ಸಕಲೇಶಪುರ: ಕಾಡಾನೆ ಸೆರೆ ಹಿಡಿಯುವಾಗ ಕಾದಾಟದಲ್ಲಿ ಮರಣ ಹೊಂದಿದ ಅರ್ಜುನ ಸಾಕಾನೆಗೆ ಗುಂಡೇಟು ಬಿದ್ದಿಲ್ಲ. ನಮ್ಮ ಕಾರ್ಯಾಚರಣೆ ತಂಡದ ಯಾರಲ್ಲೂ ಬಂದೂಕು ಇರಲಿಲ್ಲ. ಕಾರ್ಯಾಚರಣೆ ವೇಳೆ ಯಾವುದೇ ಲೋಪ ಆಗಿಲ್ಲ ಎಂದು ವನ್ಯಜೀವಿ ತಜ್ಞ ಡಾ| ರಮೇಶ್ ಸ್ಪಷ್ಟಪಡಿಸಿದರು.
ಈ ಕಾರ್ಯಾಚರಣೆ ಕುರಿತು ಮಾತನಾಡಿದ ಅವರು, ಡಿ.4ರಂದು ನಾನು, ಮಾವುತ ವಿನು ಹಾಗೂ ಕರ್ನಾಟಕ ಭೀಮ ಆನೆ ಮಾವುತ ಗುಂಡ ಅರ್ಜುನನ ಮೇಲಿದ್ದೆವು. ಪ್ರಶಾಂತ್ ಸಾಕಾನೆ ಮೇಲೆ ಕೊಡಗಿನ ಡಿಆರ್‌ಎಫ್ಒ ರಂಜನ್ ಇದ್ದರು. ವಿಕ್ರಾಂತ್ ಹೆಸರಿನ ಆನೆ ಹಾಗೂ ಮತ್ತೂಂದು ಸಲಗ ಸೇರಿ ಎರಡು ಆನೆಗಳ ಸೆರೆಗೆ ನಿರ್ಧರಿಸಲಾಗಿತ್ತು. ವಿಕ್ರಾಂತ್ ಆನೆ ಎದುರಾದರೆ ನಾನು ಹಾಗೂ ಇನ್ನೊಂದು ಆನೆ ಎದುರಾದರೆ ರಂಜನ್ ಅರಿವಳಿಕೆ ನೀಡಲು ನಿರ್ಧರಿಸಲಾಗಿತ್ತು. ಅದರಂತೆ ನಾವು ಕಾಡಿನೊಳಗೆ ಪ್ರವೇಶಿಸಿದಾಗ ಆನೆ ಗುಂಪೊಂದು ಕಾಣಿಸಿತು. ಅದರಲ್ಲಿ ವಿಕ್ರಾಂತ್ ಆನೆ ಇರಲಿಲ್ಲ. ನಾವು 400 ಮೀ. ಮುಂದೆ ಹೋದಾಗ ಒಂದು ಆನೆ ಕಾಣಿಸಿತು. ಕಾಡಿನಲ್ಲಿ ಲಾಂಟಾನ ಹೆಚ್ಚಾಗಿದ್ದರಿಂದ ಆನೆಯ ಹಿಂಬದಿಯ ಸ್ವಲ್ಪ ಭಾಗ ಕಾಣುತ್ತಿದ್ದಾಗ ಅದು ಸಣ್ಣ ಆನೆ ಎಂದು ಭಾವಿಸಿದೆವು. ಅಲ್ಲಿರುವ ಆನೆ ನಮ್ಮ ಟಾರ್ಗೆಟ್ ಆನೆಯಾ? ಅದು ಸಲಗವೇ ಅಥವಾ ಹೆಣ್ಣಾನೆಯಾ ಎನ್ನುವುದು ಖಾತ್ರಿ ಆಗಬೇಕಿತ್ತು.
ಒಂಟಿಸಲಗ ಕೆಳಗೆ ಇತ್ತು. ಇದು ದೊಡ್ಡ ಆನೆ ಎಂದು ಖಾತ್ರಿ ಆದಾಗ ಅದನ್ನು ಸುತ್ತುವರಿದೆವು. ಇದನ್ನು ಡಾಟ್ ಮಾಡುವ ಬಗ್ಗೆ ರಂಜನ್ ಮತ್ತು ನಾವು ಮಾತಾಡಿಕೊಂಡೆವು. ನಾನು ಡಾಟ್ ಮಾಡುತ್ತೇನೆ ಎಂದು ಹೇಳಿ ನಾನು ಅರಿವಳಿಕೆ ಸಜ್ಜು ಮಾಡಿಕೊಂಡೆ. ಆಗ ಆನೆ ಏಕಾಏಕಿ ದಾಳಿ ಮಾಡಿತು. ಅದು ಅಭಿಮುಖವಾಗಿ ಬಂದಿದ್ದರಿಂದ ಮುಖಕ್ಕೆ ಡಾಟ್ ಮಾಡಲು ಆಗಲಿಲ್ಲ.
