Advertisement

ಸಿಟಿಯಲ್ಲೊಂದು ಸುತ್ತು

12:42 PM Jun 07, 2017 | Team Udayavani |

ಶ್ರೀನಗರ ಕಿಟ್ಟಿ ಅಭಿನಯದ “ಸಿಲಿಕಾನ್‌ ಸಿಟಿ’ ಬಿಡುಗಡೆಗೆ ಸಿದ್ಧವಿದೆ. ಈಗಾಗಲೇ ಚಿತ್ರ ಸೆನ್ಸಾರ್‌ ಆಗಿದ್ದು, ಇದೇ ತಿಂಗಳ 16ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದು ತಮಿಳಿನ “ಮೆಟ್ರೋ’ ಚಿತ್ರದ ರಿಮೇಕ್‌. ಹಾಗಂತ, ಯಥಾವತ್‌ ಅದೇ ರೂಪ ಇಲ್ಲಿ ಮೂಡಿ ಬಂದಿಲ್ಲ. ಕನ್ನಡಕ್ಕೆ ಏನೆಲ್ಲಾ ಬೇಕೋ ಅದನ್ನು ಅಳವಡಿಸಿಕೊಂಡೇ ಪ್ರೇಕ್ಷಕರ ಎದುರು ಬರಲು ತಯಾರಿ ಮಾಡಿಕೊಂಡಿದೆ ಚಿತ್ರತಂಡ. ಮುರಳಿ ಗುರಪ್ಪ ಈ ಚಿತ್ರದ ನಿರ್ದೇಶಕರು. ರವಿ ಗೆಳೆಯನ ನಿರ್ದೇಶನದ ಚಿತ್ರಕ್ಕೆ ನಿರ್ಮಾಣದಲ್ಲಿ ಸಾಥ್‌ ಕೊಟ್ಟಿದ್ದಾರೆ. ಚಿತ್ರ ಚೆನ್ನಾಗಿ ಮೂಡಿಬಂದಿರುವ ಖುಷಿಯಲ್ಲಿರುವ ಚಿತ್ರತಂಡದವರು, ಚಿತ್ರದ ಬಗ್ಗೆ ಮಾತನಾಡಿದ್ದಾರೆ.

Advertisement

ಶ್ರೀನಗರ ಕಿಟ್ಟಿ ಇದುವರೆಗೂ ಸುಮಾರು 40 ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರತಿ ಸಿನಿಮಾ ಬಿಡುಗಡೆಯಾದಾಗಲೂ ಭಯ ಸಹಜವಾಗಿಯೇ ಇರುತ್ತದಂತೆ. ಆದರೆ, “ಸಿಲಿಕಾನ್‌ ಸಿಟಿ’ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಅಷ್ಟೇನೂ ಭಯವಿಲ್ಲವಂತೆ. ಅದಕ್ಕೆ ಕಾರಣ ಚಿತ್ರ ಮೂಡಿಬಂದಿರುವ ರೀತಿ. “ಆರಂಭದಲ್ಲಿ ಏನು ಹೇಳಿದ್ದೆವೋ, ಚಿತ್ರ ಅದೇ ರೀತಿ ಮೂಡಿ ಬಂದಿದೆ. ಅದಕ್ಕೆ ಕಾರಣ ಎಲ್ಲವೂ ಅಚ್ಚುಕಟ್ಟಾಗಿದ್ದು. ಎಲ್ಲರ ಪ್ರಯತ್ನದಿಂದ ಚಿತ್ರ ಚೆನ್ನಾಗಿ ಬಂದಿದೆ.

