Advertisement
ಸೊಳ್ಳೆಗಳ ಜೀವನಚಕ್ರ
Related Articles
Advertisement
ಝೀಕಾ ವೈರಸ್
ಇತ್ತೀಚಿನ ದಿನಗಳಲ್ಲಿ ಮಲೇರಿಯಾ, ಫೈಲೇರಿಯಾ (ಆನೆ ಕಾಲು), ಜಪಾನೀಸ್ ಎನ್ಸೆಫಲೈಟಿಸ್ (ಮೆದುಳುಜ್ವರ), ಡೆಂಗ್ಯೂ ಜ್ವರ, ಚಿಕುನ್ ಗುನ್ಯಾ ಇವುಗಳ ಜತೆ ಸೊಳ್ಳೆಗಳಿಂದ ಝೀಕಾ ವೈರಸ್ ಎಂಬ ಕಾಯಿಲೆ ಹರಡುತ್ತಿದೆ. ಭಾರತದ ಕೆಲವು ರಾಜ್ಯಗಳಲ್ಲಿ ಈಗಾಗಲೇ ಈ ಕಾಯಿಲೆಗೆ ಜನರು ತುತ್ತಾಗುತ್ತಿದ್ದಾರೆ.
ಹರಡುವ ವಿಧಾನ
ಡೆಂಗ್ಯೂ, ಚಿಕುನ್ ಗುನ್ಯಾ ಜ್ವರವನ್ನು ಹರಡುವಂತಹ ಸೊಳ್ಳೆಗಳಾದ ಈಡೀಸ್ ಜಾತಿಯ ಹೆಣ್ಣು ಸೊಳ್ಳೆಗಳು ಕಚ್ಚುವುದರಿಂದ ಝಿಕಾ ವೈರಸ್ ಕಾಯಿಲೆಯು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.
ರೋಗ ಲಕ್ಷಣಗಳು
ತೀವ್ರ ಜ್ವರ, ಮೈಕೈ ನೋವು, ಕೀಲುಗಳಲ್ಲಿ ನೋವು, ದೇಹದ ಮೇಲೆ ಕೆಂಪು ರಕ್ತ ಮಿಶ್ರಿತ ಗುಳ್ಳೆಗಳು -ಇವು ಸೋಂಕುಪೀಡಿತರಲ್ಲಿ ಕಂಡುಬರುವ ರೋಗದ ಪ್ರಮುಖ ಲಕ್ಷಣವಾಗಿವೆ.
ಅಪಾಯಗಳು
ಗರ್ಭಿಣಿಯರು ಝೀಕಾ ವೈರಸ್ ಸೋಂಕಿಗೆ ಒಳಗಾಗಿದ್ದರೆ ಗರ್ಭಪಾತದ ಆತಂಕವಿದ್ದು, ತಾಯಿಯಿಂದ ಹುಟ್ಟಲಿರುವ ಮಗುವಿಗೂ ಸೋಂಕು ರವಾನೆಯಾದಲ್ಲಿ ಮಕ್ಕಳಲ್ಲಿ ಮೆದುಳಿನ ತೊಂದರೆಯಂತಹ ಅಪಾಯಕಾರಿ ಪರಿಣಾಮಗಳು ಕಂಡುಬರುವ ಸಾಧ್ಯತೆ ಇದೆ.
ಸದ್ಯಕ್ಕೆ ಈ ರೋಗಕ್ಕೆ ಯಾವುದೇ ನಿರ್ದಿಷ್ಟ ಔಷಧ ಅಥವಾ ಲಸಿಕೆ ಇರುವುದಿಲ್ಲ. ರೋಗದ ಲಕ್ಷಣಗಳಿಗನುಸಾರವಾಗಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯುವುದರೊಂದಿಗೆ ಮನೆಯ ಸುತ್ತಮುತ್ತ ಸೊಳ್ಳೆಗಳು ಉತ್ಪತ್ತಿಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಸೊಳ್ಳೆ ಉತ್ಪತ್ತಿಯನ್ನು ಹಾಗೂ ಅವುಗಳಿಂದ ಹರಡುವ ಖಾಯಿಲೆಗಳನ್ನು ತಡೆಗಟ್ಟುವ ವಿಧಾನ
ಪರಿಸರ-ನೈರ್ಮಲ್ಯ ರಕ್ಷಣೆಗೆ ಹೆಚ್ಚು ಗಮನ ನೀಡುವುದು.
ಸಾಮಾನ್ಯವಾಗಿ ಪ್ರಾರಂಭಿಕ ಹಂತದಲ್ಲಿ ಎಲ್ಲ ರೀತಿಯ ಸೋಂಕುಗಳಿಗೂ ಜ್ವರದ ಲಕ್ಷಣವೇ ಪ್ರಧಾನವಾಗಿದ್ದು, ಅದರೊಂದಿಗೆ ಬೇರೆ ಯಾವುದೇ ಇತರ ರೋಗ ಲಕ್ಷಣಗಳು ಕಂಡು ಬಂದಲ್ಲಿ ತಡಮಾಡದೇ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ತೆರಳಿ ರಕ್ತಲೇಪನ ಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆ ಪಡೆಯುವುದು.
