Advertisement

ವನಿತಾ ಹಾಕಿ: ರಾರಾಜಿಸಲಿ ರಾಣಿ ಬಳಗ

12:53 AM Aug 04, 2021 | Team Udayavani |

ಟೋಕಿಯೊ: ಮೊದಲ ಸಲ ಒಲಿಂಪಿಕ್ಸ್‌ ಸೆಮಿಫೈನಲ್‌ ಪ್ರವೇಶಿಸಿ ಒಂದು ಹಂತದ ಇತಿಹಾಸ ನಿರ್ಮಿಸಿದ ಭಾರತದ ವನಿತೆಯರು ಬುಧವಾರ ಮತ್ತೂಂದು ಮಹೋನ್ನತ ಕ್ಷಣವನ್ನು ಎದುರು ನೋಡುತ್ತಿದ್ದಾರೆ. ಈ ಮುಖಾಮುಖೀಯಲ್ಲಿ ಬಲಿಷ್ಠ, ಆದರೆ ಸೋಲಿಸಲು ಅಸಾಧ್ಯವಲ್ಲದ ಆರ್ಜೆಂಟೀನಾ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಗೆದ್ದರೆ ಮತ್ತೂಂದು ಇತಿಹಾಸದೊಂದಿಗೆ ಟೋಕಿಯೋದಲ್ಲಿ ಪುರುಷರನ್ನು ಮೀರಿಸಿದ ಮಹಾನ್‌ ಸಾಧನೆಗೆ ಭಾಜನರಾಗಲಿದ್ದಾರೆ.

Advertisement

ಸತತ 3 ಪಂದ್ಯಗಳಲ್ಲಿ ಸೋತು ನಿರ್ಗಮನ ಬಾಗಿಲಿಗೆ ಬಂದು ನಿಂತಿದ್ದ ರಾಣಿ ರಾಮ್‌ಪಾಲ್‌ ಬಳಗ ಸೆಮಿಫೈನಲ್‌ ತಲುಪಿದ್ದೇ ಒಂದು ಪವಾಡ ಹಾಗೂ ಅಚ್ಚರಿ. ಗ್ರೂಪ್‌ ಹಂತದ 4ನೇ ಸ್ಥಾನದೊಂದಿಗೆ ನಾಕೌಟ್‌ ಪ್ರವೇಶಿಸಿದ ಬಳಿಕ ಕ್ವಾರ್ಟರ್‌ ಫೈನಲ್‌ನಲ್ಲಿ 3 ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯವನ್ನು ಹೊರಕ್ಕೆ ದಬ್ಬಿದ್ದು ಇನ್ನೊಂದು ಸಾಹಸ. ಸೆಮಿಫೈನಲ್‌ನಲ್ಲಿ ಅದೃಷ್ಟ ಹಾಗೂ ಸಾಧನೆ ಒಟ್ಟುಗೂಡಬೇಕಿದೆ.

ಒಲಿಂಪಿಕ್ಸ್‌ ಸಾಧನೆಯಿಂದ ವಿಶ್ವ ರ್‍ಯಾಂಕಿಂಗ್‌ನಲ್ಲಿ ಸರ್ವಶ್ರೇಷ್ಠ 7ನೇ ಸ್ಥಾನಕ್ಕೆ ನೆಗೆದದ್ದು ಕೂಡ ಭಾರತಕ್ಕೊಂದು ಬೂಸ್ಟ್‌ ಎಂದೇ ವಿಶ್ಲೇಷಿಸಲಾಗುತ್ತಿದೆ. ಆರ್ಜೆಂಟೀನಾ ಭಾರತಕ್ಕಿಂತ 5 ಸ್ಥಾನ ಮೇಲಿದೆ.