ಅದೇ ಕಾರಣಕ್ಕೆ ಈ ಚಿತ್ರ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿ ಇಡೀ ಚಿತ್ರತಂಡವೇ ಇದೆ. ನಾನು ಇದುವರೆಗೂ 40 ಚಿತ್ರಗಳಲ್ಲಿ ನಟಿಸಿದ್ದೇನೆ. ಪ್ರತಿ ಚಿತ್ರ ಬಿಡುಗಡೆಯಾದಾಗಲೂ ಭಯ ಮತ್ತು ಆತಂಕ ಇದ್ದಿದ್ದೇ. ಆದರೆ, ಈ ಚಿತ್ರದ ಬಗ್ಗೆ ನಂಬಿಕೆ ಇದೆ. ನಮಗೆ ಎಷ್ಟೇ ನಂಬಿಕೆ ಇದ್ದರೂ, ಜನರ ತೀರ್ಪು ಮುಖ್ಯ. ಆದರೂ ಒಂದೊಳ್ಳೆಯ ಚಿತ್ರ ಮಾಡಿದ ಖುಷಿ ಇದೆ’ ಎನ್ನುತ್ತಾರೆ ಶ್ರೀನಗರ ಕಿಟ್ಟಿ. ನಿರ್ದೇಶಕ ಮುರಳಿ ಗುರಪ್ಪ ಅವರಿಗೆ ನಿರ್ದೇಶನ ಮಾಡುವುದು ಹಳೆಯ ಕನಸು. ಆ ಕನಸು ಈಗ ನನಸಾಗಿದೆ.

“ಇತ್ತೀಚೆಗೆ ಚಿತ್ರದ ಫೈನಲ್‌ ಪ್ರಿಂಟ್‌ ನೋಡಿದ್ದೇವೆ. ಚಿತ್ರ ನೋಡಿದ ಮೇಲೆ ವಿಶ್ವಾಸ ಜಾಸ್ತಿಯಾಗಿದೆ. ಕಾರಣ ಚಿತ್ರ ಅಂದೊRಂಡಂತೆ ಬಂದಿರುವುದು. ನಮಗೆ ತೃಪ್ತಿ ಸಿಕ್ಕಿರುವುದಷ್ಟೇ ಅಲ್ಲ, ಪ್ರೇಕ್ಷಕರಿಗೂ ತೃಪ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ. ಚಿತ್ರ ತಮಿಳಿನ “ಮೆಟ್ರೋ’ದ ರೀಮೇಕ್‌ ಆದರೂ, ಅದೇ ತರಹ ಮಾಡಿಲ್ಲ. ಆ ಎಳೆ ತೆಗೆದುಕೊಂಡು, ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದೇವೆ. ಫ್ಯಾಮಿಲಿ ವಿಷಯಗಳಿಗೆ ಜಾಸ್ತಿ ಮಹತ್ವ ನೀಡಿದ್ದೇವೆ.

ಮಧ್ಯಮ ವರ್ಗದವರಿಗೆ ಕನೆಕ್ಟ್ ಆಗುವ ಹಾಗೆ ಕಥೆ ಇದೆ. ಇದು ನನ್ನ ಕನಸಿನ ಚಿತ್ರ. ಎಲ್ಲಾ ಶಕ್ತಿ ಹಾಕಿ ಚಿತ್ರ ಮಾಡಿದ್ದೀನಿ. ಚಿತ್ರ ಮೂಡಿಬಂದಿರುವ ರೀತಿಗೆ ಖುಷಿಯಾಗಿದೆ. ಇನ್ನು ಜನರ ಸಹಕಾರ ಬೇಕು’ ಎನ್ನುತ್ತಾರೆ ಮುರಳಿ. ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿಗೆ ಕಾವ್ಯಾಶೆಟ್ಟಿ ಜೋಡಿಯಾಗಿದ್ದಾರೆ. ಈ ಚಿತ್ರದಲ್ಲಿ ಅವರು ಮಧ್ಯಮ ವರ್ಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. “ಮಿಡ್ಲ್ ಕ್ಲಾಸ್‌ ಹುಡುಗಿ ನಾನು. ನನ್ನ ಕುಟುಂಬ, ಕೆಲಸ, ಹುಡಗ ಅಂತ ಇರುವ ಮುದ್ದಾದ ರೋಲ್‌ ನನ್ನದು.

