Advertisement

ಆರೋಗ್ಯ ಕರ್ನಾಟಕ’ಯೋಜನೆಗೆ ಚಾಲನೆ

06:10 AM Mar 03, 2018 | Team Udayavani |

ಬೆಂಗಳೂರು: ಶ್ರೀಮಂತರಿಗೆ ಸಿಗುವ ಗುಣಮಟ್ಟದ ಆರೋಗ್ಯ ಸೇವೆ ಬಡವರಿಗೂ ಸಿಗಬೇಕೆಂಬ ಆಶಯದೊಂದಿಗೆ “ಆರೋಗ್ಯ ಕರ್ನಾಟಕ’ ಯೋಜನೆ ಜಾರಿಗೊಳಿಸಲಾಗಿದ್ದು, ಈ ಕ್ರಾಂತಿಕಾರಿ ಯೋಜನೆ ರಾಜ್ಯದಲ್ಲೇ ಹೊಸ ಮೈಲಿಗಲ್ಲು ಎಂದರೆ
ಅತಿಶಯೋಕ್ತಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ “ಆರೋಗ್ಯ ಕರ್ನಾಟಕ’ ಯೋಜನೆಗೆ ನಗರದ ಮಿಲ್ಲರ್ ರಸ್ತೆಯಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಶುಕ್ರವಾರ ಚಾಲನೆ ನೀಡಿದ ಅವರು ತಿ.ನರಸೀಪುರದ 5 ಮಂದಿಗೆ ಸಾಂಕೇತಿಕವಾಗಿ ಆರೋಗ್ಯ ಕಾರ್ಡ್‌ ವಿತರಿಸಿ ಮಾತನಾಡಿದರು. 

ರಾಜ್ಯದಲ್ಲಿ 1.43 ಕೋಟಿ ಕುಟುಂಬಗಳಿದ್ದು, ಇದರಲ್ಲಿ ಬಡವರು, ಕೆಳ ಮಧ್ಯಮ ವರ್ಗದವರು, ಮಧ್ಯಮ ವರ್ಗದವರಿಗೆ ಯೋಜನೆಯಡಿ ಸೌಲಭ್ಯ ಸಿಗಲಿದೆ ಎಂದು ತಿಳಿಸಿದರು.

ದೇಶದಲ್ಲಿ ಯಾವ ರಾಜ್ಯವೂ ಇಂತಹ ಯೋಜನೆ ಜಾರಿಗೊಳಿಸಿಲ್ಲ. ಸಾರ್ವತ್ರಿಕ ಆರೋಗ್ಯ ಸೇವೆ ಜಾರಿಗೊಳಿಸಿರುವುದರಲ್ಲಿ ರಾಜ್ಯ ಸರ್ಕಾರವೇ ಪ್ರಥಮ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸಿಗಲಿದ್ದು, ಒಂದೊಮ್ಮೆ ಸರ್ಕಾರಿ ಆಸ್ಪತ್ರೆಯಲ್ಲಿ ಆಯ್ದ ಚಿಕಿತ್ಸೆ ಲಭ್ಯವಿಲ್ಲದಿದ್ದರೆ ಆಗ ಸರ್ಕಾರವೇ ಗುರುತಿಸಿರುವ ಖಾಸಗಿ ಆಸ್ಪತ್ರೆಗಳಲ್ಲಿ ಬಿಪಿಎಲ್‌ ಕುಟುಂಬದವರು ಚಿಕಿತ್ಸೆ ಪಡೆಯಬಹುದು. ಆ ವೆಚ್ಚವನ್ನು ಸರ್ಕಾರ ಭರಿಸಲಿದೆ. ಇದೇ ರೀತಿ ಎಪಿಎಲ್‌ ಕುಟುಂಬದವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಶೇ.30ರಷ್ಟು ಮೊತ್ತವನ್ನು ಸರ್ಕಾರ ಭರಿಸಲಿದ್ದು, ಉಳಿದ ಮೊತ್ತವನ್ನು ಕುಟುಂಬದವರೇ ಭರಿಸಬೇಕು ಎಂದು ಹೇಳಿದರು.

