Advertisement

ಕೈಗಾರಿಕೋದ್ಯಮಿಗಳ ನಯಾ ಪೈಸೆ ಸಾಲ ಮನ್ನಾ ಮಾಡಿಲ್ಲ: ಶಾ 

06:00 AM Feb 26, 2018 | Team Udayavani |

ಬೀದರ: ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೈಗಾರಿಕೋದ್ಯಮಿಗಳ ನಯಾ ಪೈಸೆ ಸಾಲ ಮನ್ನಾ ಮಾಡಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಈ ವಿಷಯದಲ್ಲಿ ಸುಳ್ಳು ಹೇಳಿ ಅಪಪ್ರಚಾರ ಮಾಡಿದ್ದು, ಸಾಲ ಮನ್ನಾದ ದಾಖಲೆಗಳು ಕೊಟ್ಟರೆ ನಾನು ಕರ್ನಾಟಕದ ಜನತೆಯಲ್ಲಿ ಬಹಿರಂಗವಾಗಿ ಕ್ಷಮೆ ಕೋರುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸವಾಲು ಹಾಕಿದರು.

Advertisement

ಹುಮನಾಬಾದ್‌ನಲ್ಲಿ ಶನಿವಾರ ನಡೆದ ಕಬ್ಬು ಬೆಳೆಗಾರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ರೈತರ ಪ್ರಶ್ನೆಗೆ ಉತ್ತರಿಸಿದ ಅವರು, ಕೈಗಾರಿಕೋದ್ಯಮಿಗಳ ತೆರಿಗೆ ಸಹ ಮನ್ನಾ ಮಾಡಿಲ್ಲ. ಕೇವಲ ತೆರಿಗೆಯಲ್ಲಿ ರಿಯಾಯಿತಿ ಕೊಡಲಾಗಿದೆ. ಕೈಗಾರಿಕೆ ಅಂದರೆ ಅಲ್ಲಿ ರೈತರ ಉತ್ಪನ್ನಗಳು ಸಹ ಸೇರಿವೆ. ರೈತರಿಗೆ ಯಾವುದೇ ತೆರಿಗೆ ಇಲ್ಲವಾದ್ದರಿಂದ ಮನ್ನಾ ಮಾಡುವ ಪ್ರಶ್ನೆಯೇ ಬಾರದು. ಇನ್ನು ಅನ್ನದಾತರ ಸಾಲ ಮನ್ನಾ ಸುಲಭದ ಮಾತಲ್ಲ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು.

ಕೇಂದ್ರದ ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ಫಸಲು ವಿಮಾ ಯೋಜನೆಯನ್ನು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಸ್ವರೂಪದಲ್ಲಿ ಜಾರಿಗೆ ತರಲಾಗುತ್ತಿದೆ. ಈಗಾಗಲೇ ಬದಲಾವಣೆ ಅಂಶಗಳ ಕುರಿತಂತೆ ಸಂಸದರುಗಳಿಂದ ಸಲಹೆ ಪಡೆಯಲಾಗಿದೆ. ಈ ಸಂಬಂಧ ಸಮಿತಿಯೊಂದನ್ನು ರಚನೆ ಮಾಡಲಾಗಿದ್ದು, ಮೂರ್‍ನಾಲ್ಕು ತಿಂಗಳಲ್ಲಿ ಹೊಸ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು. ಇದರಿಂದ ದೇಶದ ಪ್ರತಿ ರೈತರಿಗೆ ಬೆಳೆದ ಬೆಳೆಗೆ ವಿಮೆ ಮತ್ತು ಕಡಿಮೆ ಪ್ರಿಮಿಯಂ ಭರಿಸುವ ವ್ಯವಸ್ಥೆ ಆಗಲಿದೆ ಎಂದರು.

ದೇಶದಲ್ಲಿ ಅಧಿಕಾರ ನಡೆಸಿರುವ ಯಾವುದೇ ಸರ್ಕಾರ ಈವರೆಗೆ ರೈತರು ಬೆಳೆದ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿಲ್ಲ. ಆದರೆ, ಬಿಜೆಪಿ ಸರ್ಕಾರ ಬೆಳೆಗಳ ಉತ್ಪಾದನಾ ದರ ಹೆಚ್ಚಳ ಮಾಡುವುದರ ಜತೆಗೆ ಬೆಂಬಲ ಬೆಲೆಯಲ್ಲಿ ಖರೀದಿಯನ್ನು ಸಹ ಮಾಡಿದೆ. ಈ ಹಿಂದೆ ಕಾಂಗ್ರೆಸ್‌ ಸರ್ಕಾರ ಬೆಳೆಗಳನ್ನು ಹೊರ ದೇಶಕ್ಕೆ ರಫು¤ ಮಾಡಿ ಹಣ ಕೊಳ್ಳೆ ಹೊಡೆಯುತ್ತಿತ್ತು ಎಂದರು.