ಚಿನ್ನ ಗೆಲ್ಲದ ಆರ್ಜೆಂಟೀನಾ:

ಆರ್ಜೆಂಟೀನಾ ಈ ವರೆಗೆ ಒಲಿಂಪಿಕ್ಸ್‌ ಚಿನ್ನ ಗೆದ್ದಿಲ್ಲ. 2000ದ ಸಿಡ್ನಿ ಹಾಗೂ 2012ರ ಲಂಡನ್‌ ಒಲಿಂಪಿಕ್ಸ್‌ ನಲ್ಲಿ ಬೆಳ್ಳಿ ಜಯಿಸಿತ್ತು. 2012ರ ಬಳಿಕ ಸೆಮಿಫೈನಲ್‌ ಪ್ರವೇಶಿಸುತ್ತಿರುವುದು ಇದೇ ಮೊದಲು. ರಿಯೋ ಕಂಚಿನ ಪದಕ ವಿಜೇತ ಜರ್ಮನಿಯನ್ನು 3-0 ಅಂತರದಿಂದ ಮಣಿಸುವ ಮೂಲಕ ಆರ್ಜೆಂಟೀನಾ ಈ ಹಂತಕ್ಕೆ ಬಂದಿದೆ.

Advertisement

ಆಸೀಸ್‌ಗೆ ಆಘಾತವಿಕ್ಕಿದ ಸ್ಫೂರ್ತಿ : ಒಲಿಂಪಿಕ್ಸ್‌ ಅಭ್ಯಾಸಕ್ಕಾಗಿ ಈ ವರ್ಷಾರಂಭದಲ್ಲಿ ಭಾರತ ತಂಡ ಆರ್ಜೆಂಟೀನಾ ಪ್ರವಾಸ ಕೈಗೊಂಡು 7 ಪಂದ್ಯಗಳನ್ನಾಡಿತ್ತು. ಮೊದಲೆರಡು ಪಂದ್ಯಗಳಲ್ಲಿ ಎದುರಾದದ್ದು ಆರ್ಜೆಂಟೀನಾ ಯುವ ತಂಡ. ಇವೆರಡನ್ನೂ ಭಾರತ ಡ್ರಾ ಮಾಡಿಕೊಂಡಿತು (2-2, 1-1). ಬಳಿಕ ಆರ್ಜೆಂಟೀನಾ “ಬಿ’ ತಂಡದ ವಿರುದ್ಧ ಎರಡರಲ್ಲೂ ಸೋತಿತು (1-2, 2-3). ಬಳಿಕ ಸೀನಿಯರ್‌ ತಂಡದ ಎದುರು ಒಂದನ್ನು ಡ್ರಾ ಮಾಡಿಕೊಂಡಿತು, ಉಳಿದೆರಡರಲ್ಲಿ ಪರಾಭವಗೊಂಡಿತು (1-1, 0-2, 2-3). ಈ ಲೆಕ್ಕಾಚಾರದಂತೆ ಭಾರತಕ್ಕಿಂತ ಆರ್ಜೆಂಟೀನಾ ಹೆಚ್ಚು ಬಲಿಷ್ಠ.

ಆದರೆ ಬಲಾಡ್ಯ ಆಸ್ಟ್ರೇಲಿಯವನ್ನು ಬಡಿದಟ್ಟಿದ ಸ್ಫೂರ್ತಿಯೊಂದೇ ಭಾರತಕ್ಕೆ ಶಕ್ತಿವರ್ಧಕ ಟಾನಿಕ್‌ ಆಗಬಲ್ಲದು. ಅಂದಮಾತ್ರಕ್ಕೆ, ಯಾವ ಕಾರಣಕ್ಕೂ ಇಲ್ಲಿ ಮೈಮರೆಯುವಂತಿಲ್ಲ.

ಮೊದಲ ಸೆಮಿಫೈನಲ್‌ನಲ್ಲಿ ನೆದರ್ಲೆಂಡ್ಸ್‌- ಗ್ರೇಟ್‌ ಬ್ರಿಟನ್‌ ಮುಖಾಮುಖೀಯಾಗಲಿವೆ. ಈ ಪಂದ್ಯ ಬೆಳಗ್ಗೆ 7 ಗಂಟೆಗೆ ಆರಂಭವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next