ಕಾಬೂಲ್: ಶಾಲೆಗಳಲ್ಲಿ ವಿಷ ಸೇವಿಸಿದ ಸುಮಾರು 80 ಬಾಲಕಿಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಫ್ಘಾನಿಸ್ತಾನದ ಶಿಕ್ಷಣ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ವರದಿಗಳ ಪ್ರಕಾರ, ಉತ್ತರದ ಸರ್-ಎ-ಪುಲ್ ಪ್ರಾಂತ್ಯದಲ್ಲಿ ಶನಿವಾರ ಮತ್ತು ಭಾನುವಾರದಂದು ಘಟನೆಗಳು ಸಂಭವಿಸಿವೆ. ಪ್ರಾಂತೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಮೊಹಮ್ಮದ್ ರಹಮಾನಿ ಮಾತನಾಡಿ, ಸಂಚರಕ್ ಜಿಲ್ಲೆಯಲ್ಲಿ 1 ರಿಂದ 6 ನೇ ತರಗತಿಯ ವಿದ್ಯಾರ್ಥಿನಿಯರಲ್ಲಿ ವಿಷಪ್ರಾಶನ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ನಸ್ವಾನ್-ಎ-ಕಬೋದ್ ಆಬ್ ಶಾಲೆಯಲ್ಲಿ 60 ಮತ್ತು ನಸ್ವಾನ್-ಎ-ಫೈಜಾಬಾದ್ ಶಾಲೆಯಲ್ಲಿ 17 ಮಕ್ಕಳು ವಿಷ ಸೇವಿಸಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.ಎರಡೂ ಪ್ರಾಥಮಿಕ ಶಾಲೆಗಳು ಒಂದಕ್ಕೊಂದು ಹತ್ತಿರದಲ್ಲಿವೆ ಮತ್ತು ಒಂದರ ನಂತರ ಒಂದನ್ನು ಗುರಿಯಾಗಿಸಲಾಗಿದೆ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಾಲಕಿಯರ ದೇಹಕ್ಕೆ ಹೇಗೆ ವಿಷ ಸೇರಿತು ಎನ್ನುವುದರ ಕುರಿತು ತನಿಖೆ ನಡೆಯುತ್ತಿದೆ. ಹೆಣ್ಣುಮಕ್ಕಳ ಶಿಕ್ಷಣ ವಿರೋಧಿಸಿ ಕೃತ್ಯ ಎಸಗಲಾಗಿದೆ ಎಂದೂ ಹೇಳಲಾಗಿದೆ.