ಯಾವುದೇ ಆನೆಯ ಮುಖದ ಭಾಗಕ್ಕೆ ಇಂಜೆಕ್ಷನ್ ಹೊಡೆಯುವಂತಿಲ್ಲ. ಹಾಗೆ ಇಂಜೆಕ್ಟ್ ಆದರೆ ಆನೆ ಜೀವಕ್ಕೆ ಅಪಾಯವಿದೆ. ಹಾಗಾಗಿ ಆಗ ಡಾಟ್ ಮಾಡಲು ಆಗಲಿಲ್ಲ. ಏಕಾಏಕಿ ಅರ್ಜುನನ ಮೇಲೆ ಆನೆ ದಾಳಿ ಮಾಡಿದಾಗ ನಾವೆಲ್ಲ ಕೆಳಗೆ ಬಿದ್ದೆವು. ಈ ವೇಳೆಯಲ್ಲಿ ನನ್ನ ಕೈಯಲ್ಲಿದ್ದ ಅರಿವಳಿಕೆ ಟ್ರಿಗರ್ ಆಗಿ ಫೈರ್ ಆಗಿದೆ. ಅದು ಆಕಾಶದ ಕಡೆಗೆ ಹಾರಿ ಕೆಳಗೆ ಬೀಳುವಾಗ ಪ್ರಶಾಂತ್ ಕಾಲಿಗೆ ಬಿದ್ದಿದೆ. ಅದು ನನಗೆ ತಿಳಿಯಲಿಲ್ಲ. ಪ್ರಶಾಂತ್‌ಗೆ ಅರಿವಳಿಕೆ ಮದ್ದು ಬಿದ್ದ ಬಗ್ಗೆ ಗೊತ್ತಾದ ಕೂಡಲೇ ನಾನು ಓಡಿದೆ. ಅಷ್ಟರಲ್ಲಿ ಅರ್ಜುನ ಕಾಡಾನೆ ಜತೆ ಹೋರಾಡಿ ಅದನ್ನು ಓಡಿಸಿತು. ನಾವು ಪ್ರಶಾಂತ್ ಆನೆ ಬಳಿ ಬಂದೆವು. ಅಲ್ಲಿ ರಿವರ್ಸ್ ಇಂಜೆಕ್ಷನ್ ಕೊಡುವ ವೇಳೆಗೆ ಕಾಡಾನೆ ಮತ್ತೆ ಬಂದು ಕಾದಾಟಕ್ಕೆ ಬಿದ್ದಿದೆ.
ಮಾವುತ ವಿನು ಕೂಡ ನನ್ನೊಟ್ಟಿಗೆ ಇದ್ದಿದ್ದರಿಂದ ಅಲ್ಲಿ ಮತ್ತೂಬ್ಬ ಹುಡುಗ ಅರ್ಜುನನ ಮೇಲಿದ್ದ. ನಾವು ವಾಪಸ್ ಓಡುವ ವೇಳೆಗೆ ಅಲ್ಲಿ ಎರಡೂ ಆನೆಗಳ ನಡುವೆ ಜಗಳ ಶುರುವಾಗಿತ್ತು. ನಾನು ಮತ್ತೂಂದು ಸುತ್ತು ಅರಿವಳಿಕೆ ಲೋಡ್ ಮಾಡಿ ಕಾಡಾನೆಗೆ ಹೊಡೆದೆ. ಆದರೆ ಆ ಆನೆ ಕೆಳಗೆ ಬೀಳಲಿಲ್ಲ. ಅಷ್ಟೊತ್ತಿಗೆ ಅರ್ಜುನನಿಗೆ ಗಂಭೀರವಾಗಿ ಗಾಯವಾಗಿ ಕೆಳಗೆ ಬಿದ್ದಿದ್ದ. ಈ ಆನೆಗಳ ಕಾಳಗ ಶುರುವಾದಾಗ ಬೇರೆ ಆನೆಗಳು ಹೆದರಿ ಓಡಿವೆ. ಅರ್ಜುನ ಪ್ರಾಣ ತೆತ್ತು ನಮ್ಮನ್ನ ಉಳಿಸಿ¨ªಾನೆ ಎಂದು ಭಾವುಕರಾದರು.