ಜಗಳೂರು: ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಕಾಡು ಹಂದಿಗಳ ದಾಳಿಗೆ ಅಂದಾಜು 300ಕ್ಕೂ ಹೆಚ್ಚು ಅಡಕೆ ಸಸಿಗಳು ನಾಶವಾಗಿವೆ. ರೈತ ಕೆ.ಎಸ್. ಬಸವರಾಜಪ್ಪ ಎಂಬವರ ಕಳೆದ ತಿಂಗಳಷ್ಟೇ ತಮ್ಮ ಒಂದು ಎಕರೆ ಜಮೀನಿನಲ್ಲಿ ಅಡಕೆ ಸಸಿಗಳನ್ನು ನೆಟ್ಟಿದ್ದರು. ಅವು ಬೇರು ಬಿಟ್ಟು ನಳನಳಿಸುವ ಹಂತದಲ್ಲಿರುವಾಗ ಕಾಡು ಹಂದಿಗಳು ದಾಳಿ ನಡೆಸಿ ಗಿಡದ ಬುಡವನ್ನು ಬಗೆದು ಅದರಲ್ಲಿರುವ ತೊಗಟೆಗಳನ್ನು ತಿಂದು ಹಾಕಿವೆ. ಇನ್ನು ಸುತ್ತಮುತ್ತಲಿನಲ ಹೊಲದ ರೈತರಾದ ರವಿಕುಮಾರ್ ಮತ್ತು ಕೆ.ಬಿ. ಸೋಮನಗೌಡ ಇವರ ಹೊಲದಲ್ಲೂ ಅಡಿಕೆ ಸಸಿಗಳನ್ನು ನಾಶಮಾಡಿವೆ.
ಆಹಾರಕ್ಕಾಗಿ ಪರದಾಟ
ಬೇಸಿಗೆ ಹೆಚ್ಚಾಗುತ್ತಿದ್ದು ಕಾಡು ಹಂದಿಗಳಿಗೆ ಪ್ರಸ್ತುತ ಆಹಾರ ಪದಾರ್ಥಗಳಿಗೆ ಪರದಾಡುತ್ತಿವೆ. ಪ್ರತಿವರ್ಷ ಬೇಸಿಗೆಯಲ್ಲಿ ಶೇಂಗಾ, ಮೆಕ್ಕೆಜೋಳ ಬಿತ್ತನೆ ಮಾಡುತ್ತಿದ್ದ ರೈತರು. ಕಳೆದ ವರ್ಷ ಮಳೆಗಾಲ ಹೆಚ್ಚಾಗಿರುವ ಕಾರಣ ಅಡಕೆ ಸಸಿಗಳ ನಾಟಿ ಮಾಡಿಸುತ್ತಿದ್ದಾರೆ. ಪ್ರತಿವರ್ಷ ಮೆಕ್ಕೇಜೋಳ, ಶೇಂಗಾ ಫಸಲನ್ನು ತಿಂದು ಹಾಳು ಮಾಡುತ್ತಿದ್ದ ಹಂದಿಗಳಿಗೆ ಈ ಬಾರಿ ಆಹಾರದ ಕೊರತೆ ಹೆಚ್ಚಾಗಿ ಅಡಕೆ ಸಸಿಗಳ ತೊಗಡೆಯನ್ನು ತಿಂದು ನಾಶಗೊಳಿಸುತ್ತಿವೆ. ಒಮ್ಮೆಲೆ ಗುಂಪು ಗುಂಪಾಗಿ ಬರುವ ಹಂದಿಗಳು ಅಡಕೆ ಗಿಡಗಳನ್ನು ಸರ್ವನಾಶ ಮಾಡಿ ಹೋಗಿವೆ. ಲಕ್ಷಾಂತರ ರೂ. ಬಂಡವಾಳ ಹಾಕಿರುವ ರೈತರು ಕಾಡು ಹಂದಿದಾಳಿಗೆ ರೋಸಿ ಹೋಗಿದ್ದಾರೆ.
ಕಳೆದ ತಿಂಗಳು ಸಸಿಗಳನ್ನು ನಾಟಿ ಮಾಡಿದ್ದೆವು. ಗಿಡಗಳು ಚಿಗುರಲಾರಂಭಿಸಿದ್ದವು. ಆದರೆ ಕಾಡುಹಂದಿಗಳ ದಾಂದಲೆಯಿಂದ ಹೊಲದಲ್ಲಿ 200 ಗಿಡಗಳನ್ನು ತಿಂದು ನಾಶಮಾಡಿವೆ. ಸಾವಿರಾರು ರೂಪಾಯಿ ನಷ್ಟವಾಗಿದೆ. ನಮ್ಮ ಅಕ್ಕಪಕ್ಕದ ಹೊಲಗಳಲ್ಲೂ ಹಂದಿಗಳು ದಾಳಿ ಮಾಡುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ನೀಡಬೇಕು
– ಕೆ.ಎಸ್. ಬಸವರಾಜಪ್ಪ