ಹೊಸದಿಲ್ಲಿ : ‘ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಯಾಗಿರುವುದರಿಂದ ಉಗ್ರ ನಿಗ್ರಹ ಕಾರ್ಯಾಚರಣೆಗೆ ಯಾವುದೇ ಬಾಧೆ ಇಲ್ಲ ಮತ್ತು ಸೇನಾ ಕಾರ್ಯಾಚರಣೆಯಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಇಲ್ಲ’ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ಸಿಂಗ್ ರಾವತ್ ಇಂದು ಬುಧವಾರ ಹೇಳಿದ್ದಾರೆ.
“ಪವಿತ್ರ ರಮ್ಜಾನ್ ಮಾಸದಲ್ಲಿ ಮಾತ್ರವೇ ನಾವು ನಮ್ಮ ಕಾರ್ಯಾಚರಣೆಯನ್ನು ನಿಲ್ಲಿಸಿದ್ದೆವು; ಆದರೆ ಅದರಿಂದ ಏನಾಯಿತು ಎಂಬುದನ್ನು ಕಂಡೆವು. ರಾಜ್ಯದಲ್ಲೀಗ ರಾಜ್ಯಪಾಲರ ಆಳ್ವಿಕೆ ಜಾರಿಯಾಗಿದೆ. ಆದರೆ ಇದರಿಂದ ಸೇನಾ ಕಾರ್ಯಾಚರಣೆಗೆ ಯಾವುದೇ ಬಾಧೆ ಇಲ್ಲ; ನಮ್ಮ ಕಾರ್ಯಾಚರಣೆ ಹಿಂದಿನಂತೆಯೇ ಮುಂದುವರಿಯಲಿದೆ; ಹಾಗೆಯೇ ಯಾವುದೇ ರೀತಿಯ ರಾಜಕೀಯ ಹಸ್ತಕ್ಷೇಪವೂ ಇರುವುದಿಲ್ಲ” ಎಂದು ರಾವತ್ ಹೊಸದಿಲ್ಲಿಯಲ್ಲಿನ ಕಾರ್ಯಕ್ರಮವೊಂದರಲ್ಲಿ ಹೇಳಿದರು.
ಇದಕ್ಕೆ ಮೊದಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜಮ್ಮು ಕಾಶ್ಮೀರದಲ್ಲಿ ಮುಂದಿನ ಆರು ತಿಂಗಳ ಅವಧಿಗೆ ತತ್‌ಕ್ಷಣದಿಂದ ಜಾರಿಯಾಗುವಂತೆ ರಾಜ್ಯಪಾಲರ ಆಳ್ವಿಕೆಗೆ ಅನುಮತಿ ನೀಡಿದರು.
ಭಾರತೀಯ ಜನತಾ ಪಕ್ಷ ಜಮ್ಮು ಕಾಶ್ಮೀರದಲ್ಲಿನ ಪಿಡಿಪಿ ಮೈತ್ರಿಕೂಟದ ಸರಕಾರದಿಂದ ಹೊರಬಂದ ಕೇವಲ 24 ತಾಸುಗಳ ಒಳಗೆ ಈ ಬೆಳವಣಿಗೆಗಳು ಕಂಡು ಬಂದಿವೆ.
ರಮ್ಜಾನ್ ಮಾಸ ಮುಗಿದ ಬೆನ್ನಿಗೇ ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ಪುನರಾರಂಭಿಸುವ ನಿರ್ಧಾರವನ್ನು ಕೇಂದ್ರ ಸರಕಾರ ಕೈಗೊಂಡದ್ದೇ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಪರಿಣಾಮವಾಗಿ ಪಿಡಿಪಿ – ಬಿಜೆಪಿ ಮೈತ್ರಿ ಕೂಟ ಸರಕಾರದಲ್ಲಿ ಒಡಕು ಉಂಟಾಗಿತ್ತು.