ಎಲ್ಲ ನೀರಿನ ತೊಟ್ಟಿಗಳು, ಡ್ರಂ, ಬ್ಯಾರೆಲ್‌ಗಳು, ಏರ್‌ಕೂಲರ್ ಇತ್ಯಾದಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವತ್ಛಪಡಿಸಿ, ಮತ್ತೆ ಭರ್ತಿ ಮಾಡಿಕೊಳ್ಳುವುದು/ಮುಚ್ಚಳಗಳಿಂದ ಮುಚ್ಚುವುದು.
ಬಯಲಿನಲ್ಲಿರುವ ತ್ಯಾಜ್ಯವಸ್ತುಗಳಾದ ಟೈರು, ಎಳೆನೀರಿನ ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸುವುದು ಅಥವಾ ಸೂಕ್ತ ವಿಲೇವಾರಿ ಮಾಡುವುದು, ನಿಂತ ನೀರಿಗೆ ಉಪಯೋಗಕ್ಕೆ ಬಾರದ ಎಣ್ಣೆಗಳನ್ನು ಸಿಂಪಡಿಸುವುದು. ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡ ಸೊಳ್ಳೆ ನಿಯಂತ್ರಣ ಕ್ರಮಗಳಿಗೆ ಸಹಕಾರ ನೀಡುವುದು.
ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿಯಂತ್ರಣ ಜಾಲರಿಗಳನ್ನು ಅಳವಡಿಸಬೇಕು, ಸ್ವಯಂರಕ್ಷಣ ವಿಧಾನಗಳಾದ ಸೊಳ್ಳೆ ನಿರೋಧಕಗಳನ್ನು ಹಾಗೂ ಮಲಗುವಾಗ ಸೊಳ್ಳೆ ಪರದೆಯನ್ನು ಬಳಸುವುದು. ಯಾವಾಗಲೂ ಮೈ ತುಂಬಾ ಬಟ್ಟೆ ಧರಿಸಬೇಕು. ಸೊಳ್ಳೆಗಳ ಕಚ್ಚುವಿಕೆಯಿಂದ ರಕ್ಷಣೆ ಪಡೆಯುವುದು.
ಸೊಳ್ಳೆಗಳ ನಿಯಂತ್ರಣಕ್ಕೆ ಸಂಜೆ ವೇಳೆ (ಸೂರ್ಯಾಸ್ತಮಾನದ ವೇಳೆಯಲ್ಲಿ) ಕೀಟನಾಶಕ ಧೂಮೀಕರಣ ಕಾರ್ಯವನ್ನು ಮನೆಗಳ ಸುತ್ತಮುತ್ತಲಿನ ಬೇಲಿ, ಗಿಡಗಳು ಮತ್ತು ಪೊದೆಗಳಲ್ಲಿ ಕೈಗೊಳ್ಳುವುದರಿಂದ ಸೊಳ್ಳೆಗಳ ಸಾಂದ್ರತೆಯನ್ನು ಸಾಕಷ್ಟು ಮಟ್ಟಿಗೆ ಹತೋಟಿಯಲ್ಲಿಡಬಹುದು.
ಗದ್ದೆ ಬಯಲು ಮುಂತಾದ ಪ್ರದೇಶದಲ್ಲಿ ನೀರು ನಿಲ್ಲಲು ಬಿಡದೆ ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ಮಾಡುವುದು.
ಉಪಯೋಗಿಸದ ಬಾವಿ, ಕೆರೆಗಳಲ್ಲಿ ಇರುವ ನೀರಿಗೆ ಸೊಳ್ಳೆ ನಿವಾರಕ ಲಾರ್ವಾಹಾರಿ ಮೀನುಗಳನ್ನು ಬಿಡುವುದು.
ಮೆದುಳು ಜ್ವರ ಹರಡುವುದನ್ನು ತಡೆಯುವ ಸಲುವಾಗಿ ಹಂದಿಗಳನ್ನು ಜನರ ವಾಸಸ್ಥಳದಿಂದ ದೂರಕ್ಕೆ ಸ್ಥಳಾಂತರಿಸುವುದು, ಹಂದಿ ಮತ್ತು ಜಾನುವಾರು ಕೊಟ್ಟಿಗೆಗಳಿಗೆ ಕೀಟನಾಶಕ ಸಿಂಪಡಿಸುವುದು, ಹಂದಿಗೂಡುಗಳಿಗೆ ಸೊಳ್ಳೆ ನಿರೋಧಕ ಜಾಲರಿಗಳನ್ನು ಅಳವಡಿಸುವುದು, ಮಕ್ಕಳನ್ನು ಜಾನುವಾರುಗಳ ಸಂಪರ್ಕಕ್ಕೆ ಹತ್ತಿರವಾಗಿ ಮಲಗಿಸುವುದನ್ನು ತಪ್ಪಿಸುವುದು.
ಡಾ| ಈಶ್ವರಿ ಕೆ.
ಸಹಾಯಕ ಪ್ರಾಧ್ಯಾಪಕರು,
ರಾಘವೇಂದ್ರ ಭಟ್ ಎಂ.
ಆರೋಗ್ಯ ಸಹಾಯಕರು, ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ. ಮಣಿಪಾಲ