Advertisement

ವಾಹನ ಕಳ್ಳರ ಬಂಧನ: ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರ ಸೆರೆ

11:34 AM Jul 28, 2022 | Team Udayavani |

ಬೆಂಗಳೂರು: ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮನೆ ಮುಂದೆ ನಿಲುಗಡೆ ಮಾಡಿದ್ದ ದ್ವಿಚಕ್ರವಾಹನದ ಹ್ಯಾಂಡ್‌ಲಾಕ್‌ ಮುರಿದು ಕಳ್ಳತನ ಮಾಡುತ್ತಿದ್ದ ಎಂಜಿನಿಯರ್‌ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಐಶಾರಾಮಿ ಜೀವನಕ್ಕಾಗಿ ದ್ವಿಚಕ್ರ ವಾಹನ ಕಳ್ಳತನಕ್ಕೆ ಇಳಿದಿದ್ದ ಎಂಜಿನಿಯರ್‌ ಚಿಕ್ಕಬಳ್ಳಾಪುರದ ನಿವಾಸಿ ಕಿಶನ್‌ ಚೌದರಿ (21) ಎಂಬಾತನನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿ 11 ಲಕ್ಷ ರೂ. ಮೌಲ್ಯದ 14 ದ್ವಿಚಕ್ರ ವಾಹನ ಜಪ್ತಿ ಮಾಡಿದರೆ, ಮತ್ತೂಂದು ಪ್ರಕರಣದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕದಿಯುತ್ತಿದ್ದ ನಾಗರಭಾವಿ ನಿವಾಸಿ ಗಣೇಶ್‌ (22), ವಿನಾಯಕ ಲೇಔಟ್‌ನ ಮಾದೇಶ (23) ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, 6 ಲಕ್ಷ ರೂ. ಮೌಲ್ಯದ 10 ಬೈಕ್‌ ಜಪ್ತಿ ಮಾಡಿದ್ದಾರೆ.

ಸೋಲದೇವನಹಳ್ಳಿ ಪೊಲೀಸರು ಸಂಘರ್ಷಕ್ಕೊಳಗಾದ ಬಾಲಕನನ್ನು ಬಂಧಿಸಿ 10 ದ್ವಿಚಕ್ರವಾಹನ ವಶಪಡಿಸಿಕೊಂಡಿದ್ದಾರೆ. ಆರೋಪಿ ಕಿಶನ್‌ ಚೌದರಿ ಎಂಜಿನಿಯರಿಂಗ್‌ ಮುಗಿಸಿ ದ್ವಿಚಕ್ರವಾಹನ ಸರ್ವೀಸ್‌ ಸೆಂಟರ್‌ ನಲ್ಲಿ ಕೆಲಸ ಮಾಡುತ್ತಿದ್ದ. ಮೋಜು-ಮಸ್ತಿಗೆ ತಾನು ಸಂಪಾದಿಸುತ್ತಿದ್ದ ಹಣ ಸಾಲುತ್ತಿರಲಿಲ್ಲ. ಹೀಗಾಗಿ ಬೈಕ್‌ ಕಳ್ಳತನಕ್ಕಿಳಿದಿದ್ದ. ಕದ್ದ ಬೈಕ್‌ ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಬಂದ ಹಣದಲ್ಲಿ ದುಂದುವೆಚ್ಚ ಮಾಡುತ್ತಿದ್ದ.

ಆರ್ಕೆಡ್‌ ಲೇಔಟ್‌ ನಿವಾಸಿ ವೆಂಕಟೇಶ್‌ ಜು.9ರಂದು ರಾತ್ರಿ 9 ಗಂಟೆಗೆ ತಮ್ಮ ದ್ವಿಚಕ್ರ ವಾಹನವನ್ನು ಮನೆಯ ಗೇಟ್‌ ಒಳಗೆ ನಿಲ್ಲಿಸಿ ಊರಿಗೆ ಹೋಗಿದ್ದರು. ಆರೋಪಿಯು ಇವರ ಬೈಕನ್ನು ಕಳ್ಳತನ ಮಾಡಿದ್ದ. 2 ದಿನದ ಬಳಿಕ ಮನೆಗೆ ವಾಪಾಸ್ಸಾದಾಗ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಬಗ್ಗೆ ವಿದ್ಯಾರಣ್ಯಪುರ ಠಾಣೆಗೆ ವೆಂಕಟೇಶ್‌ ದೂರು ನೀಡಿದ್ದರು. ಕೇಸು ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಚೌದರಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.

ಸಂಘರ್ಷಕ್ಕೊಳಗಾದ ಬಾಲಕ ಬಂಧನ

Advertisement

ನಗರದಾದ್ಯಂತ ಸುತ್ತಾಡಿ ಸ್ಕೂಟರ್‌ಗಳನ್ನೇ ಟಾರ್ಗೆಟ್‌ ಮಾಡಿಕೊಂಡು ಕದಿಯುತ್ತಿದ್ದ ಸಂಘರ್ಷಕ್ಕೊಳಗಾದ ಬಾಲಕನನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆತ ಚಿಕ್ಕಬಾಣಾವರದ ಬಳಿ ನಿಲುಗಡೆ ಮಾಡಿದ್ದ ಡಿಯೋ ಸ್ಕೂಟರ್‌ ಅನ್ನು ಕಳ್ಳತನ ಮಾಡಿದ್ದ. ಕದ್ದ ಸ್ಕೂಟರ್‌ ಅನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೇಸು ದಾಖಲಾಗಿದೆ.

ಇಬ್ಬರು ಬೈಕ್ಚೋರರ ಸೆರೆ

ಮತ್ತೊಂದು ಪ್ರಕರಣದಲ್ಲಿ ಆರೋಪಿಗಳಾದ ಗಣೇಶ್‌ ಹಾಗೂ ಮಾದೇಶ ವೃತ್ತಿಪರ ಬೈಕ್‌ ಕಳ್ಳರಾಗಿದ್ದು, ಮನೆ ಮುಂದೆ ನಿಲುಗಡೆ ಮಾಡುವ ಬೈಕ್‌ ಮಾರಾಟ ಮಾಡಿ ಬಂದ ದುಡ್ಡಿನಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದರು. ಅನ್ನಪೂರ್ಣೇಶ್ವರಿನಗರ ನಿವಾಸಿ ಶೈಲೇಶ್‌ ಪರ್ಸಾನಿಯಾ ಜು.16ರಂದು ರಾತ್ರಿ ತಮ್ಮ ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟರ್‌ ಅನ್ನು ಆರೋಪಿಗಳು ಕದ್ದೊಯ್ದಿದ್ದರು. ಈ ಬಗ್ಗೆ ಅವರು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೊಂಡು ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next