ಸೋಮವಾರದಿಂದ ಕಾರ್ಡ್‌ ವಿತರಣೆ: ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌, ರಾಜ್ಯ ಸರ್ಕಾರ ಆರೋಗ್ಯ
ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ವೆಚ್ಚ ಮಾಡುತ್ತಿದ್ದರೂ ಸಾಮಾನ್ಯ ಜನರಿಗೆ ಪರಿಣಾಮಕಾರಿಯಾಗಿ ಆರೋಗ್ಯ ಸೇವೆ ಸಿಗುತ್ತಿಲ್ಲ. ಹೀಗಾಗಿ, ಯೋಜನೆ ಜಾರಿಗೊಳಿಸಲಾಗಿದ್ದು, ಸೋಮವಾರದಿಂದ ಆರೋಗ್ಯ ಕಾರ್ಡ್‌ ವಿತರಣೆ ಆರಂಭವಾಗಲಿದೆ. ತಾಲೂಕು ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್‌, ಜಿಲ್ಲಾಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್‌, ಎಂಆರ್‌ಐ ಸ್ಕ್ಯಾನ್‌ ಹಾಗೂ ಪ್ಲೇಟ್‌ಲೆಟ್‌ ಘಟಕ ಪೂರ್ಣ ಪ್ರಮಾಣದಲ್ಲಿ ಒಂದೂವರೆ ತಿಂಗಳಲ್ಲಿ ಎಲ್ಲೆಡೆ ಸಿಗಲಿದೆ ಎಂದರು.

Advertisement

ನಮ್ಮದು ಆಶ್ಯುರೆನ್ಸ್‌ ಸೇವೆ: ಕೇಂದ್ರ ಸರ್ಕಾರ ಇನ್‌ ಶ್ಯುರೆನ್ಸ್‌ ಆಧಾರಿತ ಆರೋಗ್ಯ ಸೇವೆ ಘೋಷಿಸಿದ್ದರೆ ನಮ್ಮ ಸರ್ಕಾರ ಅಶ್ಯುರೆನ್ಸ್‌ ಆರೋಗ್ಯ ಸೇವೆ ನೀಡಲು ಮುಂದಾಗಿದೆ. ನಮ್ಮ ಸರ್ಕಾರಕ್ಕೆ ಯಾವುದೇ ಕಂಪೆನಿಗಳ ಹಂಗಿಲ್ಲ. ನಮಗಿರುವುದು ಜನರ ಹಂಗು ಮಾತ್ರ ಎಂದು ಹೇಳಿದರು.

ಸಚಿವರಾದ ಡಾ.ಶರಣ ಪ್ರಕಾಶ್‌ ಪಾಟೀಲ್‌, ಆರ್‌.ರೋಷನ್‌ ಬೇಗ್‌, ಮೇಯರ್‌ ಆರ್‌.ಸಂಪತ್‌ರಾಜ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಉಮೇಶ್‌ ಜಿ. ಜಾಧವ್‌,ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್‌ ಸೇs…, ಆಯುಕ್ತ ಡಾ.ರತನ್‌ ಕೇಲ್ಕರ್‌, ವೈದ್ಯಕೀಯ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಮಂಜುಳಾ ಇತರರು ಉಪಸ್ಥಿತರಿದ್ದರು.

ರಮೇಶ್‌ ಕುಮಾರ್‌ ಭಾವಜೀವಿ!
ದೇಶದಲ್ಲೇ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳು ರಾಜ್ಯದಲ್ಲಿದ್ದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ
ತೀವ್ರವಾಗಿದೆ. ಎಷ್ಟೇ ವೇತನ ನೀಡಿದರೂ, ಹರಾಜು ವ್ಯವಸ್ಥೆ ತಂದರೂ ಅಗತ್ಯ ಪ್ರಮಾಣದ ವೈದ್ಯರು ಸಿಗಲಿಲ್ಲ.

ವೈದ್ಯಕೀಯ ಕ್ಷೇತ್ರ ವ್ಯಾಪಾರಿ ಕ್ಷೇತ್ರವಾಗಬಾರದು ಎಂದ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ಭಾವುಕರಾದರು.ಈ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಮೇಶ್‌ ಕುಮಾರ್‌ ಭಾವಜೀವಿ. ಚಿಕಿತ್ಸೆಗಾಗಿ ಬಡ ಜನರು ಅನುಭವಿಸುವ ತೊಂದರೆ ನೋಡಿ ನೊಂದುಕೊಂಡಿದ್ದರು. ಈ ಯೋಜನೆ ಅವರ ಕನಸಿನ ಕೂಸು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next