ಸ್ವಾಮಿನಾಥನ ಆಯೋಗದ ವರದಿ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಆಯೋಗದ ಸಲಹೆಯಂತೆ ಮುಂಗಾರು-ಹಿಂಗಾರು ಬೆಳೆಗಳಿಗೆ ಅದರ ಉತ್ಪಾದನಾ ವೆಚ್ಚಕ್ಕಿಂತ ಒಂದೂವರೆ ಪಟ್ಟು ಹೆಚ್ಚಿನ ಬೆಂಬಲ ಬೆಲೆಯನ್ನು ರೈತರಿಗೆ ನೀಡುವುದಾಗಿ ಈಗಾಗಲೇ ವಿತ್ತ ಸಚಿವರು ತಮ್ಮ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಜರುಗಿರುವ ಬೃಹತ್‌ ರೈತ ಸಮಾವೇಶದಲ್ಲಿ ರೈತರಿಗಾಗಿ ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದರು.

Advertisement

ಗುರುದ್ವಾರಕ್ಕೆ ಅಮಿತ್‌ ಶಾ ದಂಪತಿ ಭೇಟಿ
ಬೀದರ: ನಗರದಲ್ಲಿರುವ ಸಿಖ್‌ ಧರ್ಮಿಯರ ಆರಾಧ್ಯದೇವ ಗುರುನಾನಕರ ಮಂದಿರಕ್ಕೆ (ಗುರುದ್ವಾರ) ರವಿವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಭೇಟಿ ನೀಡಿ ದರ್ಶನ ಪಡೆದರು.

ಶನಿವಾರ ಸಂಜೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೀದರಗೆ ಆಗಮಿಸಿದ್ದ ಅಮಿತ್‌ ಶಾ, ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ನರಸಿಂಹ ಸ್ವಾಮಿ ಝರಣಾ ಮಂದಿರ ಭೇಟಿ ಕೈ ಬಿಟ್ಟು, ಗುರುದ್ವಾರಕ್ಕೆ ತೆರಳಿದರು. ಒಂದೂವರೆ ಗಂಟೆ ತಡವಾಗಿ ಆಗಮಿಸಿದ ಅವರನ್ನು ಗುರುನಾನಕ ಪ್ರಬಂಧಕ ಕಮಿಟಿ ಅಧ್ಯಕ್ಷ ಬಲಬೀರ್‌ ಸಿಂಗ್‌ ಹೂಗುತ್ಛ ನೀಡಿ ಸ್ವಾಗತಿಸಿದರು. ಅಮಿತ್‌ ಶಾ ಅವರಿಗೆ ಧರ್ಮಪತ್ನಿ ಸೋನಲ್‌ ಸಾಥ್‌ ನೀಡಿದರು.

ಗುರುದ್ವಾರಕ್ಕೆ ಆಗಮಿಸಿದ ಶಾ ನೇರವಾಗಿ ಪ್ರಬಂಧಕ ಕಮಿಟಿಯ ಕಚೇರಿಗೆ ತೆರಳಿ ಹಸ್ತಾಕ್ಷರ ಮಾಡಿದರು. ಗುರುದ್ವಾರದ ಹಿನ್ನೆಲೆಯ ಮಾಹಿತಿಯನ್ನು ಮುಖಂಡರಿಂದ ಪಡೆದುಕೊಂಡರು. ನಂತರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಸಿಖ್‌ ಧರ್ಮ ಗುರುಗಳು ಮತ್ತು ಅನುಯಾಯಿಗಳ ಸಂದೇಶಗಳುಳ್ಳ ಭಾವಚಿತ್ರಗಳನ್ನು ಶಾ ವೀಕ್ಷಿಸಿ ಮಾಹಿತಿ ಪಡೆದುಕೊಂಡು, ಪ್ರಸಾದ ಸ್ವೀಕರಿಸಿದರು. ಈ ವೇಳೆ ಶಾ ದಂಪತಿಗೆ ಶಾಲು ಹೊದಿಸಿ, ಖಡ್ಗ ನೀಡಿ ಸನ್ಮಾನಿಸಲಾಯಿತು. ತದನಂತರ ಗುರುನಾನಕರು ತಮ್ಮ ಪಾದ ಸ್ಪರ್ಶದಿಂದ ನೀರು ಚಿಮ್ಮಿಸಿದ್ದ ಅಮೃತ ಕುಂಡದ ದರ್ಶನ ಮಾಡಿ, ನೀರು ಸೇವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next