Advertisement

ಕಲೆ, ಕಲಾವಿದರಿಗೆ ಗಡಿಯ ಹಂಗಿಲ್ಲ

06:57 AM Jan 07, 2019 | |

ಬೆಂಗಳೂರು: ಕಲೆ, ಕಲಾವಿದ ಹಾಗೂ ಕಲಾಸಕ್ತರಿಗೆ ನಿರ್ದಿಷ್ಟ ಗಡಿ ಇರುವುದಿಲ್ಲ ಅವರ ಕಾರ್ಯ ಕ್ಷೇತ್ರ ಎಂದಿಗೂ ವಿಶಾಲವಾಗಿ ಹಬ್ಬಿರುತ್ತದೆ. ಇದಕ್ಕೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಚಿತ್ರಸಂತೆಗೆ ಬಂದಿರುವ ವಿವಿಧ ದೇಶಗಳ, ನಾನಾ ರಾಜ್ಯದ ಕಲಾವಿದ, ಕಲಾಸಕ್ತರೇ ಸಾಕ್ಷಿ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

Advertisement

ಕುಮಾರಕೃಪಾ ರಸ್ತೆಯ ಸುತ್ತಮುತ್ತ ಚಿತ್ರ ಕಲಾಪರಿಷತ್‌ ವತಿಯಿಂದ ಭಾನುವಾರ ಆಯೋಜಿಸಿದ್ದ 16ನೇ ಚಿತ್ರಸಂತೆಯಲ್ಲಿ ಗಾಂಧಿ ಕುಟೀರ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ತಾನು ಹೇಳಿಕೊಳ್ಳಲಾಗದ ಭಾವನೆಗಳನ್ನು ಚಿತ್ರಕಲೆಯ ಮೂಲಕ ವ್ಯಕ್ತಪಡಿಸುತ್ತಾನೆ.

ಮುಖ್ಯವಾಗಿ ಮಾಧ್ಯಮಗಳು ವ್ಯಂಗ್ಯ ಚಿತ್ರದ ಮೂಲಕ ಸಮಾಜದ ಅಂಕುಡೊಂಕು, ಜನಪ್ರತಿನಿಧಿಗಳ ನಡೆನುಡಿ ತಿದ್ದುತ್ತಿವೆ. ಚಿತ್ರ ಕಲಾವಿದರು ಹಾಗೂ ಕಲಾಸಕ್ತರ ಸಮ್ಮಿಲನಕ್ಕೆ ಬೃಹತ್‌ ವೇದಿಕೆ ಒದಗಿಸಿಕೊಡುತ್ತಿರುವ ಚಿತ್ರಕಲಾ ಪರಿಷತ್ತಿನ ಚಿತ್ರ ಸಂತೆ, ಇಂದು ದೇಶದಾದ್ಯಂತ ಪ್ರಸಿದ್ಧಿ ಪಡೆದಿದ್ದು, ಇಲ್ಲಿಗೆ ದೇಶ ವಿದೇಶಗಳಿಂದ ಜನರು ಬರುತ್ತಾರೆ ಎಂದರು. 

ಸಂಸ್ಕೃತಿ ಭಾರತದ ಆಸ್ತಿಯಾಗಿದ್ದು, ಬೆಂಗಳೂರು ಬಿಟ್ಟರೆ ಈ ರೀತಿಯ ಸಂಸ್ಕೃತಿ ಪ್ರಧಾನ ಚಿತ್ರ ಜಾತ್ರೆ ಎಲ್ಲೂ ನಡೆಯುವುದಿಲ್ಲ. ಇಂತಹ ಚಿತ್ರಸಂತೆಯಲ್ಲಿ ಆರಂಭದಿಂದಲೂ ಪಾಲ್ಗೊಂಡು, ಪ್ರೋತ್ಸಾಹಿಸುತ್ತಾ ಬಂದಿರುವ ನಾಗರಿಕರು, ಸಂತೆಯ ಭವ್ಯ ಇತಿಹಾಸಕ್ಕೆ ಸಾಕ್ಷಿಯಾಗುತ್ತಿದ್ದಾರೆ.

ಈ ಬಾರಿ ಕೂಡ ಎಂದಿನಂತೆ  ಸಾವಿರಾರು ಕಲಾವಿದರು ಲಕ್ಷಾಂತರ ಜನ ಸೇರಿದ್ದು, ವರ್ಷದಿಂದ ವರ್ಷಕ್ಕೆ ಚಿತ್ರ ಸಂತೆಯ ವ್ಯಾಪ್ತಿ ಹೆಚ್ಚುತ್ತಿದೆ. ಮುಂದಿನ ವರ್ಷದಿಂದ ಚಿತ್ರಸಂತೆಗೆ ಹೆಚ್ಚಿನ ಸ್ಥಳಾವಕಾಶ ಅಗತ್ಯ ಬೀಳಲಿದ್ದು, ಬೇರೊಂದು, ವಿಶಾಲ ಸ್ಥಳದಲ್ಲಿ ಸಂತೆಯನ್ನು ಆಯೋಜಿಸಲು ಚಿಂತನೆ ನಡೆದಿದೆ. ಹಾಗೇ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಾರ್ಯಕ್ರಮಗಳಿಗೆ ಕನ್ನಡ ಸಂಸ್ಕೃತಿ ಇಲಾಖೆಯಿಂದ ಸದಾ ಸಹಕಾರ ಇರಲಿದೆ ಎಂದು ಭರವಸೆ ನೀಡಿದರು.

