ಒಂದು ವೇಳೆ ಈ ದೂರು ನೀಡಿದ ವ್ಯಕ್ತಿ ಝೈರಾ ಅಲ್ಲದೆ ಯಾರೋ ಒಬ್ಬ ಸಾಮಾನ್ಯ ಮಹಿಳೆಯಾಗಿದ್ದರೆ ಪೊಲೀಸರು ಇಷ್ಟೇ ಚುರುಕಾಗಿ ಕಾರ್ಯ ಪ್ರವೃತ್ತರಾಗುತ್ತಿದ್ದರೆ? ಸಚ್‌ದೇವ್ ನಿರಪರಾಧಿ ಎಂದು ಸಾಬೀತಾದರೆ ಅವರಿಗಾಗಿರುವ ತೊಂದರೆಗೆ ಯಾರು ಹೊಣೆ?
ದಂಗಲ್ ಚಿತ್ರದಿಂದ ಖ್ಯಾತಿಗೆ ಬಂದಿರುವ ನಟಿ ಝೈರಾ ವಾಸಿಮ್ ಈಗ ಸಿನೇಮಾಗಳಿಗಿಂತಲೂ ವಿವಾದಗಳಿಂದಾಗಿಯೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ದಿಲ್ಲಿಯಿಂದ ಮುಂಬಯಿಗೆ ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನವೊಂದರಲ್ಲಿ ಲೈಂಗಿಕ ಕಿರುಕುಳಕ್ಕೆ ಗುರಿಯಾಗಿದ್ದೇನೆ ಎಂದು ಝೈರಾ ಕಳೆದ ವಾರ ಆರೋಪಿಸಿದ್ದು, ಇದೀಗ ಈ ಪ್ರಕರಣಗಳು ಹಲವು ಪ್ರಶ್ನೆಗಳನ್ನೆತ್ತುವಂತೆ ಮಾಡಿದೆ. ಕಾಶ್ಮೀರದ ಹದಿಹರೆಯದ ಹುಡುಗಿಯೊಬ್ಬಳು ಅಮೀರ್ ಖಾನ್ ಅವರಂತಹ ಶ್ರೇಷ್ಠ ನಟನ ಜತೆಗೆ ನಟಿಸಲು ಅವಕಾಶವನ್ನು ಪಡೆದಾಗ ಇಡೀ ದೇಶ ಆಕೆಯನ್ನು ಹೆಮ್ಮೆಯಿಂದ ಕೊಂಡಾಡಿತ್ತು. ಆಕೆ ಕಾಶ್ಮೀರದ ಯುವತಿಯರ ಆಶೋತ್ತರಗಳ ಪ್ರತಿನಿಧಿ ಎಂಬರ್ಥದಲ್ಲಿ ಹೊಗಳಿ ಅಟ್ಟಕ್ಕೇರಿಸಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಆಕೆಯನ್ನು ವಿವಾದ ಬೆನ್ನಟ್ಟಿಕೊಂಡು ಬಂತು. ಜಮ್ಮು- ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಬಾಲಿವುಡ್‌ನಲ್ಲಿ ಹೆಸರು ಮಾಡಿದ ತನ್ನ ರಾಜ್ಯದ ಹುಡುಗಿಯನ್ನು ಕರೆದು ಅಭಿನಂದಿಸಿದ್ದು ಸಹಜವಾಗಿತ್ತು. ಆದರೆ ಇದು ಪ್ರತ್ಯೇಕವಾದಿಗಳ ಕಣ್ಣು ಕೆಂಪಗಾಗುವಂತೆ ಮಾಡಿತು. ಅವರು ಬೆದರಿಕೆಯೊಡ್ಡಿದ ಮರುದಿನವೇ ಝೈರಾ ಫೇಸ್‌ಬುಕ್‌ನಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ತಪ್ಪು ಮಾಡಿದೆ ಎಂಬರ್ಥದಲ್ಲಿ ತಪ್ಪೊಪ್ಪಿಗೆ ಹೇಳಿಕೆಯನ್ನು ಪೋಸ್ಟ್ ಮಾಡಿದಾಗ ವಿವಾದ ಭುಗಿಲೆದ್ದಿತು. ಈ ಸಂದರ್ಭದಲ್ಲಿ ಇಡೀ ದೇಶ ಝೈರಾ ಬೆಂಬಲಕ್ಕೆ ನಿಂತಿತು. ಇನ್ನೂ ಚಿಕ್ಕ ಹುಡುಗಿ, ಏನೋ ತಿಳಿಯದೆ ಬರಕೊಂಡಿದ್ದಾಳೆ ಎಂದು ಅವರ ಪರವಾಗಿ ವಕಾಲತ್ತು ಮಾಡಿತು. ಈ ವಿವಾದ ತಣ್ಣಗಾದರೂ ಝೈರಾ ಮಾತ್ರ ಸೆಲೆಬ್ರಿಟಿಯಾದರು. ನಟಿಸಿದ್ದು ಒಂದೇ ಚಿತ್ರದಲ್ಲಾದರೂ ಯಾವ ಜನಪ್ರಿಯ ನಾಯಕಿಗೂ ಕಡಿಮೆಯಿಲ್ಲದಂತೆ ಅವರು ಮಿಂಚತೊಡಗಿದರು. ಇದರಲ್ಲಿ ಮಾಧ್ಯಮಗಳ ಕೊಡುಗೆಯೂ ಸಾಕಷ್ಟಿದೆ. ಹೀಗೆ ವಿವಾದ ಮಾಡಿದರೆ ಹೆಚ್ಚು ಪ್ರಚಾರ ಸಿಗುತ್ತದೆ ಎಂದು ಝೈರಾ ಭಾವಿಸಿದ್ದಾರೆಯೇ ಎನ್ನುವುದು ಕಳೆದ ವಾರದ ಪ್ರಕರಣ ಹುಟ್ಟು ಹಾಕಿರುವ ಪ್ರಶ್ನೆ.
ವಿಮಾನದ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮುಂಬಯಿಯ ವಿಕಾಸ್ ಸಚ್‌ದೇವ್ ಎಂಬ ಮಧ್ಯ ವಯಸ್ಸಿನ ವ್ಯಕ್ತಿ ಕಾಲಿನಲ್ಲಿ ಮೈದಡವಿ ಕಿರುಕುಳ ನೀಡಿದ್ದಾರೆ. ಈ ಘಟನೆಯನ್ನು ವೀಡಿಯೊ ಚಿತ್ರೀಕರಿಸಲು ಯತ್ನಿಸಿದರೂ ಮಂದ ಬೆಳಕಿನಿಂದ ಸಾಧ್ಯವಾಗಲಿಲ್ಲ ಎಂದು ಝೈರಾ ಮಾಧ್ಯಮಗಳ ಎದುರು ಹೇಳಿಕೊಂಡದ್ದೇ ತಡ ದಂಗಲ್ ಹುಡುಗಿಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ ಎಂದು ಭಾರೀ ದೊಡ್ಡ ಸುದ್ದಿಯಾಯಿತು. ಮಾಧ್ಯಮಗಳು ಯಥಾಪ್ರಕಾರ ಸಚ್‌ದೇವ್ ಅವರನ್ನು ಆರೋಪಿ ಎಂದು ಘೋಷಿಸಿಯಾಗಿತ್ತು. ವಿಚಿತ್ರವೆಂದರೆ ಪೊಲೀಸರು ಕೂಡ ನಟಿ ಹೇಳಿದ ಮಾತನ್ನೇ ನಂಬಿ ಸಚ್‌ದೇವ್ ಅವರನ್ನು ಬಂಧಿಸಿ ಪೋಸ್ಕೊ ಕಾಯಿದೆಯಡಿ ಕೇಸ್ ದಾಖಲಿಸಿಕೊಂಡದ್ದು. ಕನಿಷ್ಠ ಅವರ ಹೇಳಿಕೆಯನ್ನು ಪಡೆದು ಸತ್ಯಾಸತ್ಯತೆಯನ್ನು ವಿವೇಚಿಸುವ ಸೌಜನ್ಯವನ್ನೂ ಪೊಲೀಸರು ತೋರಿಸಲಿಲ್ಲ. ಸೆಲೆಬ್ರಿಟಿಗಳು ಹೇಳಿದ್ದೇ ಪರಮ ಸತ್ಯ ಎಂದು ಪೊಲೀಸರು ಕೂಡ ನಂಬಿದ್ದು ಪೊಲೀಸರ ಕಾರ್ಯಕ್ಷಮತೆಯ ಲೋಪವನ್ನು ಎತ್ತಿ ತೋರಿಸುತ್ತದೆ. ಂಧುವೊಬ್ಬರ ಅಂತ್ಯಕ್ರಿಯೆ ಭಾಗವಹಿಸಲು ಹೋಗಿದ್ದ ಸಚ್‌ದೇವ್ ಆಯಾಸದಿಂದಾಗಿ ವಿಮಾನದಲ್ಲಿ ಮುಂದಿನ ಸೀಟಿನ ಮೇಲೆ ಕಾಲಿಟ್ಟು ಮಲಗಿದ್ದರು. ಈ ಸಂದರ್ಭದಲ್ಲಿ ಅವರ ಕಾಲು ನಟಿಯ ಮೈಗೆ ತಾಗಿದೆ. ಇದಕ್ಕಾಗಿ ಅವರು ನಟಿಯ ಕ್ಷಮೆಯನ್ನೂ ಕೇಳಿದ್ದಾರೆ. ಇಲ್ಲಿಗೆ ಪ್ರಕರಣ ತಣ್ಣಗಾಗಿತ್ತು. ಇದು ಸಚ್‌ದೇವ್ ಮತ್ತು ಅವರ ಪತ್ನಿ ನೀಡಿರುವ ವಿವರಣೆ. ವಿಮಾನದ ಸಿಬ್ಬಂದಿಗಳು ಕೂಡ ಕಿರುಕುಳದ ಪ್ರಕರಣ ಸಂಭವಿಸಿದ್ದು ನಮ್ಮ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ.
