Advertisement

ರಾಹುಲ್‌ ಬಂದಿದ್ದ ವಿಮಾನ ದಿಲ್ಲಿಗೆ

05:30 PM May 02, 2018 | Team Udayavani |

ಹುಬ್ಬಳ್ಳಿ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಯಾಣಿಸಿದ್ದ ವಿಶೇಷ ವಿಮಾನದಲ್ಲಿ ಕಂಡು ಬಂದ ತಾಂತ್ರಿಕ ದೋಷ ಪ್ರಕರಣಕ್ಕೆ ಸಂಬಂಧಿಸಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ(ಡಿಜಿಸಿಎ) ಅಧಿಕಾರಿಗಳ ತಂಡ ಶನಿವಾರ ಬೆಳಗ್ಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಹೋದ ಬೆನ್ನಲ್ಲೇ ವಿಶೇಷ ವಿಮಾನ ಸಂಜೆ ದೆಹಲಿಗೆ ಹಾರಾಟ ಮಾಡಿದ್ದು ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

Advertisement

ಚುನಾವಣಾ ಪ್ರಚಾರಾರ್ಥ ಗುರುವಾರ ಅಂಕೋಲಾಗೆ ತೆರಳಲೆಂದು ರಾಹುಲ್‌ ಗಾಂಧಿ ದೆಹಲಿಯಿಂದ ನಗರಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ್ದರು. ಆಗ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ನಗರದ ಗೋಕುಲ ರಸ್ತೆ ಠಾಣೆಯಲ್ಲಿ ವಿಶೇಷ ವಿಮಾನದ ಇಬ್ಬರು ಪೈಲಟ್‌ಗಳ ಮೇಲೆ ದೂರು ದಾಖಲಾಗಿತ್ತು. ಜೊತೆಗೆ ಈ ಕುರಿತು ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ಡಿಜಿಪಿ ನೀಲಮಣಿ ಎನ್‌. ರಾಜು ಅವರ ಗಮನಕ್ಕೂ ತಂದಿದ್ದರು.

ಒಂದು ಮೂಲದ ಪ್ರಕಾರ ಆಕಾಶದಲ್ಲಿ ಬೀಸಿದ ಗಾಳಿಯಿಂದ ವಿಮಾನ ಅಲ್ಲಾಡಿದಂತೆ ಆಗಿತ್ತು. ಆಗ ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರು ಇಂಜಿನ್‌ದಲ್ಲಿ ಶಬ್ದ ಕೇಳಿತು, ಎಡಕ್ಕೆ ವಾಲಿದಂತೆ ಭಾಸವಾಗಿದೆ. ಹೀಗಾಗಿ ಅವರು ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎಂದು ಗೋಕುಲ ರಸ್ತೆ ಠಾಣೆಯಲ್ಲಿ ದೂರು ಕೊಟ್ಟಿರಬಹುದು ಎನ್ನಲಾಗುತ್ತಿದೆ.

ದೂರಿನ ಹಿನ್ನೆಲೆಯಲ್ಲಿ ಡಿಜಿಸಿಎ ಅಧಿಕಾರಿಗಳ ತಂಡ ನಗರಕ್ಕೆ ಆಗಮಿಸಿ ವಿಶೇಷ ವಿಮಾನದಲ್ಲಿನ ಬ್ಲಾಕ್‌ ಬಾಕ್ಸ್‌ ಪರಿಶೀಲನೆ ನಡೆಸಿ ಮಧ್ಯಾಹ್ನವೇ ತೆರಳಿದ್ದರು. ಅದೇ ದಿನ ಸಂಜೆ 7:00 ಗಂಟೆ ಸುಮಾರಿಗೆ ವಿಶೇಷ ವಿಮಾನವು ದೆಹಲಿಯತ್ತ ಹಾರಾಟ ನಡೆಸಿತು. ಈ ವಿಮಾನ ಪರಿಶೀಲನೆ ನಡೆಸಿದ ಡಿಜಿಸಿಎದ ಅಧಿಕಾರಿಗಳ ತಂಡ ವರದಿ ನೀಡುವುದು ಬಾಕಿ ಇದ್ದು, ಅದು ಬರುವುದು ಬಾಕಿ ಉಳಿದಿದೆ. ನಂತರವಷ್ಟೆ ವಿಮಾನದಲ್ಲಿ ನಿಜವಾಗಲೂ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತೋ ಇಲ್ಲವೋ ಎಂಬುದು ಬಹಿರಂಗವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next