Advertisement

ಅರಕಲಗೂಡು: ಆಕಾಂಕ್ಷಿಗಳ ನೆಮ್ಮದಿಗೆ ರಾಮಸ್ವಾಮಿ ಸವಾಲು

12:42 AM Mar 09, 2023 | Team Udayavani |

ಹಾಸನ: ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಸಾಂಪ್ರದಾಯಿಕ ರಾಜಕೀಯ ಶತ್ರುಗಳ ಪಕ್ಷಾಂತರದಿಂದ ಕಾಂಗ್ರೆಸ್‌ ಮತ್ತು ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು ಆತಂಕದಲ್ಲಿದ್ದಾರೆ. ಮಾಜಿ ಸಚಿವ ಎ.ಮಂಜು ಜೆಡಿಎಸ್‌ ಸೇರುವ, ಶಾಸಕ ಎ.ಟಿ.ರಾಮಸ್ವಾಮಿ ಅವರು ಜೆಡಿಎಸ್‌ ತ್ಯಜಿಸುವ ನಿರ್ಧಾರ ಪ್ರಕಟಿಸಿದ ಅನಂತರ ಆ ಕ್ಷೇತ್ರದ ಕಾಂಗ್ರೆಸ್‌ ಮತ್ತು ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು ನೆಮ್ಮದಿ ಕೆಡಿಸಿಕೊಂಡು ಓಡಾಡುವಂತಾಗಿದೆ.

Advertisement

ಎಂ.ಟಿ.ಕೃಷ್ಣೇಗೌಡ ಮತ್ತು ಶ್ರೀಧರ ಗೌಡ ಅವರು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಎಂ.ಟಿ.ಕೃಷ್ಣೇಗೌಡ ಅವರು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮೂಲಕ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದು, ಟಿಕೆಟ್‌ ಖಚಿತ ಎಂದು ನಂಬಿಕೊಂಡು ಕ್ಷೇತ್ರದಲ್ಲಿ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದರು. ಶ್ರೀಧರಗೌಡ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಭರವಸೆ ನಂಬಿ ಚುನಾವಣೆಗೆ ಸಿದ್ಧತೆ ಮಾಡಿ ಕೊಳ್ಳುತ್ತಿದ್ದರು. ಆದರೆ ಈಗ ಜೆಡಿಎಸ್‌ನಿಂದ ಹೊರ ಬೀಳು ತ್ತಿರುವ ಎ.ಟಿ.ರಾಮಸ್ವಾಮಿ ಅವರು ಕಾಂಗ್ರೆಸ್‌ ಸೇರುವರು, ಅವರೇ 2023ರ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿ ಆಗುವರು ಎಂಬ ಸುದ್ದಿ ಹರಡಿದೆ. ಈ ಬೆಳವಣಿಗೆ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಾಗಿರುವ ಎಂ.ಟಿ.ಕೃಷ್ಣೇಗೌಡ ಮತ್ತು ಶ್ರೀಧರ ಗೌಡ ಅವರ ನಿದ್ದೆ ಕೆಡಿಸಿದೆ.

