವಿವಿಧ ಸಮುದಾಯದ, ವಿವಿಧ ಪ್ರಜ್ಞೆಯ ಜನರಿದ್ದು, ಅದರ ಲಾಭ ಪಡೆಯಬಹುದಾಗಿದೆ,” ಎಂದು ಕೇಂದ್ರ ಲಲಿತಕಲಾ ಅಕಾಡೆಮಿ ಆಡಳಿತಾಧಿಕಾರಿ ಚಿ.ಸು.ಕೃಷ್ಣಶೆಟ್ಟಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next