Advertisement

ಬಹಳ ಒಳ್ಳೆಯ ಪಾತ್ರ. ಜನ ಹೇಗೆ ಸ್ವೀಕರಿಸುತ್ತಾರೋ ಎಂಬ ಟೆನ್ಶನ್‌ ಇದೆ. ಜೊತೆಗೆ ಈ ಚಿತ್ರವನ್ನು ಚೆನ್ನಾಗಿ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ. ಈಗಾಗಲೇ ಟ್ರೇಲರ್‌ನ ಜನ ಮೆಚ್ಚಿಕೊಂಡಿರುವುದಷ್ಟೇ ಅಲ್ಲ, ಟ್ರೆಂಡಿಂಗ್‌ ಸಹ ಆಗಿದೆ. ಹಾಗಾಗಿ ವಿಶ್ವಾಸ ಜಾಸ್ತಿ ಇದೆ’ ಎನ್ನುತ್ತಾರೆ ಕಾವ್ಯ. “ಸಿಲಿಕಾನ್‌ ಸಿಟಿ’ ಚಿತ್ರವನ್ನು ರವಿ ಹಾಗೂ ಮಂಜುಳ ಸೋಮಶೇಖರ್‌ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಇನ್ನು ಇಷ್ಟು ವರ್ಷ ಸಂಕಲನಕಾರರಾಗಿ ದುಡಿದಿದ್ದ ಮುರಳಿ ಗುರಪ್ಪ ಅವರು ಚಿತ್ರವನ್ನು ನಿರ್ದೇಶಿಸಿದ್ದಾರೆ.

ಚಿತ್ರಕ್ಕೆ ಶ್ರೀನಿವಾಸ್‌ ರಾಮಯ್ಯ ಕ್ಯಾಮೆರಾ ಹಿಡಿದಿದ್ದಾರೆ. ಶ್ರೀಕಾಂತ್‌ ಸಂಕಲನವಿದೆ. ಚಿನ್ನ ಅವರು ಹಿನ್ನೆಲೆ ಸಂಗೀತ ನೀಡಿದರೆ, ಅನೂಪ್‌ ಸೀಳಿನ್‌ ಹಾಗೂ ಜೋಹಾನ್‌ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಐದು ಹಾಡುಗಳಿದ್ದು, ಅರಸು ಅಂತಾರೆ ಮತ್ತು ಮಮತಾ ಜಗನ್ಮೋಹನ್‌ ಗೀತೆಗಳನ್ನು ರಚಿಸಿದ್ದಾರೆ. ಈ ಚಿತ್ರದಲ್ಲಿ ಕಿಟ್ಟಿ ಮತ್ತು ಕಾವ್ಯ ಜೊತೆಗೆ ಸೂರಜ್‌ ಗೌಡ ಅವರಿಗೆ ಯಕ್ತಾ ರಾಥೋಡ್‌ ನಾಯಕಿಯಾಗಿದ್ದಾರೆ. ಇನ್ನುಳಿದಂತೆ ಅಶೋಕ್‌, ತುಳಸಿ ಶಿವಮಣಿ, ಚಿಕ್ಕಣ್ಣ, ಕಡ್ಡಿ ವಿಶ್ವ, ಗಿರಿ ಮುಂತಾದವರು ನಟಿಸಿದ್ದಾರೆ.

ಕೊಚ್ಚಿನ್‌, ಕಾಸರಗೋಡಿನಲ್ಲಿ ಬಿಡುಗಡೆ!
“ಸಿಲಿಕಾನ್‌ ಸಿಟಿ’ಯನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ. ಚಿತ್ರವನ್ನು ರಾಜ್ಯಾದ್ಯಂತ ಸುಮಾರು 200 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಇದಲ್ಲದೆ ಹೊರರಾಜ್ಯಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಯೋಚಿಸಿದ್ದು, ಈಗಾಗಲೇ ಕೊಚ್ಚಿನ್‌ ಮತ್ತು ಕಾಸರಗೋಡಿನಲ್ಲಿ ಚಿತ್ರ ಬಿಡುಗಡೆಯಾಗುವುದು ಕನ್ಫರ್ಮ್ ಆಗಿದೆ. ಚೆನ್ನೈ, ಮುಂಬೈನಲ್ಲಿ ಬಿಡುಗಡೆ ಮಾಡುವುದಕ್ಕೆ ಮಾತುಕತೆ ನಡೆಯುತ್ತಿದ್ದು, ಸದ್ಯದಲ್ಲೇ ಕನ್ಫರ್ಮ್ ಆಗಲಿದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next