ಶ್ರೀನಗರ: ಗಡಿ ಭದ್ರತಾ ಪಡೆ ಸಿಬ್ಬಂದಿಯಿದ್ದ ಕ್ಯಾಂಪ್ ಗೆ ತೆರಳುತ್ತಿದ್ದ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಉತ್ತರ ಕಾಶ್ಮೀರದ ಗುರೇಜ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ ಬಳಿ ಪತನಗೊಂಡಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಬಿಎಸ್ಎಫ್ ಸಿಬ್ಬಂದಿಯನ್ನು ಕರೆತರಲು ಈ ಹೆಲಿಕಾಪ್ಟರ್ ಹೋಗುತ್ತಿತ್ತು ಎಂದು ವರದಿ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೇಜ್ ಸೆಕ್ಟರ್‌ನ ಗುಜ್ರಾನ್ ನಾಲಾ ಬಳಿ ಹೆಲಿಕಾಪ್ಟರ್ ಅಪಘಾತ ಸಂಭವಿಸಿದೆ. ಇದು ಗಡಿ ನಿಯಂತ್ರಣ ರೇಖೆಗೆ (ಲೈನ್ ಆಫ್ ಕಂಟ್ರೋಲ್) ಅತ್ಯಂತ ಸಮೀಪದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಸೋತ ಸಿಎಂ ಧಾಮಿಯನ್ನು ಧೋನಿಗೆ ಹೋಲಿಸಿದ ರಾಜನಾಥ್ ಸಿಂಗ್!
ಹೆಲಿಕಾಪ್ಟರ್ ಪತನಕ್ಕೆ ನಿಖರ ಕಾರಣ ಇದುವರೆಗೂ ಪತ್ತೆಯಾಗಿಲ್ಲ. ಹೆಲಿಕಾಪ್ಟರ್ ನಲ್ಲಿ ಪೈಲಟ್ ಮತ್ತು ಸಹಾಯಕ ಪೈಲಟ್ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಲಿಕಾಪ್ಟರ್ ಪತನವಾದ ಜಾಗ ಸಂಪೂರ್ಣವಾಗಿ ಹಿಮಚ್ಛಾದಿತವಾಗಿದೆ ಎಂದು ಹೇಳಲಾಗಿದೆ.
ರಕ್ಷಣಾ ಕಾರ್ಯಾಚರಣೆಗೆ ತಂಡಗಳನ್ನು ಕಾಲ್ನಡಿಗೆಯಲ್ಲಿ ಕಳುಹಿಸಲಾಗಿದೆ. ಆದರೆ ವಾಯು ವಿಚಕ್ಷಣ ತಂಡಗಳು ಬದುಕುಳಿದವರನ್ನು ಹುಡುಕುತ್ತಿವೆ ಎಂದು ವರದಿ ತಿಳಿಸಿದೆ.