ಎ.ಟಿ.ರಾಮಸ್ವಾಮಿ ಅವರು ಕಾಂಗ್ರೆಸ್‌ ಸೇರ್ಪಡೆಗೆ ವಿರೋಧವಿಲ್ಲ. ಅವರು ಕಾಂಗ್ರೆಸ್‌ ಸೇರಿದರೂ ಈ ಬಾರಿಯ ವಿಧಾನಸಭಾ ಚುನಾವಣೆಯಿಂದ ದೂರವುಳಿದು ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗುವರು. ವಿಧಾನಸಭಾ ಚುನಾವಣೆಯ ಟಿಕೆಟ್‌ ಕೇಳಬಾರದು ಎಂಬ ಷರತ್ತು ಒಡ್ಡಿಯೇ ರಾಜ್ಯ ಕಾಂಗ್ರೆಸ್‌ ಮುಖಂಡರು ಎ.ಟಿ.ರಾಮಸ್ವಾಮಿ ಅವರಿಗೆ ಕಾಂಗ್ರೆಸ್‌ಗೆ ಸ್ವಾಗತ ನೀಡಲು ಚಿಂತಿಸಿದ್ದಾರೆ ಎಂದು ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಚರ್ಚೆ ನಡೆದಿತ್ತು. ಹಾಗಾಗಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಕೃಷ್ಣೇಗೌಡ ಮತ್ತು ಶ್ರೀಧರಗೌಡ ಅವರು ತಾವು ನಂಬಿರುವ ಕಾಂಗ್ರೆಸ್‌ ನಾಯಕರ ಮೂಲಕ ಟಿಕೆಟ್‌ ಖಾತರಿಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದರು. ಆದರೆ ರಾಮಸ್ವಾಮಿ ಅವರು ಈ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಯಾವ ಪಕ್ಷದಿಂದ ಎಂಬುದನ್ನು ತಮ್ಮ ಬೆಂಬಲಿಗರ ಅಭಿಪ್ರಾಯ ಪಡೆದು ಪ್ರಕಟಿಸುವೆ ಎಂದು ಸ್ಪಷ್ಟಪಡಿಸಿ ಕಾಂಗ್ರೆಸ್‌ ಸೇರುವ ಪ್ರಯತ್ನವನ್ನೂ ನಡೆಸಿದ್ದಾರೆ.

ಎಂ.ಟಿ.ಕೃಷ್ಣೇಗೌಡ ಮತ್ತು ಅವರ ಕುಟುಂಬದವರು ಎ.ಟಿ. ರಾಮಸ್ವಾಮಿ ಅವರ ಬೆಂಬಲಿಗರಾಗಿದ್ದರು. ರಾಮಸ್ವಾಮಿ ಅವರು ಕಾಂಗ್ರೆಸ್‌ನಲ್ಲಿದ್ದಾಗ, ಪಕ್ಷ ತೊರೆದು ಜೆಡಿಎಸ್‌ ಸೇರಿದಾಗಲೂ ರಾಮಸ್ವಾಮಿ ಅವ‌ರನ್ನೇ ಹಿಂಬಾಲಿಸಿಕೊಂಡು ರಾಮಸ್ವಾಮಿ ಅವರ ಎಲ್ಲ ಚುನಾವಣೆಗಳಲ್ಲೂ ನೆರವಾಗುತ್ತಾ ಬಂದಿದ್ದವರು. ಇನ್ನು ರಾಮಸ್ವಾಮಿ ಅವರ ಜತೆಯಲ್ಲಿದ್ದರೆ ರಾಜಕೀಯವಾಗಿ ನಾವು ಬೆಳೆ ಯುವುದೇ ಇಲ್ಲವೆಂಬುದನ್ನು ಕಳೆದ ವಿಧಾನಸಭಾ ಚುನಾ ವಣೆಯ ಸಂದರ್ಭದಲ್ಲಿಯೇ ಖಚಿಪಡಿಸಿಕೊಂಡು ರಾಮ ಸ್ವಾಮಿ ಅವರಿಂದ ದೂರವಾಗತೊಡಗಿದ್ದ‌ರು. ಕಳೆದೆರಡು ವರ್ಷಗಳಿಂದ ರಾಮಸ್ವಾಮಿ ಅವರಿಂದ ದೂರವಾಗಿ ಕಾಂಗ್ರೆಸ್‌ನಲ್ಲಿ ರಾಜಕೀಯ ಭವಿಷ್ಯ ಕಂಡುಕೊಳ್ಳಲು ನಿರ್ಧರಿಸಿದ್ದರು. ಇದೀಗ ರಾಮಸ್ವಾಮಿ ಅವರೂ ಕಾಂಗ್ರೆಸ್‌ಗೆ ಪ್ರವೇಶ ಪಡೆದರೆ ಕೃಷ್ಣೇಗೌಡ ಅವರ ಕಾಂಗ್ರೆಸ್‌ ಅಭ್ಯರ್ಥಿಯಾಗುವುದು ಮರೀಚಿಕೆಯಾಗುವುದೇ ಎಂಬ ಚಿಂತೆ ಅವರ ಕುಟುಂಬ ದವರನ್ನು ಕಾಡಿದೆ.