ಪ್ರಾಥಮಿಕ ತನಿಖೆಯಲ್ಲೂ ಇದು ಸಾಬೀತಾಗಿದೆ. ಒಂದು ವೇಳೆ ಕಿರುಕುಳ ನೀಡಿದ್ದು ನಿಜವೇ ಆಗಿದ್ದರೆ ಝೈರಾ ತಕ್ಷಣವೇ ವಿಮಾನದ ಸಿಬ್ಬಂದಿಗಳಿಗೇಕೆ ತಿಳಿಸಲಿಲ್ಲ? ಕನಿಷ್ಟ ಅಕ್ಕಪಕ್ಕ ಕುಳಿತವರ ಗಮನಕ್ಕಾದರೂ ಏಕೆ ತರಲಿಲ್ಲ? ಕ್ಷಮೆ ಯಾಚನೆಯೊಂದಿಗೆ ತಣ್ಣಗಾಗಿದ್ದ ಘಟನೆಯನ್ನು ವಿಮಾನ ಇಳಿದ ಬಳಿಕ ಕೆದಕಿ ವಿವಾದ ಮಾಡಿದ್ದು ಏಕೆ? ಎಂಬೆಲ್ಲ ಪ್ರಶ್ನೆಗಳು ಸುಳಿದಾಡುತ್ತಿವೆ. ಭಾರತದಲ್ಲಿ ಸೆಲೆಬ್ರಿಟಿಗಳು ಏನು ಮಾಡಿದರೂ ಸುದ್ದಿಯಾಗುತ್ತದೆ. ಇಂತಹ ಸುದ್ದಿಯ ಹಸಿವು ಅವರನ್ನು ಸುಳ್ಳು ಆರೋಪ ಮಾಡಲು ಪ್ರೇರೇಪಿಸಿತೇ? ನಮ್ಮ ದೇಶದ ಕಾನೂನುಗಳು ಕೂಡ ಮಹಿಳಾ ಪಕ್ಷಪಾತಿ ಎನ್ನುವ ದೂರು ಇದೆ. ಝೈರಾ ಪ್ರಕರಣದಲ್ಲಿ ಇದು ನಿಜವಾಗಿದೆ. ಒಂದು ವೇಳೆ ಈ ದೂರು ನೀಡಿದ ವ್ಯಕ್ತಿ ಝೈರಾ ಅಲ್ಲದೆ ಯಾರೋ ಒಬ್ಬ ಸಾಮಾನ್ಯ ಮಹಿಳೆಯಾಗಿದ್ದರೆ ಪೊಲೀಸರು ಇಷ್ಟೇ ಚುರುಕಾಗಿ ಕಾರ್ಯಪ್ರವೃತ್ತರಾಗುತ್ತಿದ್ದರೆ? ಸಚ್‌ದೇವ್ ನಿರಪರಾಧಿ ಎಂದು ಸಾಬೀತಾದರೆ ಅವರಿಗಾಗಿರುವ ತೊಂದರೆಗೆ ಯಾರು ಹೊಣೆ? ಏನೇ ಆದರೂ ಸೆಲೆಬ್ರಿಟಿಗಳು ಇನ್ನೊಬ್ಬರ ವಿರುದ್ಧ ಆರೋಪ ಹೊರಿಸುವಾಗ ತುಸು ಎಚ್ಚರಿಕೆ ವಹಿಸಿಕೊಳ್ಳಬೇಕು.