Advertisement

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಬೆಂಗಳೂರಿನ ಚಿತ್ರಸಂತೆ ಕಲಾವಿದರ ಪ್ರತಿಭೆ ಗುರುತಿಸುವ ವೇದಿಕೆಯಾಗಿದೆ. ಇಲ್ಲಿ ಸಾವಿರಾರು ಕಲಾವಿದರ ಪ್ರತಿಭೆ ಅನಾವರಣಗೊಂಡಿದೆ. ಕಲಾ ಶಿಕ್ಷಣ ಹಾಗೂ ಕಲಾವಿದರಿಗೆ ಉನ್ನತ ಶಿಕ್ಷಣ ಇಲಾಖೆಯಿಂದ ಅಗತ್ಯ ನೆರವು ನೀಡಲಾಗುವುದು. ಇದು ಸಂತೆಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಜಾತ್ರೆಯಾಗಿ ಮಾರ್ಪಟ್ಟಿದೆ. ಇಲ್ಲಿ ಕಲಾವಿದರು ನಮ್ಮ ಸಂಸ್ಕೃತಿ ಪ್ರತಿನಿಧಿಸುವ ಕಲಾಕೃತಿ ಪ್ರದರ್ಶನಕ್ಕೆ ಇಟ್ಟಿರುವುದು ಸಂತತ ವಿಚಾರ ಎಂದರು.

ಇಸ್ರೋ ಮಾಜಿ ಅಧ್ಯಕ್ಷ ಕಿರಣ್‌ಕುಮಾರ್‌ ಮಾತನಾಡಿ, ಚಿತ್ರಕಲಾ ಪರಿಷತ್ತು ಚಿತ್ರಸಂತೆ ಮೂಲಕ ಬೆಂಗಳೂರನ್ನು ಸಾಂಸ್ಕೃತಿಕ ನಗರಿಯಾಗಿಸಿದೆ. ಹೊಸ ವರ್ಷದ ಆರಂಭದಲ್ಲಿಯೇ ನಡೆಯುವ ಚಿತ್ರಸಂತೆ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಲಾಗುತ್ತಿದೆ. ಕಲಾವಿದರು ಜೀವನದ ಅನುಭವವನ್ನು ಚಿತ್ರಗಳ ಮೂಲಕ ವ್ಯಕ್ತಪಡಿಸುತ್ತಿದ್ದು, ಚಿತ್ರ ಸಂತೆಯಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದು ಹೇಳಿದರು.

ಸಂಸದ ಪಿ.ಸಿ.ಮೋಹನ್‌ ಮಾತನಾಡಿ, ವರ್ಷದಿಂದ ವರ್ಷಕ್ಕೆ ಕಲಾವಿದರ ಹಾಗೂ ಕಲಾಸಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿಂದೆ ಒಂದು ರಸ್ತೆಯಲ್ಲಿ ಮಾತ್ರ ಸಂತೆ ನಡೆಯುತ್ತಿದ್ದು, ಪ್ರಸ್ತುತ ಕುಮಾರಕೃಪ ರಸ್ತೆಯನ್ನೂ ಮೀರಿ, ಗಾಲ್ಪ್ ಕ್ಲಬ್‌ ಸುತ್ತ ಸಂತೆ ವಿಸ್ತರಿಸಿದೆ. ಚಿತ್ರಸಂತೆ ಬಗ್ಗೆ ದೇಶವೇ ಮಾತನಾಡುತ್ತಿರುವುದು ಬೆಂಗಳೂರಿಗರಿಗೆ ಹೆಮ್ಮೆಯ ಸಂಗತಿ ಎಂದರು.

ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಮಾತನಾಡಿ, ಕರ್ನಾಟಕ ಚಿತ್ರಕಲಾ ಪರಿಷತ್‌ ಪ್ರತಿ ವರ್ಷ ಚಿತ್ರಸಂತೆ ಆಯೋಜಿಸುವ ನಮೂಲಕ ಯುವಜನರ ಪ್ರತಿಭೆ ಗುರುತಿಸಿ, ವೇದಿಕೆ ಕಲ್ಪಿಸುತ್ತಿದೆ. ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಭಿವೃದ್ಧಿಗೆ ಪಾಲಿಕೆಯಿಂದ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next