ಶ್ರೀಧರಗೌಡ ಅವರು ಪೊಲೀಸ್‌ ಅಧಿಕಾರಿಯಾಗಿದ್ದವರು. ಹತ್ತು ವರ್ಷಗಳಿಗೂ ಹೆಚ್ಚು ಸೇವಾವಧಿ ಇದ್ದರೂ ವಿಧಾನಸಭಾ ಚುನಾವಣೆಗೆ ಸ್ಪರ್ಧೆಗಾಗಿಯೇ ನಿವೃತ್ತಿ ಪಡೆದು ಬಂದಿದ್ದಾರೆ. ಆದರೆ ಈಗ ಎ.ಟಿ.ರಾಮಸ್ವಾಮಿ ಅವರು ಕಾಂಗ್ರೆಸ್‌ಗೆ ಬಂದರೆ ಅವರಿಗೂ ಭ್ರಮನಿರಸನವಾಗಬಹುದು.

Advertisement

ಯೋಗ ರಮೇಶ್‌ಗೂ ಆತಂಕ
ಬಿಜೆಪಿ ಸ್ಪರ್ಧಾಕಾಂಕ್ಷಿ ಯೋಗರಮೇಶ್‌ ಅವರನ್ನೂ ಆತಂಕ ಕಾಡುತ್ತಿದೆ. ಕಾಂಗ್ರೆಸ್‌ನಲ್ಲಿ ಎ.ಟಿ.ರಾಮಸ್ವಾಮಿ ಅವರಿಗೆ ಟಿಕೆಟ್‌ ದೊರೆಯದಿದ್ದರೆ ಅವರು ಬಿಜೆಪಿಗೆ ಸೇರ್ಪಡೆಯಾಗಿ ಅರಕಲಗೂಡು ಕ್ಷೇತ್ರದಿಂದಲೇ ಸ್ಪರ್ಧೆಗಿಳಿಯುವರು ಎಂಬ ಸುದ್ದಿಯೂ ಇದೆ. ಹಾಗಾಗಿ ಯೋಗ ರಮೇಶ್‌ ಅವರೂ ಈಗ ನೆಮ್ಮದಿ ಕೆಡಿಸಿಕೊಂಡಿದ್ದಾರೆ. ಬಿಜೆಪಿಯಲ್ಲಿದ್ದ ಎ.ಮಂಜು ಅವರು ಜೆಡಿಎಸ್‌ನತ್ತ ಮುಖಮಾಡಿ ಜೆಡಿಎಸ್‌ ಟಿಕೆಟ್‌ ಖಚಿತಪಡಿಸಿಕೊಂಡು ಚುನಾವಣೆ ಸಿದ್ಧತೆಯಲ್ಲಿದ್ದಾರೆ. ಇನ್ನು ನನಗೆ ಯಾರ ಕಾಟವೂ ಇಲ್ಲ. ಬಿಜೆಪಿ ಟಿಕೆಟ್‌ ನನಗೇ ಖಚಿತ ಎಂಬ ನಂಬಿಕೆಯಲ್ಲಿರುವಾಗ ಎ.ಟಿ.ರಾಮಸ್ವಾಮಿ ಅವರು ಬಿಜೆಪಿ ಪ್ರವೇಶಿಸಿದರೆ ನಾನು ಬಿಜೆಪಿ ಟಿಕೆಟ್‌ ವಂಚಿತನಾಗಬಹುದು ಎಂಬ ಚಿಂತೆ ಯೋಗರಮೇಶ್‌ ಅವರನ್ನು ಕಾಡುತ್ತಿದೆ.

-ಎನ್‌. ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next