Advertisement

ರಾಜ್ಯದ ಎರಡು ಮಹತ್ವದ ಹುದ್ದೆ:ನಾರಿಯರಿಗೆ ಟಾಪ್‌ ಪೋಸ್ಟ್‌ ?  

10:44 AM Oct 19, 2017 | Team Udayavani |

ಬೆಂಗಳೂರು: ರಾಜ್ಯ ಸರಕಾರದ ಎರಡು ಮಹತ್ವದ ಹುದ್ದೆಗಳಿಗೆ ಇಬ್ಬರು ಮಹಿಳೆಯರ ಹೆಸರುಗಳು ಮುಂಚೂಣಿಯಲ್ಲಿದ್ದು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಹುದ್ದೆಗೆ ಏಕಕಾಲಕ್ಕೆ ಇಬ್ಬರೂ ಮಹಿಳೆಯರೇ ನೇಮಕ ಮಾಡುವ ಅವಕಾಶ ರಾಜ್ಯ ಸರ್ಕಾರಕ್ಕೆ ಒದಗಿ ಬಂದಿದೆ.

Advertisement

ಅಕ್ಟೋಬರ್‌ 31 ರಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ರೂಪಕ್‌ ಕುಮಾರ್‌ ದತ್ತಾ ನಿವೃತ್ತಿ ಹೊಂದಲಿದ್ದು, ಅವರ ನಂತರ 1983 ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಜಿಪಿ ನೀಲಮಣಿ ರಾಜು ಸೇವಾ ಹಿರಿತನದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅವರ ಸೇವಾ ಅವಧಿ ಇನ್ನೂ ಮೂರು ವರ್ಷ ಇದ್ದು, 2020 ಜನವರಿ 17 ರವರೆಗೂ ಸೇವಾವಧಿ ಇದೆ. ಅವರ ನಂತರ  1984 ರ ಬ್ಯಾಚ್‌ನ ಸಿಐಡಿ ಡಿಜಿ ಎಚ್‌.ಸಿ. ಕಿಶೋರ ಚಂದ್ರ ಇದ್ದು, ಅವರ ಸೇವಾವಧಿ ಎರಡೂ ವರೆ ವರ್ಷ ಇದ್ದು, ಎಸಿಬಿ ಮುಖ್ಯಸ್ಥ ಎಂ.ಎನ್‌. ರೆಡ್ಡಿ ಕೂಡ  ಪೊಲಿಸ್‌ ಮುಖ್ಯಸ್ಥರ ಹುದ್ದೆಯ ಪ್ರಮುಖ ಆಕಾಂಕ್ಷಿಯಾಗಿದ್ದಾರೆ.

ಕಿಶೋರ ಚಂದ್ರ ಮೈಸೂರು ಮೂಲದವರಾಗಿದ್ದು, ಒಕ್ಕಲಿಗ ಸಮುದಾಯದವರಾಗಿದ್ದಾರೆ. ಹೀಗಾಗಿ ಅವರನ್ನೇ ರಾಜ್ಯದ ಪೊಲಿಸ್‌ ಮುಖ್ಯಸ್ಥರ ಹುದ್ದೆಗೆ ನೇಮಕ ಮಾಡುವಂತೆ ಒಕ್ಕಲಿಗ ಸಮುದಾಯದ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಎಸಿಬಿ ಮುಖ್ಯಸ್ಥ ಎಂ.ಎನ್‌. ರೆಡ್ಡಿ ಪರವಾಗಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಆದರೆ, ಈ ಹಿಂದೆಯೇ ಪೊಲಿಸ್‌ ಮಹಾನಿರ್ದೇಶಕರ ಹುದ್ದೆ ನೀಡುವ ಕಾರಣಕ್ಕಾಗಿಯೇ ಕೇಂದ್ರ ಸೇವೆಯಿಂದ ರಾಜ್ಯ ಸೇವೆಗೆ ನೀಲಮಣಿ ರಾಜು ಅವರನ್ನು ವಾಪಸ್‌ ಕರೆಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸೇವಾ ಹಿರಿತನದ ಆಧಾರದಲ್ಲಿಯೇ ಪೊಲಿಸ್‌ ಮುಖ್ಯಸ್ಥರ ನೇಮಕ ಮಾಡುವ ಆಲೋಚನೆ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ರಾಜ್ಯ ಸರ್ಕಾರದ ಆಡಳಿತ ಮುಖ್ಯಸ್ಥರಾದ ಮುಖ್ಯ ಕಾರ್ಯದರ್ಶಿ ಸುಭಾಸ್‌ ಚಂದ್ರ ಕುಂಟಿಯಾ ನವೆಂಬರ್‌ 11ಕ್ಕೆ ನಿವೃತ್ತಿಯಾಗಲಿದ್ದು, ಆ  ಹುದ್ದೆಗೂ 1981 ರ ಐಎಎಸ್‌ ಬ್ಯಾಚ್‌ನ ರತ್ನ ಪ್ರಭಾ ಅವರ ಹೆಸರು ಮುಂಚೂಣಿಯಲ್ಲಿದೆ. ಆರು ತಿಂಗಳು ಮಾತ್ರ ಅವರ ಸೇವಾವಧಿ ಉಳಿದಿದ್ದು, ಮಾರ್ಚ್‌ 13 ಕ್ಕೆ ನಿವೃತ್ತಿ ಹೊಂದಲಿದ್ದಾರೆ. ಅವರ ನಂತರದ ಸ್ಥಾನದಲ್ಲಿ 1982 ನೇ ಬ್ಯಾಚ್‌ನ ಸಧ್ಯ ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಎಸ್‌.ಕೆ. ಪಟ್ಟನಾಯಕ್‌ ಅವರ ಹೆಸರೂ ಕೂಡ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಕೇಳಿ ಬರುತ್ತಿದ್ದು, ಆದರೆ, ದಲಿತ ಸಮುದಾಯಕ್ಕೆ ಸೇರಿರುವ ಮತ್ತು ಮಹಿಳೆಯಾಗಿರುವ ಕಾರಣಕ್ಕೆ ರತ್ನಪ್ರಭಾ ಅವರನ್ನೆ ಪರಿಗಣಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಹೀಗಾಗಿ ಎರಡೂ ಅತ್ಯುನ್ನತ ಹುದ್ದೆಗಳಿಗೆ ಮಹಿಳೆಯರೇ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next